ಮೀನುಗಾರರ ಬೇಡಿಕೆಗೆ ಕೇಂದ್ರ ಅಸ್ತು

ಮಂಗಳೂರು/ಉಡುಪಿ: ಬಜೆಟ್‌ನಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಘೋಷಿಸುವ ಮೂಲಕ ಕರಾವಳಿಯ ಮೀನುಗಾರರ ದಶಕಗಳ ಹಿಂದಿನ ಬೇಡಿಕೆಗೆ ಕೇಂದ್ರ ಸರ್ಕಾರ ಪೂರಕವಾಗಿ ಸ್ಪಂದಿಸಿದೆ. ಬೀಡಿ ಕಾರ್ಮಿಕರು ಸಹಿತ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ, ಆದಾಯ ತೆರಿಗೆ ಮಿತಿ ಹೆಚ್ಚಳ, ರೈತರ ಖಾತೆಗೆ ನೇರ 6 ಸಾವಿರ ರೂ. ಜಮಾ ಮುಂತಾದ ಕೇಂದ್ರದ ಯೋಜನೆಗಳಿ ಕರಾವಳಿ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.

ಮೀನುಗಾರಿಕೆ ಮತ್ತು ಪಶುಸಂಗೋಪನೆ ಕೇಂದ್ರದ ಕೃಷಿ ಇಲಾಖೆಯ ಸ್ವಾಮ್ಯದಲ್ಲಿತ್ತು. ಮೀನುಗಾರಿಕೆಯನ್ನು ಕೃಷಿ ಇಲಾಖೆಯಿಂದ ಬೇರ್ಪಡಿಸಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆನ್ನುವುದು ದೇಶದ ವಿವಿಧ ರಾಜ್ಯಗಳ ಮೀನುಗಾರರ ಪ್ರಬಲ ಬೇಡಿಕೆಯಾಗಿತ್ತು. ಕರ್ನಾಟಕ ಕರಾವಳಿ ಮೀನುಗಾರರು ಕೂಡ ಕೇಂದ್ರ ಸರ್ಕಾರವನ್ನು ಈ ಬಗ್ಗೆ ಒತ್ತಾಯಿಸುತ್ತಲೇ ಬಂದಿದ್ದರು. ಈಗ ಮೋದಿ ಸರ್ಕಾರ ಮೀನುಗಾರರ ಬೇಡಿಕೆ ಈಡೇರಿಸಿದೆ ಎಂದು ಬಿಜೆಪಿ ನಾಯಕರೂ ಹರ್ಷ ವ್ಯಕ್ತಪಡಿಸಿದ್ದಾರೆ.

ಪಶು ಸಂಗೋಪನೆ ಮತ್ತು ಮೀನುಗಾರಿಕೆಗೆ ಶೇ.2ರ ಬಡ್ಡಿ ನೆರವಿನ ಸಾಲಸೌಲಭ್ಯ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ದೊರೆಯಲಿದ್ದು, ನಿಗದಿತ ಸಮಯದೊಳಗೆ ಪಾವತಿಸಿದವರಿಗೆ ಶೇ.3 ಹೆಚ್ಚುವರಿ ಬಡ್ಡಿ ರಿಯಾಯಿತಿ ಸಿಗಲಿರುವ ಕೊಡುಗೆಯೂ ಪ್ರಕಟಗೊಂಡಿದೆ.

ವಿಶ್ವದಲ್ಲೇ ದ್ವಿತೀಯ: ಮೀನು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ದ್ವಿತೀಯ ಸ್ಥಾನದಲ್ಲಿದೆ. 1.43 ಕೋಟಿಗೂ ಅಧಿಕ ಮಂದಿ ಮೀನುಗಾರಿಕೆಯಿಂದ ಬದುಕು ಸಾಗಿಸುತ್ತಿದ್ದಾರೆ. ಕರ್ನಾಟಕದಲ್ಲಿ 320 ಕಿ.ಮೀ ಉದ್ದದ ಕರಾವಳಿ ಪ್ರದೇಶವಿದ್ದು, ದೇಶದ ಒಟ್ಟು ಮೀನು ಉತ್ಪಾದನೆಯಲ್ಲಿ ರಾಜ್ಯದ ಕೊಡುಗೆ ಶೇ.5.86ರಷ್ಟಿದೆ. ಒಳನಾಡು ಮೀನು ಉತ್ಪಾದನೆಯಲ್ಲಿ ಕರ್ನಾಟಕ 7ನೇ ಸ್ಥಾನದಲ್ಲಿದೆ. ಮೀನುಗಾರಿಕೆ ಇಲಾಖೆ ಕೃಷಿ ಇಲಾಖೆಯ ಸ್ವಾಮ್ಯದಲ್ಲಿದ್ದ ಕಾರಣ ಮೀನುಗಾರಿಕೆಗೆ ಹೆಚ್ಚಿನ ಅನುದಾನ ಸಾಧ್ಯವಾಗಿರಲಿಲ್ಲ. ಈಗ ಪ್ರತ್ಯೇಕ ಸಚಿವಾಲಯದ ಮೂಲಕ ಹೆಚ್ಚಿನ ಆದ್ಯತೆ ನಿರೀಕ್ಷಿಸಬಹುದಾಗಿದೆ ಎಂದು ಮೀನುಗಾರಿಕಾ ಅಭಿವೃದ್ದಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಶೆಟ್ಟಿ ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಅನುದಾನ ನಿರೀಕ್ಷೆ: ಸುಮಾರು 1700 ಕೋಟಿ ರೂ. ಮೌಲ್ಯದ ಕಡಲ ಉತ್ಪನ್ನಗಳನ್ನು ಪ್ರತಿವರ್ಷ ಕರ್ನಾಟಕದಿಂದ ರಫ್ತು ಮಾಡಲಾಗುತ್ತಿದೆ. ಮೀನುಗಾರಿಕೆಯಿಂದ ವಿದೇಶಿ ವಿನಿಮಯ ಹಾಗೂ ಉದ್ಯೊಗಾವಕಾಶದ ಸೃಷ್ಟಿಗೆ ವಿಪುಲ ಅವಕಾಶವಿದೆ. ಆದರೆ ಇದುವರೆಗೆ ಕೃಷಿ ಕ್ಷೇತ್ರದ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಿರ್ಲಕ್ಷಿಸಲ್ಪಟ್ಟಿತ್ತು.

ಕೃಷಿ ಮಂತ್ರಾಲಯದ ಅಧೀನದಲ್ಲಿ ಮೀನುಗಾರಿಕೆ ಇದ್ದುದರಿಂದ ಮೀನುಗಾರಿಕೆಗೆ ಸರ್ಕಾರ ಏನು ಮಾಡುತ್ತಿದೆ, ಯೋಜನೆಗಳೇನು, ಅನುದಾನಗಳೇನು ಎಂಬ ಕುರಿತು ಗೊಂದಲಗಳಿದ್ದವು. ಇತ್ತೀಚೆಗೆ ಪ್ರಧಾನಿ ಭೇಟಿಯಾದಾಗಲೂ ಪ್ರತ್ಯೇಕ ಸಚಿವಾಲಯ ಬೇಕೆಂದು ಬಲವಾದ ಮನವಿ ಮಾಡಿದ್ದೆವು. ಜಿಎಸ್‌ಟಿಯಿಂದ ಮೀನುಗಾರಿಕೆ ಹೊರಗಿಡುವುದು, ಲೀಟರ್ ಡೀಸೆಲ್‌ಗೆ ವಿಧಿಸುವ 8 ರೂ. ರೋಡ್‌ಸೆಸ್ ರದ್ದು ಬೇಡಿಕೆ ಇದ್ದು, ಈಡೇರುವ ವಿಶ್ವಾಸದಲ್ಲಿದ್ದೇವೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.
ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಸ್ಥಾಪನೆ, ಪಶುಸಂಗೋಪನೆ ಜತೆಗೆ ಮೀನುಗಾರಿಕೆಗೂ ಶೇ.2 ಬಡ್ಡಿ ಸಾಲ ಸೌಲಭ್ಯ, 60 ವರ್ಷ ಮೇಲ್ಪಟ್ಟ ಮೀನುಗಾರರಿಗೆ ತಲಾ 3 ಸಾವಿರ ಪಿಂಚಣಿ ಮತ್ತಿತರ ಸೌಲಭ್ಯ ಮೀನುಗಾರರಿಗೆ ಶಕ್ತಿ ತಂದಿದೆ ಎಂದು ಅಖಿಲ ಭಾರತ ಮೀನುಗಾರರ ವೇದಿಕೆ ಸಂಘಟನಾ ಪ್ರಧಾನ ಕಾರ್ಯದರ್ಶಿ, ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ ಅಭಿಪ್ರಾಯಪಟ್ಟಿದ್ದಾರೆ.

ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಆಗಿದ್ದರಿಂದ, ಮೀನುಗಾರರ ಬಹುಕಾಲದ ಇನ್ನೊಂದು ಬೇಡಿಕೆಯಾದ ಪಶ್ಚಿಮ ಕರಾವಳಿ ಏಕರೂಪ ಮೀನುಗಾರಿಕೆ ನೀತಿ ಜಾರಿಗೆ ಅನುಕೂಲವಾಗಲಿದೆ ಎಂದು ಮಲ್ಪೆ ಮೀನುಗಾರ ಮುಖಂಡರು ತಿಳಿಸಿದ್ದಾರೆ. ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಕೇರಳ, ಗೋವಾ ಏಕರೂಪ ಮೀನುಗಾರಿಕೆ ವ್ಯಾಪ್ತಿಗೆ ಒಳಪಟ್ಟಲ್ಲಿ ಮೀನುಗಾರರ ಭದ್ರತೆ ಮತ್ತು ಸಮಾನ ಆರ್ಥಿಕ ಸುಧಾರಣೆಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೀಡಿ ಕಾರ್ಮಿಕರಿಗೆ ವರದಾನ: ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದ್ದು, ಕರಾವಳಿಯ ಬೀಡಿ ಕಾರ್ಮಿಕರಿಗೆ ವರದಾನವಾಗಲಿದೆ. ರಾಜ್ಯದಲ್ಲಿ 2.47 ಲಕ್ಷ ಮಿಕ್ಕಿ ಬೀಡಿ ಕಾರ್ಮಿಕರಿದ್ದು, ದ.ಕ. ಜಿಲ್ಲೆಯಲ್ಲಿ ಅತೀ ಹೆಚ್ಚು 1.89 ಲಕ್ಷ ಮಂದಿ ಬೀಡಿ ಉದ್ಯಮ ಆಶ್ರಯಿಸಿದ್ದಾರೆ. ಉಡುಪಿಯಲ್ಲಿ 38 ಸಾವಿರ ಮಂದಿ ಕಾರ್ಮಿಕರಿದ್ದಾರೆ. ಅಸಂಘಟಿತ ವಲಯದಲ್ಲಿ ರಿಕ್ಷಾವಾಲಾಗಳು, ಬೀದಿ ವ್ಯಾಪಾರಸ್ಥರು, ಕಟ್ಟಡ ಕಾರ್ಮಿಕರು, ಕೃಷಿ ಕೂಲಿಗಾರರು, ಚಿಂದಿ ಆಯುವವರು ಸೇರಿದ್ದಾರೆ. ‘ಬೀಡಿ ಕಾರ್ಮಿಕರು, ರಿಕ್ಷಾ ಚಾಲಕರು ಮೊದಲಾದ ಅಸಂಘಟಿತ ಕಾರ್ಮಿಕ ವಲಯದವರ ಬದುಕಿಗೆ ಭದ್ರತೆ ಬಂದಿದೆ. ಆದಾಯ ತೆರಿಗೆ ಮಿತಿ 2.5 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ತೆರಿಗೆ ಏರಿಸಿರುವುದರಿಂದ ಮಧ್ಯಮ ವರ್ಗಕ್ಕೆ ಹೆಚ್ಚಿನ ಅನುಕೂಲವಾಗಿದೆ. ಸಣ್ಣ, ಪುಟ್ಟ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು, ಕಾರ್ಮಿಕರು ಆದಾಯ ತೆರಿಗೆ ಬಗ್ಗೆ ನಿಶ್ಚಿಂತರಾಗಿರಬಹುದು. ಹೆರಿಗೆ ರಜೆ 26 ವಾರಕ್ಕೆ ಏರಿಸಿರುವುದರಿಂದ ದುಡಿಯುವ ಮಹಿಳೆಯರಿಗೂ ಬಲ ಬಂದಿದೆ’ ಎಂದು ಭಾರತೀಯ ಮಜ್ದೂರ್ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರದಲ್ಲಿ ಹಾಲಿ ಸರ್ಕಾರ ರಚನೆಯಾಗುವ ಮೊದಲೇ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದೆವು, ಆಗ ನೀಡಿದ ಭರವಸೆಯಂತೆ ಬೇಡಿಕೆ ಈಡೇರಿಸಿರುವುದು ಸಂತಸ ತಂದಿದೆ. ಇಲ್ಲಿವರೆಗೆ ಮೀನುಗಾರಿಕೆ ಕೃಷಿ ಸಚಿವಾಲಯದ ವ್ಯಾಪ್ತಿಯಲ್ಲಿತ್ತು. ಕೃಷಿ ಕ್ಷೇತ್ರ ಒಂದು ಸಾಗರ. ಅದರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಿರ್ಲಕ್ಷಿಸಲ್ಪಟ್ಟಿತ್ತು. ಪ್ರತ್ಯೇಕ ಸಚಿವಾಲಯದಿಂದ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಲು, ಕ್ಷೇತ್ರದ ಸಾಧ್ಯತೆಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಅನುಕೂಲ. ಪ್ರತ್ಯೇಕ ಬಜೆಟ್ ದೊರೆಯುತ್ತದೆ.
|ವಾಸುದೇವ ಬೋಳೂರು, ಉಪಾಧ್ಯಕ್ಷ, ನ್ಯಾಷನಲ್ ಫಿಶ್ ವರ್ಕರ್ಸ್ ಫೋರಂ

ಮಧ್ಯಮ ವರ್ಗದವರಿಗೆ, ಅದರಲ್ಲೂ ರಾಜ್ಯಕ್ಕೆ ಬಜೆಟ್‌ನಿಂದ ತೀವ್ರ ನಿರಾಸೆಯಾಗಿದೆ. ಕೇಂದ್ರ ಬಜೆಟ್ ಜನಪ್ರಿಯವೂ ಅಲ್ಲ, ಜನಪರವೂ ಅಲ್ಲ. ಯುವಕರು, ವಿದ್ಯಾರ್ಥಿಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿಲ್ಲ. ದಕ್ಷಿಣ ಭಾರತವನ್ನು ನಿರ್ಲಕ್ಷಿಸಿದ ಬೇಜವಾಬ್ದಾರಿ ಬಜೆಟ್ ಇದು. ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿ ರೂಪಿಸಲಾದ ಸುಳ್ಳು ಭರವಸೆಗಳನ್ನು ಒಳಗೊಂಡಿದೆ.
|ಯು.ಟಿ.ಖಾದರ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ

ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಎಂಬಂತೆ ಮಧ್ಯಮ, ಬಡ ವರ್ಗವನ್ನು ಕೇಂದ್ರೀಕರಿಸಿ ಮಂಡಿಸಿದ ಬಜೆಟ್ ಇದಾಗಿದೆ. ಈ ಬಜೆಟ್‌ನ ಪರಿಣಾಮ ಭವಿಷ್ಯದಲ್ಲಿ ಇನ್ನಷ್ಟು ಅನುಕೂಲವನ್ನು ದೇಶದ ಜನರು ಪಡೆಯಲಿದ್ದಾರೆ. ಎಲ್ಲ ವಲಯಗಳ ಒಳಿತನ್ನು ಬಯಸಲಾಗಿದ್ದು, ಅದರಲ್ಲೂ ಕೃಷಿ, ಸೈನ್ಯ, ಕಾರ್ಮಿಕ ವರ್ಗಕ್ಕೆ ವಿಶೇಷ ಒತ್ತು ನೀಡಿರುವುದು ಶ್ಲಾಘನೀಯ. ತೆರಿಗೆ, ಗ್ರಾಚ್ಯೂಟಿ ವಿಚಾರದಲ್ಲಿ ಮಹತ್ತರ ಬದಲಾವಣೆ ಆಗಿರುವುದು ದುಡಿಯುವ ವರ್ಗಕ್ಕೆ ಆಶಾಕಿರಣವಾಗಿದೆ.
ಕೃಷ್ಣರಾವ್ ಕೊಡಂಚ, ಅಧ್ಯಕ್ಷ, ಛೇಂಬರ್ ಆಫ್ ಕಾರ್ಮರ್ಸ್ ಆ್ಯಂಡ್ ಇಂಡಸ್ಟ್ರೀಸ್, ಉಡುಪಿ

ರೈತರ, ಕಾರ್ಮಿಕರ ಹಾಗೂ ಎಲ್ಲ ವರ್ಗದ ಜನತೆಯ ಹಿತ ಕಾಯುವ ಬಜೆಟ್. ರೈತರ ಬ್ಯಾಂಕ್ ಖಾತೆಗೆ ನೇರವಾಗಿ 6 ಸಾವಿರ ರೂ, ಮೀನುಗಾರಿಕೆಗೆ ಸಚಿವಾಲಯ, ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಮಹತ್ವದ ಕೊಡುಗೆ. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗಿದೆ. ಮಾನವ ರಹಿತ ರೈಲ್ವೆ ಕ್ರಾಸಿಂಗ್ ನಿರ್ಮಾಣ, ಕಾಮಧೇನು ಯೋಜನೆ, ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರಿಗೆ ಶೇ.2 ಬಡ್ಡಿ ರಿಯಾಯಿತಿ, ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ.3 ಬಡ್ಡಿ ವಿನಾಯಿತಿ ಮತ್ತಿತರ ಘೋಷಣೆ ಸ್ವಾಗತಾರ್ಹ.
|ನಳಿನ್‌ಕುಮಾರ್ ಕಟೀಲ್, ಸಂಸದ, ದ.ಕ

ಕಾರ್ಮಿಕರಿಗೆ ನೆರವು, ರೈತರಿಗೆ ಸಿಹಿಸುದ್ದಿ, ಅಂಗನವಾಡಿ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ಶಕ್ತಿ, ಮೀನುಗಾರರು ಹೈನುಗಾರರಿಗೆ ಭದ್ರತೆ, ಸೈನಿಕರಲ್ಲಿ ವಿಶ್ವಾಸ, ಆದಾಯ ತೆರಿಗೆ ಮಿತಿ ದ್ವಿಗುಣ ಒಟ್ಟಾರೆ ಅಭಿವೃಧ್ಧಿ ಶೀಲ ರಾಷ್ಟ್ರದ ಹೆಗ್ಗುರುತು ಈ ಬಜೆಟ್.
|ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ವಿಪಕ್ಷ ನಾಯಕ

ಕೇಂದ್ರದ ಬಜೆಟ್ ಉತ್ತಮ ನಿರೀಕ್ಷೆ ಮೂಡಿಸಿದೆ. ಜಿಎಸ್‌ಟಿ ನೋಂದಾಯಿತ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ 1 ಕೋಟಿ ರೂ.ವರೆಗೆ ಶೇ.2 ಬಡ್ಡಿ ವಿನಾಯಿತಿ ಸ್ವಾಗತಾರ್ಹ. ಎರಡೂ ಮನೆ ಇದ್ದರೂ ತೆರಿಗೆ ವಿನಾಯಿತಿ ಸೌಲಭ್ಯ ಸಹಿತ ಮನೆಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಪ್ರೋತ್ಸಾಹ ನೀಡಲಾಗಿದೆ. ಇದರಿಂದ ಕಟ್ಟಡ ನಿರ್ಮಾಣ ವಲಯ ಚೇತರಿಸಿಕೊಳ್ಳಲಿದ್ದು, ಪರೋಕ್ಷವಾಗಿ ಉದ್ಯಮಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನಿರ್ಮಾಣ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೂ ನೆರವಾಗಲಿದೆ.
|ಗೌರವ್ ಹೆಗ್ಡೆ, ಅಧ್ಯಕ್ಷ, ಕೆನರಾ ಸಣ್ಣ ಕೈಗಾರಿಕೆಗಳ ಸಂಘ, ಮಂಗಳೂರು.

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಸಾಕಷ್ಟು ಧನಾತ್ಮಕ ಅಂಶಗಳಿವೆ. ಉದ್ಯಮ ವಲಯಕ್ಕಿಂತಲೂ ಜನಸಾಮಾನ್ಯರ ಹಿತರಕ್ಷಣೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ನೋಟು ಅಮಾನ್ಯ ವ್ಯವಹಾರ ಕ್ಷೇತ್ರದ ಮೇಲೆ ಪರಿಣಾಮ ಬೀರಿತ್ತು. ಈ ಬಜೆಟ್‌ನಿಂದ ವ್ಯವಹಾರ ಕ್ಷೇತ್ರದಲ್ಲಿ ಚೇತರಿಕೆ ನಿರೀಕ್ಷಿಸಲಾಗಿದೆ. 2.5 ಲಕ್ಷ ರೂ. ಇದ್ದ ತೆರಿಗೆ ಮಿತಿಯನ್ನು 5 ಲಕ್ಷ ರೂ.ಗೆ ಏರಿಕೆ ಮಾಡಿರುವುದು, 6.5 ಲಕ್ಷ ರೂ. ಹೂಡಿಕೆ ವರೆಗೆ ತೆರಿಗೆ ವಿನಾಯಿತಿ ಸ್ವಾಗತಾರ್ಹ. ಇದರಿಂದ ಜನರ ಹಣ ವ್ಯವಹಾರಕ್ಕೆ ಚಲಾವಣೆಯಾಗಲಿದೆ.
|ರಾಮಮೋಹನ್ ಪೈ ಮಾರೂರ್, ಮಾಜಿ ಅಧ್ಯಕ್ಷ, ಕೆನರಾ ಛೇಂಬರ್ ಆಫ್ ಕಾಮರ್ಸ್