ಮೀನುಗಾರರಿಗೆ ಶೋಧ ಮುಂದುವರಿಕೆ

<<ಮನೆಯವರಿಗೆ ಸಾಂತ್ವನ ಹೇಳಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್>>

ವಿಜಯವಾಣಿ ಸುದ್ದಿಜಾಲ ಉಡುಪಿ
ಆಳಸಮುದ್ರ ಮೀನುಗಾರಿಕೆಗೆ ತೆರಳಿ ಡಿ.15ರಿಂದ ನಾಪತ್ತೆಯಾಗಿರುವ ಮೀನುಗಾರರ ಬಡಾನಿಡಿಯೂರು ಗ್ರಾಮದ ಪಾವಂಜಿಗುಡ್ಡೆ ಮನೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಭೇಟಿ ನೀಡಿದರು.

ಸುವರ್ಣ ತ್ರಿಭುಜ ಬೋಟ್‌ನ ಮಾಲೀಕ ಚಂದ್ರಶೇಖರ ಕೋಟ್ಯಾನ್ ಮನೆಗೆ ತೆರಳಿದ ಸಚಿವೆ, ಬೋಟ್ ನಾಪತ್ತೆಯಾದ ಬಳಿಕ ಮಹಾರಾಷ್ಟ್ರ ಸರ್ಕಾರ, ನೌಕಾಪಡೆ ಮೂಲಕ ಬೋಟ್ ಮತ್ತು ಮೀನುಗಾರರ ಪತ್ತೆಗೆ ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ. ಪತ್ತೆ ಕಾರ್ಯ ಈಗಲೂ ಜಾರಿಯಲ್ಲಿದೆ ಎಂದು ತಿಳಿಸಿದರು. ಬಿಕ್ಕಿಬಿಕ್ಕಿ ಅಳುತ್ತಿದ್ದ ಕೋಟ್ಯಾನ್ ಪತ್ನಿ ಶ್ಯಾಮಲಾ ಮತ್ತು ತಾಯಿಯನ್ನು ಸಚಿವೆ ಸಂತೈಸಿದರು.

ಬಳಿಕ ತಾಂಡೇಲ ದಾಮೋದರ ಸಾಲ್ಯಾನ್ ಮನೆಯಲ್ಲಿ ಅವರ ತಂದೆ ಸುವರ್ಣ ತಿಂಗಳಾಯ, ತಾಯಿ ಸೀತಾ ಸಾಲ್ಯಾನ್ ಅವರ ಮಾತುಗಳನ್ನು ಸಚಿವರು ಆಲಿಸಿದರು.
ನೀವು ಏನೂ ಮಾಡುತ್ತಿಲ್ಲ ಎಂದು ನಾವು ಹೇಳುವುದಿಲ್ಲ. ಆದರೆ ನಮಗೆ ಮಗ ಹಿಂದಿರುಗಿ ಬರಬೇಕು.

ಮತ್ತೊಮ್ಮೆ ಆತನನ್ನು ಈ ಕಣ್ಣಲ್ಲಿ ನೋಡುವ ಭಾಗ್ಯ ದೊರಕಿಸಿಕೊಡಿ ಎಂದು ದುಃಖತಪ್ತರಾಗಿ ಸುವರ್ಣ ತಿಂಗಳಾಯ ಹೇಳಿದರು.

ಎಲ್ಲಿಯವರೆಗೆ ಹುಡುಕುತ್ತೀರಿ? ಈ ವರ್ಷ ಆಗುತ್ತದೆಯೇ ಎಂದು ಮೀನುಗಾರರು ಸಚಿವರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಂಸದೆ ಶೋಭಾ ಕರಂದ್ಲಾಜೆ, ಈಗ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಎಲ್ಲವನ್ನೂ ಬಹಿರಂಗವಾಗಿ ಹೇಳುವಂತಿಲ್ಲ. ಮನೆಯವರ ಎಲ್ಲ ಬೇಡಿಕೆ ಮತ್ತು ಸಲಹೆ ನಾವು ಒಪ್ಪಿದ್ದೇವೆ. ಮೀನುಗಾರರ ಮುಖಂಡರೊಂದಿಗೂ ಸಚಿವೆ ಚರ್ಚೆ ನಡೆಸಿದ್ದಾರೆ ಎಂದರು.
ಶಾಸಕ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ಮೊದಲಾದವರಿದ್ದರು.

ಪ್ರಮೋದ್ ಸಾಕ್ಷಿ ತೋರಿಸಿದರೆ ಕ್ರಮ
ಏಳು ಮೀನುಗಾರರ ನಾಪತ್ತೆಗೆ ನೌಕಾಸೇನೆಯೇ ಕಾರಣ ಎಂಬ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ. ಅವರು ಹೇಳಿರುವುದರ ಕುರಿತು ಸಾಕ್ಷಿ ತೋರಿಸಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸೂಕ್ಷ್ಮ ವಿಷಯಗಳನ್ನು ರಾಜಕೀಯಕ್ಕೆ ಬಳಸಬಾರದು. ಈ ಬಗ್ಗೆ ಬೇಕಾಬಿಟ್ಟಿ ಹೇಳಿಕೆ ನೀಡುವುದು ಸಲ್ಲದು. ಕುಟುಂಬದ ನೋವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.