ಪಂಜಾಬ್​ನಲ್ಲಿ ರಾವಿ ನದಿಗೆ ಅಣೆಕಟ್ಟೆ ಕಟ್ಟಲು ಕೇಂದ್ರದ ಒಪ್ಪಿಗೆ

ನವದೆಹಲಿ: ಪಾಕಿಸ್ತಾನಕ್ಕೆ ಹೆಚ್ಚುವರಿಯಾಗಿ ಹರಿದುಹೋಗುತ್ತಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಪಂಜಾಬ್​ನಲ್ಲಿ ರಾವಿ ನದಿಗೆ ಅಣೆಕಟ್ಟೆ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದೆ.

ರಾವಿ ನದಿಗೆ ಶಹಾಪುರ್ಖಂಡಿ ಅಣೆಕಟ್ಟು ಕಟ್ಟುವುದರಿಂದ ಪಂಜಾಬ್​ ಮತ್ತು ಜಮ್ಮು-ಕಾಶ್ಮೀರ ರಾಜ್ಯಗಳು ನೀರನ್ನು ಬಳಕೆ ಮಾಡಿಕೊಳ್ಳಬಹುದು. ಈ ಯೋಜನೆಯಿಂದ ಪಂಜಾಬ್​ನ 5 ಸಾವಿರ ಹೆಕ್ಟೇರ್​ ಮತ್ತು ಜಮ್ಮು-ಕಾಶ್ಮೀರದ 32,173 ಹೆಕ್ಟೇರ್​ ಜಮೀನಿಗೆ ನೀರು ಒದಗಿಸಬಹುದು. ಜತೆಗೆ 206 ಮೆಗಾವ್ಯಾಟ್​ ವಿದ್ಯುತ್​ ಉತ್ಪಾದನೆ ಮಾಡಬಹುದು. ಪಂಜಾಬ್​ ಸರ್ಕಾರ ಅಣೆಕಟ್ಟೆ ನಿರ್ಮಿಸಲಿದ್ದು, ಜೂನ್​ 2022ರ ವೇಳೆಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

1960ರಲ್ಲಿ ಸಹಿ ಹಾಕಲಾಗಿರುವ ಸಿಂಧೂ ಜಲ ಒಪ್ಪಂದದ ಪ್ರಕಾರ ಸಿಂಧೂ ಕೊಳ್ಳದ ನದಿಗಳ ಪೈಕಿ ಪೂರ್ವ ಭಾಗದ ಮೂರು ನದಿಗಳಾದ ಬಿಯಾಸ್, ರಾವಿ ಮತ್ತು ಸಟ್ಲೆಜ್ ನದಿಗಳ ಮೇಲೆ ಭಾರತ ನಿಯಂತ್ರಣ ಹೊಂದಿದೆ. ಪಶ್ಚಿಮದ ಮೂರು ನದಿಗಳಾದ ಸಿಂಧೂ, ಚೇನಾಬ್ ಮತ್ತು ಜೇಲಂ ನದಿಗಳ ಮೇಲೆ ಪಾಕಿಸ್ತಾನ ನಿಯಂತ್ರಣ ಹೊಂದಿದೆ. (ಏಜೆನ್ಸೀಸ್​)