ದೇಶದ ಉದ್ಯಮರಂಗದ ಬೆನ್ನೆಲುಬು ಎಂದೇ ಕರೆಸಿಕೊಳ್ಳುವ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಉತ್ಪಾದನಾ ವಲಯಕ್ಕೆ ಶೇಕಡ 45ರಷ್ಟು ಮತ್ತು ರಫ್ತು ವಲಯಕ್ಕೆ ಶೇಕಡ 40ರಷ್ಟು ಕೊಡುಗೆ ನೀಡುತ್ತವೆ. ಇಂತಹ ಒಟ್ಟು 6.33 ಕೋಟಿ ಕೈಗಾರಿಕೆಗಳು ಸುಮಾರು 11 ಕೋಟಿ ಜನರಿಗೆ ಉದ್ಯೋಗ ನೀಡಿವೆ. ಅವು ಬಜೆಟ್ ಬಗ್ಗೆ ಕೆಲವು ನಿರೀಕ್ಷೆಗಳನ್ನು ಇಟ್ಟುಕೊಂಡಿವೆ.
- ಆರ್ಥಿಕ ಹಿಂಜರಿತ ಇದ್ದರೂ ಸುಧಾರಣಾ ಪ್ರಕ್ರಿಯೆ ಮುಂದುವರಿಯಬೇಕು. ಕಾರ್ವಿುಕ ಸುಧಾರಣೆ, ನ್ಯಾಯಾಂಗ ಸುಧಾರಣೆ, ಭೂಸುಧಾರಣೆ ಪ್ರಕ್ರಿಯೆಗಳನ್ನು ತ್ವರಿತಗೊಳಿಸಬೇಕು. ಈ ವಿಷಯದಲ್ಲಿ ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೂ, ದೊಡ್ಡ ಉದ್ಯಮಗಳಿಗೂ ಕನಿಷ್ಠ ವೇತನ ಸಮಾನವಾಗಿರಬಾರದು.
- ಬಡ್ಡಿ ದರ ಇಳಿಕೆಗೆ ಸಂಬಂಧಿಸಿದಂತೆ ಬ್ಯಾಂಕುಗಳು ನಿರ್ಣಯ ಕೈಗೊಂಡು ನಿರ್ದಿಷ್ಟ ಉದ್ಯಮ ವಲಯಗಳಿಗೆ ಅದರ ಲಾಭವನ್ನು ನೀಡುವ ಕುರಿತು ರಿಸರ್ವ್ ಬ್ಯಾಂಕಿನ ಈ ವರ್ಷದ ತ್ರೖೆಮಾಸಿಕ ವರದಿಗಳಲ್ಲಿ ಪ್ರಸ್ತಾಪವಿದೆ. ಆದರೆ ಅದು ಅಂತಿಮವಾಗಿ ಆ ಉದ್ಯಮಗಳಿಗೆ ದೊರಕಿಲ್ಲ.
- ಮರುಪಾವತಿಯಾಗದ ಸಾಲ (ಅನುತ್ಪಾದಕ ಆಸ್ತಿ- ಎನ್ಪಿಎ) ಕುರಿತ ನಿಯಮಗಳಲ್ಲಿ ಕೆಲವು ಬದಲಾವಣೆ ತರಬೇಕಿದೆ. ಈಗಾಗಲೇ ತೊಂದರೆಯಲ್ಲಿರುವ ಕೈಗಾರಿಕೆಗಳಿಗೆ ಅಸಲು/ಬಡ್ಡಿ ಪಾವತಿಗೆ ಇರುವ 90 ದಿನಗಳ ಕಾಲಾವಕಾಶ ಸಾಲದು. ಆರ್ಥಿಕತೆ ಚೇತರಿಸಿಕೊಳ್ಳುವವರೆಗೆ ಇದನ್ನು 180 ದಿನಗಳಿಗೆ ಏರಿಸುವುದು ವಿಹಿತ.
- ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಶೇಕಡ 2ರಷ್ಟು ವಿಶೇಷ ಬಡ್ಡಿ ರಿಯಾಯಿತಿ ಮುಂದುವರಿಸುವುದು ಒಳಿತು.
- ಭದ್ರತೆ ರಹಿತ ಸಾಲ ನೀಡಿಕೆಯ ಯೋಜನೆಗಳಿಗೆ ಆದ್ಯತೆ ಕೊಟ್ಟು ಅದರ ಗರಿಷ್ಠ ಮಿತಿಯನ್ನು ಈಗಿರುವ 2 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳಿಗೆ ಏರಿಸುವುದು ಒಳ್ಳೆಯದು.
- ಸರಕು ಸೇವಾ ತೆರಿಗೆ (ಜಿಎಸ್ಟಿ) ಎಂಬ ಪರೋಕ್ಷ ತೆರಿಗೆ ಪದ್ಧತಿ ಅಲ್ಪಕಾಲದಲ್ಲಿ ಅಪಾರ ಬದಲಾವಣೆ ಮತ್ತು ಅನುಸರಣೆಗಳನ್ನು ಕಂಡಿದ್ದರಿಂದ ಒಂದು ರೀತಿಯ ಅಸ್ಥಿರ ಭಾವ ಆವರಿಸಿದೆ. ಅದರೊಂದಿಗೆ ಸಾಫ್ಟ್ವೇರ್ ಮತ್ತು ಪೋರ್ಟಲ್ ಸಮಸ್ಯೆಗಳೂ ಸೇರಿಕೊಂಡಿವೆ. ತೆರಿಗೆ ಪಾವತಿಸುವ ಯಾವುದೇ ಹೊಸ ವಿಧಾನವೂ ಮೊದಲಿದ್ದಂತೆ ಅತ್ಯಂತ ಸರಳವಾಗಿ ಅರ್ಥವಾಗುವಂತಿರಬೇಕು ಮತ್ತು ಸುಲಭವಾಗಿ ಅನುಷ್ಠಾನಗೊಳಿಸುವಂತಿರಬೇಕು. ಮಾರಾಟಗಾರನಿಂದ ಮಾತ್ರ ಪೇಮೆಂಟ್ಗೆ ಅವಕಾಶ ನೀಡುವ (ಜಿಎಸ್ಟಿಆರ್-1) ಈಗಿನ ಇನ್ಪುಟ್ ಕ್ರೆಡಿಟ್ ವ್ಯವಸ್ಥೆಯಿಂದಾಗಿ ಕೈಗಾರಿಕೆಗಳು ಮತ್ತಷ್ಟು ‘ಹೋರಾಟ’ ಮಾಡಬೇಕಾದ ಸನ್ನಿವೇಶವನ್ನು ಸೃಷ್ಟಿಸಿವೆ. ಪೇಮೆಂಟ್ ಡಿಫಾಲ್ಟರ್ಗಳು, ಜಿಎಸ್ಟಿ ರಿಟರ್ನ್ ಫೈಲ್ ಮಾಡದೇ ಇರುವವರನ್ನು ಸರ್ಕಾರವೇ ಗುರುತಿಸಿ ಶಿಕ್ಷಿಸಬೇಕು. ಅದರ ಹೊಣೆಯನ್ನು ಸಣ್ಣ ಕೈಗಾರಿಕೆಗಳ ಹೆಗಲಿಗೆ ವರ್ಗಾಯಿಸಬಾರದು.
ಸಿ ಎ ಎನ್ ನಿತ್ಯಾನಂದ (ಲೇಖಕರು ಆರ್ಥಿಕ ವಿಶ್ಲೇಷಕರು, ಎಫ್ಕೆಸಿಸಿಐ ನಿರ್ದೇಶಕರು)