More

    ಕೇಂದ್ರ ಬಜೆಟ್ 2020| ಬಜೆಟ್​ಗೆ ಇವರು ಅನರ್ಹರು, ಅಸ್ಪೃಶ್ಯರು!

    ಕೇಂದ್ರ ಬಜೆಟ್ 2020| ಬಜೆಟ್​ಗೆ ಇವರು ಅನರ್ಹರು, ಅಸ್ಪೃಶ್ಯರು!ಈಗ ಬಜೆಟ್ ಕಾಲ. ಅಂದರೆ ಆಸೆ-ಆಕಾಂಕ್ಷೆಗಳ ಸುರಿಮಳೆ ಕಾಲ. ಕೇಂದ್ರ ಸರ್ಕಾರದ ಬಜೆಟ್ ಒಳಗೆ ಜಾಗ ಬೇಕು ಎನ್ನುವವರೇ ಎಲ್ಲರೂ. ಎಲ್ಲರಿಗೂ ಕೇಳಿದಷ್ಟು ಕೊಡಲು ಸಾಧ್ಯವಿಲ್ಲ. ಆಗುವುದೇನೇ ಇರಲಿ, ಆಸೆ ಪಡಲು ಸಂಪೂರ್ಣ ಅವಕಾಶ ಇದೆ – ಬಜೆಟ್ ಮಂಡನೆ ದಿನದವರೆಗೆ. ಆದರೆ ಆಸೆ ಪಡುವುದಕ್ಕೂ ಅನರ್ಹರು – ಅಸ್ಪೃ್ಯರು ಈ ಬಜೆಟ್ ಗೆ ಇದ್ದಾರೆ! ಇವರನ್ನು ಕರೆಯುವವರೂ ಇಲ್ಲ; ಕೇಳುವವರೂ ಇಲ್ಲ. ಇವರು ಯಾರು ಗೊತ್ತೇ ನಿಮಗೆ? ಅವರೇ – ನೀರಾವರಿ ಕಾಣದ ಬಡ ರೈತರು; ಇವರ ಜೊತೆ ಗ್ರಾಮೀಣ ಭಾಗದ ಜೋಡೆತ್ತು ಆದ ಸಣ್ಣ ಉದ್ದಿಮೆ ವ್ಯವಹಾರಗಳ ಮಂದಿ, ಹಳ್ಳಿಯ ಬಿಜಿನೆಸ್ ಮಂದಿ. ಈ ಜೋಡೆತ್ತಿನ ಹಣೆಬರಹ ಒಂದೇ.

    ಕರ್ನಾಟಕದಿಂದ ರಾಜಸ್ಥಾನದವರೆಗೆ ಇರುವುದು- ಅರಬಿ ಸಮುದ್ರ ಬೇಸಾಯ. ಇದೇನಿದು ಎನ್ನುವಿರಾ? ಇದು ಅರಬಿ ಸಮುದ್ರ ಸೇರುವ ನದಿಗಳ ರಾಜ್ಯಗಳ ಬೇಸಾಯದ ಬವಣೆ. ಮಳೆ ಬಂದರೆ ಬೆಳೆ. ಅದೂ ಗ್ಯಾರಂಟಿ ಇಲ್ಲ. ಹವಾಮಾನ ವೈಪರೀತ್ಯದಿಂದ ರೈತರಿಗಾಗುವ ಹಾನಿ ಅಪಾರ. ಇದು ಶೇ. 58ರಷ್ಟು ವಿಪರೀತ ಎಂಬ ಲೆಕ್ಕಾಚಾರ ಇದೆ. ನಂತರ ಬರುವುದು ಕ್ರಿಮಿನಾಶಕಗಳಿಂದಾಗುವ ಹಾನಿ. ಆಮೇಲೆ ಬೆಲೆ ಇಲ್ಲದೆ ಆಗುವ ನಷ್ಟ. ಇದು ನಮ್ಮ ಮಳೆಯಾಶ್ರಿತ ಬೇಸಾಯದ ದೀನ ರೈತರ ಕಷ್ಟದ ಸ್ಥಿತಿ.

    ಆದರೂ ಮಳೆಯಾಶ್ರಿತ ಪ್ರದೇಶದ ರೈತರು ದೇಶದ ಖಣಜ ತುಂಬುವುದರಲ್ಲಿ ಅಪ್ರತಿಮರು. ನೀರಾವರಿ ಪ್ರದೇಶದ ಜನರಿಗಿಂತ ಇವರ ಪೌರುಷ ಹೆಚ್ಚು! ಉತ್ತಮ ಧಾನ್ಯಗಳ ಬೆಳೆಯಲ್ಲಿ ಬರಗಾಲ ಪ್ರದೇಶದ ರೈತರ ಪಾಲು ನೀರಾವರಿ ರೈತರಿಗೆ ಸರಿಸಾಟಿಯಾಗಿದೆ! ಇನ್ನು ಒರಟು ಧಾನ್ಯಗಳು, ಮತ್ತೆ ಬೇಳೆಗಳ ಪಾಲಿನಲ್ಲಿ ಇವರದ್ದು ಶೇ. 84 – 87 ಕೊಡುಗೆ ಇದೆ. ಇನ್ನು ಪಶುಪಾಲನೆಯಲ್ಲಿ ಮಳೆ ಆಶ್ರಿತ ಜನರ ಪಾಲು ಶೇ. 60 ಇದೆ. ಶೇ. 60ರಷ್ಟು ಹತ್ತಿ ನೀಡುವವರು ಇವರೇ. ದೇಶದ ರೈತರಲ್ಲಿ ಶೇ.40 ಭಾಗದಷ್ಟು ಇವರಾಗಿದ್ದಾರೆ.

    ಹೀಗೆ ದೇಶದ ಅರ್ಥವ್ಯವಸ್ಥೆಗೆ, ಕೃಷಿಗೆ ಇಂತಹ ದೊಡ್ಡ ಕೊಡುಗೆ ಇವರದ್ದು. ಆದರೆ ಇವರಿಗೆ ಸಿಕ್ಕಿರುವ ಮನ್ನಣೆ ನಮ್ಮ ಅರ್ಥವ್ಯವಸ್ಥೆಯಲ್ಲಿ ನಿಜಕ್ಕೂ ಸೊನ್ನೆ! ಹೀಗೆ ಹೇಳಲು ಕಾರಣ ಇದೆ. ಕಳೆದ ಮುಂಗಾರಿನಲ್ಲಿ ಪ್ರವಾಹಗಳಿಂದ ಅಪಾರ ನಷ್ಟ ಅನುಭವಿಸಿರುವುದು ಈ ಅರಬಿ ಸಮುದ್ರ ಬೇಸಾಯಗಾರರು. ಅದಕ್ಕೂ ಮೊದಲು ಭೀಕರ ಬರಗಾಲದಿಂದ ನರಳಿದವರು ಇವರೇ. ಹೀಗೆ ಸತತವಾಗಿ ಎರಡು ಕೃಷಿ ಅನಾಹುತಗಳಿಂದ ಈ ರೈತರಿಗೆ, ಈ ಹಳ್ಳಿಗಾಡಿನ ಬದುಕಿಗೆ ಆಗಿರುವ ನಷ್ಟ – ಕಷ್ಟ ಎಷ್ಟು ಎಂಬುದು ಲೆಕ್ಕಾಚಾರ ಆಗಿದೆಯೇ? ಇವರ ಬದುಕು ಭಾರವಾಗಿದೆ, ಅದು ಎಷ್ಟು ಭಾರ ಎಂಬುದರ ಅಂದಾಜು ಎಲ್ಲಾದರೂ ಇದೆಯೇ?

    ಗ್ರಾಮೀಣ ಅರ್ಥವ್ಯವಸ್ಥೆಗೆ ಆಗಿರುವ ಹಾನಿಯ ಲೆಕ್ಕಾಚಾರ ನಮ್ಮ ಅರ್ಥವ್ಯವಸ್ಥೆಯ ಪಾರುಪತ್ತೆಗಾರರ ಗಮನಕ್ಕೆ ಬಂದಿಲ್ಲ. ಇದರ ಗಂಧ ಗಾಳಿ ಗೊತ್ತಿಲ್ಲ ಅವರಿಗೆ. ಗ್ರಾಮೀಣ ಅರ್ಥವ್ಯವಸ್ಥೆ ಅವರಿಗೆ ಲೆಕ್ಕಕ್ಕೆ ಇಲ್ಲ. ಇಷ್ಟೆಲ್ಲಾ ಅನಾಹುತ ಆದರೂ ಅರ್ಥವ್ಯವಸ್ಥೆ ಉಸ್ತುವಾರಿ ಹೊತ್ತವರಿಗೆ ಅದು ಅರ್ಥವಾಗುತ್ತಿಲ್ಲ. ಇವರೆಲ್ಲರೂ ಹೇಳುತ್ತಿದ್ದಾರೆ, ಹಾಗೆಯೇ ಮಾಧ್ಯಮಗಳ ತುಂಬಾ ಒಂದೇ ಮಾತಿದೆ – ಏನದು ಗೊತ್ತಾ? ದೇಶದಲ್ಲಿ ‘ಬೇಡಿಕೆ ಇಲ್ಲ,’ ಎಂಬುದು ಅದು. ಎರಡು ವರ್ಷಗಳ ಕಾಲ ಹಳ್ಳಿಯ ಪರಿಸ್ಥಿತಿಯನ್ನು ಸರ್ಕಾರವು ಕಡೆಗಣಿಸಿದ್ದರ ಫಲ- ಈ ‘ಬೇಡಿಕೆ- ಬಳಕೆ’ ಕುಸಿತ.

    ಇದು ನಮ್ಮ ಅರ್ಥವ್ಯವಸ್ಥೆ ಹೊಣೆ ಹೊತ್ತವರಿಗೆ ಅರ್ಥವಾಗುತ್ತಿಲ್ಲ. ಪರದೇಶಿ ಆರ್ಥಿಕ ಪಂಡಿತರ ಲೆಕ್ಕಾಚಾರದಲ್ಲಿ ನಮ್ಮ ಅರ್ಥವ್ಯವಸ್ಥೆ ಸಿಕ್ಕಿಕೊಂಡಿದೆ. ಈ ಪಂಡಿತರಿಗೆ ಹಳ್ಳಿಯ ಪರಿಸ್ಥಿತಿ ಬೇಕಾಗಿಯೇ ಇಲ್ಲ. ಹೀಗಾಗಿ ದೇಶದಲ್ಲಿ ಬೇಡಿಕೆ ಕುಸಿದಿದೆ; ಅರ್ಥ ವ್ಯವಸ್ಥೆಯಲ್ಲಿ ಮುಗ್ಗಟ್ಟಿದೆ- ಎಂದೆಲ್ಲ ಹೇಳುವ ಇವರಿಗೆ ಸರಿಯಾದ ಕಾರಣ ಹುಡುಕುವುದಕ್ಕೆ ಸಾಧ್ಯವಾಗಿಲ್ಲ. ಏಕೆಂದರೆ ಬಡಜನರ ಬೇಸಾಯವು ಲೆಕ್ಕಕ್ಕೆ ಇಲ್ಲ ಇವರಿಗೆ. ಈಗ ಮಳೆ ಸಕಾಲಿಕವಾಗಿ ಬಂದು ಬರಗಾಲ ಬರದಿದ್ದರೆ ಬಡರೈತರೇ ಅರ್ಥವ್ಯವಸ್ಥೆಯು ತುಂಬುವಂತಹ ಬೇಡಿಕೆ ತರುತ್ತಾರೆ ಎಂಬುದು ಇವರಿಗೆ ಅರ್ಥವಾಗುವುದಿಲ್ಲ. ಇದು ಹಳ್ಳಿಗರ ತಾಖತ್ತು ಎಂಬುದು ಇವರಿಗೆ ಗೊತ್ತಿಲ್ಲ.

    ಹೀಗೆ ಹಳ್ಳಿಗಾಡಿನಲ್ಲಿ ನಷ್ಟದ ಮೇಲೆ ನಷ್ಟ ಆಗಿದ್ದರೆ, ಅತ್ತ ಸಿಟಿ- ಮೆಟ್ರೋ ಪ್ರದೇಶದಲ್ಲಿ ಭೋಗ ವಸ್ತುಗಳಿಗೆ ಬೇಡಿಕೆ ಭಾರಿಯಾಗಿ ಇದೆ. ದುಬಾರಿ ಮೊಬೈಲ್ ಫೋನುಗಳು ಚೆನ್ನಾಗಿಯೇ ಬಿಕರಿಯಾಗುತ್ತಿವೆ. ಪರದೇಶಿ ದುಬಾರಿ ಕಾರುಗಳು ನಗರಗಳಲ್ಲಿ ಆಟೋರಿಕ್ಷಾ ಜೊತೆ ಪೈಪೋಟಿಗಿಳಿದಿವೆ. ಹೆಚ್ಚು ಹೆಚ್ಚು ಐಶಾರಾಮಿ ಕಾರುಗಳು ನಗರಗಳಲ್ಲಿ ರಸ್ತೆಗಿಳಿಯುತ್ತಿವೆ. ನಗರಗಳು- ಮೆಟ್ರೋಗಳಲ್ಲಿನ ಸಂಬಳದಾರರಿಗೆ ಕೊರತೆ ಬಂದಿಲ್ಲ. ಸರ್ಕಾರಿ ನೌಕರರ ಮಾತು ಹೇಳುವಂತೆಯೇ ಇಲ್ಲ. ಅವರಿಗೆ ತುಟ್ಟಿಭತ್ಯ ಜಾಸ್ತಿ ಮಾಡಿದ್ದು ಆಗಿದೆ. 2014 -15ರಿಂದ 5ವರ್ಷಗಳಲ್ಲಿ ಕಂಪನಿ ತೆರಿಗೆ ಬಾಕಿ 20. 8 ಲಕ್ಷ ಕೋಟಿ ಇತ್ತು. ಬಾಕಿ ವಸೂಲಿ ಆಗಿದ್ದು 3.19 ಲಕ್ಷ ಕೋಟಿ ಮಾತ್ರ. ಆದರೂ 1.5 ಲಕ್ಷ ಕೋಟಿ ರೂಪಾಯಿ ಕಂಪನಿ ತೆರಿಗೆ ಮಾಫಿ ಮಾಡಿದ್ದು ಆಗಿಹೋಗಿದೆ. ಆದರೆ ಏನು ಪ್ರಯೋಜನ ? ಬೇಡಿಕೆ ಹಿಗ್ಗಿತೇ? ಖಂಡಿತ ಇಲ್ಲ. ಸರ್ಕಾರವು ರೋಗವನ್ನು ಸರಿಯಾಗಿ ಗುರುತಿಸಿಲ್ಲ. ಬೇಡಿಕೆ ಕುಸಿತ ಇರುವುದು ಹಳ್ಳಿಗಾಡಿನಲ್ಲಿ; ಹಣ ಕೊಟ್ಟಿರುವುದು ಸಿಟಿ – ಮೆಟ್ರೋ ಜನರಿಗೆ! ಹೀಗಿದ್ದಾಗ ಬೇಡಿಕೆ ಇಲ್ಲ ಎಂಬ ರೋಗ ವಾಸಿಯಾಗುವುದಾದರೂ ಹೇಗೆ?

    ಅಷ್ಟೇ ಏಕೆ, ಸರ್ಕಾರದ ಹಣದ ಹರಿವು ಹಳ್ಳಿಗಳಿಗೆ ಸರಿಯಾಗಿ ಇಲ್ಲವೇ ಇಲ್ಲ. ಇದಕ್ಕೆ ಒಂದು ಉದಾಹರಣೆ ಎಂದರೆ ರೈತರ ರಾಯಧನ- ಅದೇ ಪ್ರಧಾನಿ ಕೃಷಿ ಸಮ್ಮಾನ್ ಯೋಜನೆ. 75,000 ಕೋಟಿ ರೂಪಾಯಿ ಹಣ ರೈತರಿಗೆ ಮುಡಿಪಾಗಿಟ್ಟರೂ ಕೊಡಲು ಸಾಧ್ಯ ಆಗಿದ್ದು 45,000 ಕೋಟಿ ರೂಪಾಯಿ ಮಾತ್ರ!

    ಏಕೆಂದರೆ ರೈತರಿಗೂ ಸರ್ಕಾರಿ ಹಣಕ್ಕೂ ಕೊಂಡಿಯೇ ಇಲ್ಲ! ಇದು ದುರಂತ. ಕೃಷಿಗೆ ಹಣ ಇದೆ; ರೈತರಿಗೆ ಇಲ್ಲ! ಉದಾಹರಣೆಗೆ ಕೃಷಿ ಸಾಲದಲ್ಲಿ ಶೇಕಡಾ 60 ಭಾಗ ರೈತರಿಗಿಲ್ಲ! ಕೃಷಿ ಹೆಸರಿನ ನಾನಾ ಕಾರ್ಯಗಳಿಗೆ ಅದು ಹೋಗುತ್ತದೆ. ಕೃಷಿಯ ಒಟ್ಟು ಸಾಲದಲ್ಲಿ ಶೇಕಡಾ 39 ಭಾಗ ಮಾತ್ರ ಅಲ್ಪಾವಧಿ ಸಾಲ. ಇದು ರೈತರಿಗೆ ಬೇಸಾಯಕ್ಕೆ ಬರುವ ಹಣ. ಉಳಿದದ್ದು ಎಲ್ಲೆಲ್ಲಿಗೋ ಹೋಗುತ್ತದೆ. ಅಚ್ಚರಿಯ ಸಂಗತಿ ಜನವರಿ-ಮಾರ್ಚ್ ಅವಧಿಯಲ್ಲಿ ನಮ್ಮ ಒಟ್ಟು ಕೃಷಿ ಸಾಲದ ಶೇ. 46 ರಷ್ಟು ಬಟವಾಡೆ ಆಗುತ್ತದೆ!!! ಮಾರ್ಚ್ ತಿಂಗಳಿನಲ್ಲಿ ಕೃಷಿ ಸಾಲದಲ್ಲಿ ಕಾಲುಭಾಗದ ಹಣ ವಿನಿಯೋಗ ಆಗುತ್ತದೆ! ಹೇಗೆ ಗೊತ್ತೇ? ಇದು ಮೆಟ್ರೋ ಕೃಷಿ ಸಾಲ! ಮೆಟ್ರೋಗಳಲ್ಲಿ ಬೇಸಾಯಕ್ಕೆಂದು ಕೃಷಿ ಸಾಲ ಪಡೆದು ಶೇರು ವ್ಯವಹಾರ ಮಾಡುವುದು ಉದ್ದಕ್ಕೂ ನಡೆದು ಬಂದಿದೆ! ಪಶ್ಚಿಮ ಬಂಗಾಳದ ಕೃಷಿ ಸಾಲದಲ್ಲಿ ಶೇಕಡಾ 40 ಹಣವು ಷೇರು ಸಟ್ಟಾ ವ್ಯವಹಾರ ಖ್ಯಾತಿಯ ಕೊಲ್ಕತ್ತಾ ಪ್ರದೇಶದಲ್ಲಿ ಜನವರಿ-ಮಾರ್ಚ್ ಅವಧಿಯಲ್ಲಿ ಖರ್ಚಾಗುತ್ತದೆ ! ಮಾರ್ಚ್ ತಿಂಗಳಿನಲ್ಲಿ ತಿರುವಳಿ ಬಟವಾಡೆ ಸರ್ಕಾರಿ ಕಡತಗಳಲ್ಲಿ ಮಾಮೂಲು. ಆದರೆ ಕೃಷಿ ಸಾಲಕ್ಕೂ ಇದೇ ದಿಕ್ಕು ಎಂದರೆ ಅದು ದುರಂತವೇ ಸರಿ.

    ಕೃಷಿ ಹೆಸರಿನಲ್ಲಿ ರೈತರಿಗೆ, ದೇಶದ ಅರ್ಥವ್ಯವಸ್ಥೆಗೆ ಅನ್ಯಾಯವು ಅವ್ಯಾಹತವಾಗಿ ಸಾಗಿದೆ. ಹೀಗಾಗಿ ಸರ್ಕಾರದ ಹಣಕ್ಕೂ ಅರಬಿ ಸಮುದ್ರ ಬೇಸಾಯಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟ. 75,000 ಕೋಟಿ ರೂಪಾಯಿ ಇಟ್ಟರೂ ರೈತರಿಗೆ ಕೊಟ್ಟಿದ್ದು 45 ಸಾವಿರ ಕೋಟಿ ರೂಪಾಯಿಗಳು ಮಾತ್ರ ಎಂದಾಗ ಪರಿಸ್ಥಿತಿಯ ಸ್ಪಷ್ಟ ಚಿತ್ರ ನಿಮಗೆ ಗೊತ್ತಾಗುತ್ತದೆ. ಹೀಗಾಗಿ ಬಡ ರೈತರ ಬಗ್ಗೆ ಬಜೆಟ್ ನಲ್ಲಿ ಹೇಗೆ ತಾನೇ ಅನುಕಂಪದ ಹಣ ಹುಟ್ಟಲು ಸಾಧ್ಯ? ಅಂದ ಮೇಲೆ ಬಡರೈತರಿಗೂ ಕೇಂದ್ರ ಬಜೆಟ್ ಗೂ ಯಾವ ಸಂಬಂಧವೂ ಇಲ್ಲ ಬಿಡಿ.

    ಕೃಷಿಯಲ್ಲೂ ಒಂದು ಮಾತು. ಕೃಷಿ ವಲಯದ ಉತ್ಪಾದನೆಯಲ್ಲಿ ಶೇ.60 ಭಾಗ ಪೈರಿನದು. ಆದರೆ ಕೃಷಿ ಸಾಲದಲ್ಲಿ ಶೇ.90 ಭಾಗವು ಬ್ಯಾಂಕ್ ನಿಂದ ಸಿಗುವುದು ಬೇಸಾಯಕ್ಕೆ. ಪಶುಪಾಲನೆಯಲ್ಲಿ ಈ ವಲಯದ ಶೇ. 40 ಭಾಗ ಉತ್ಪತ್ತಿ ಬಂದರೂ ಬ್ಯಾಂಕ್ ಸಾಲದಲ್ಲಿ ಅದಕ್ಕೆ ಸಿಗುವ ಪಾಲು ಶೇ.10ಕ್ಕೂ ಕಡಿಮೆ. ಬಜೆಟ್ ವಿಷಯದಲ್ಲಿ ಪಶುಪಾಲನೆಯು ಅಸ್ಪೃ್ಯದ ವಿಷಯವೇ ಆಗಿದೆ.

    ಉದ್ಯೋಗ ಕ್ಷೇತ್ರದಲ್ಲಿ ಕೃಷಿ ವಲಯದ ಪಾಲು ಬಹುತೇಕ ಶೇ. 50ರಷ್ಟು ಇದೆ. ಇಷ್ಟೇ ದೊಡ್ಡ ಪಾಲು ನೀಡುವ ಇನ್ನೊಂದು ಕ್ಷೇತ್ರವೆಂದರೆ ಅದು ಸಣ್ಣ ಉದ್ದಿಮೆ ಘಟಕಗಳು -ಎಂ ಎಸ್ ಎಂ ಇ ಗಳು. ಬೇಸಾಯ – ಪಶುಪಾಲನೆಗಳು 26 ಕೋಟಿ ಕುಟುಂಬಗಳಿಗೆ ಉದ್ಯೋಗ -ಆದಾಯ (ನಷ್ಟ) ತರುತ್ತದೆ. ಸಣ್ಣ ಉದ್ದಿಮೆಗಳು ದೇಶವ್ಯಾಪಿಯಾಗಿ 11 ಕೋಟಿಗೂ ಹೆಚ್ಚು ಉದ್ಯೋಗ ಕಲ್ಪಿಸುತ್ತವೆ. ದೇಶದಲ್ಲಿ 6.3 ಕೋಟಿ ಸಣ್ಣ ಅತಿ ಸಣ್ಣ ಉದ್ದಿಮೆ ಘಟಕಗಳು ‘ಎಂ ಎಸ್ ಎಂ ಇ’ಗಳು -ಇವೆ. ತಯಾರಿಕೆ ಕ್ಷೇತ್ರದಲ್ಲಿ ಇವುಗಳ ಪಾಲು ಶೇ. 45ರಷ್ಟು ಅಗಾಧವಾಗಿದೆ. ದೇಶದ ಜಿಡಿಪಿಗೆ ಇವುಗಳು ನೀಡುವ ಪಾಲು ಶೇಕಡ 28ರಷ್ಟು ಗಣನೀಯವಾಗಿದೆ. ಇನ್ನು ರಫ್ತಿನಲ್ಲಂತೂ ಇವುಗಳು 2015-16ರಿಂದ ಸತತವಾಗಿ ಶೇ. 50 ರಷ್ಟು ಸಿಂಹಪಾಲನ್ನು ಹೊಂದಿದೆ. ಇಷ್ಟು ಅಗಾಧವಾಗಿ ಉತ್ಪತ್ತಿ- ಉದ್ಯೋಗ ನೀಡುವ ಎಂಎಸ್​ಎಂಇ ಗಳ ಗೋಳು ಏನು ಗೊತ್ತೆ ? ಇಲ್ಲಿ ಬೃಹತ್ ಉದ್ದಿಮೆಗಳದ್ದೇ ಕಾರುಬಾರು. ಬ್ಯಾಂಕುಗಳು ಉದ್ದಿಮೆಗಳಿಗೆ ನೀಡಿದ ಒಟ್ಟು 58 ಲಕ್ಷ ಕೋಟಿ ರೂಪಾಯಿ. ಇದರಲ್ಲಿ ಸಣ್ಣವರ ಪಾಲು 2019ರ ಮಾರ್ಚ್ ವರೆಗೆ 14.3 ಲಕ್ಷ ಕೋಟಿ ರೂಪಾಯಿ ಮಾತ್ರ! ಶೇ. 50ರಷ್ಟು ರಫ್ತು ಮಾಡುವ, ಉದ್ಯಮ ಉದ್ಯೋಗದಲ್ಲಿ ಶೇಕಡಾ 95ರಷ್ಟು ಪಾಲು ಹೊಂದಿರುವ ಈ ಸಣ್ಣ ಉದ್ಯಮ ಕ್ಷೇತ್ರಕ್ಕೆ ಸರ್ಕಾರಿ ಬ್ಯಾಂಕುಗಳ ಸಾಲವು ಏನೇನೂ ಸಾಲದು. ಉತ್ಪಾದನೆ ಇಲ್ಲಿ. ದುಡ್ಡು ಮಾತ್ರ ಇನ್ನೆಲ್ಲೋ. ಸಣ್ಣ ಉದ್ದಿಮೆಗಳ ಸಾಲದಲ್ಲಿ ಒಂದು ಕೋಟಿ ರೂಪಾಯಿಗಿಂತ ಕಡಿಮೆ ಬಾಬ್ತಿನ ಮೊತ್ತ 4.3 ಲಕ್ಷ ಕೋಟಿ ಇದ್ದರೆ 100 ಕೋಟಿ ರೂಪಾಯಿಗಿಂತ ಹೆಚ್ಚು ಬಾಬ್ತು ಸಾಲ ಮೊತ್ತ 39 ಲಕ್ಷ ಕೋಟಿ ರೂಪಾಯಿ ಆಗಿದೆ. ಇದು ಸೆಪ್ಟೆಂಬರ್ 2018 ಲೆಕ್ಕ. ದೊಡ್ಡ ಮೊತ್ತದ ಸಾಲದಿಂದ ಕಡಿಮೆ ಉತ್ಪತ್ತಿ- ಉದ್ಯೋಗ ಬರುತ್ತಿದೆ. ಹೀಗಿದೆ ದೇಶದ ದುರಂತ.

    ಅಲ್ಲದೆ ಹಳ್ಳಿಗಾಡಿನ ಸಂಪಾದನೆಯಲ್ಲಿ ಮೂರನೇ ಎರಡು ಭಾಗದಷ್ಟು ಅಗಾಧವಾದ ಕೊಡುಗೆ ಸಣ್ಣ ಉದ್ದಿಮೆಗಳದ್ದೇ. ಹಳ್ಳಿಯ ಸಂಪಾದನೆಯಲ್ಲಿ ಒಂದು ಪಾಲು ಮಾತ್ರ ಬೆಳೆಯಿಂದ ಬರುತ್ತದೆ. ಇನ್ನುಳಿದದ್ದು ಹಳ್ಳಿಗಾಡಿನಲ್ಲಿ ಅತಿ ಸಣ್ಣ ಉದ್ದಿಮೆ ಘಟಕಗಳಿಂದ ಬರುತ್ತದೆ. ರಿಪೇರಿ ಕೆಲಸ, ಹೊಟೆಲ್, ವ್ಯಾಪಾರ ವ್ಯವಹಾರ, ಯಂತ್ರೋಪಕರಣಗಳ ಕೆಲಸ , ವಾಹನ ಸಾಗಣೆ ವ್ಯವಹಾರ – ಹೀಗೆ ಹಳ್ಳಿಗಾಡಿನ ಬದುಕಿನಲ್ಲಿ ಒಂದು ಕಡೆ ಬೇಸಾಯ, ಇನ್ನೊಂದು ಕಡೆ ಎಂಎಸ್​ಎಂಇ ಘಟಕಗಳು ಇವೆ. ಇವು ನಿಜವಾದ ಅರ್ಥದಲ್ಲಿ ಭಾರತದ ಅರ್ಥವ್ಯವಸ್ಥೆಯ ಜೋಡೆತ್ತುಗಳು. ಆದರೆ ಈಗ ಬಜೆಟ್ ಭರಾಟೆಯಲ್ಲಿ ಈ ಜೋಡೆತ್ತಿಗೆ ಎಲ್ಲಿದೆ ಜಾಗ ?

    ಈ ಎರಡು ಕ್ಷೇತ್ರಗಳು ಉದ್ಧಾರವಾಗದೆ ದೇಶದಲ್ಲಿ ಬೇಡಿಕೆಯೂ ಹೆಚ್ಚಲು ಸಾಧ್ಯವಿಲ್ಲ. ಏಕೆಂದರೆ ಬಜೆಟ್ ಹೆಚ್ಚು ಭಾಗದ .ಹಣವು ಸಿಟಿ – ಮೆಟ್ರೋದಲ್ಲಿರುವ ಶೇ. 30ರಷ್ಟು ಜನತೆಗೆ ಸಂದಾಯವಾಗುತ್ತಿದೆ. ಶೇ.70ರಷ್ಟಿರುವ ಹಳ್ಳಿಗಾಡಿನ ಜನರ ಪಾಲು ಕಡಿಮೆಯಾಗುತ್ತಲೇ ಬಂದಿದೆ.

    ಈಗ ಒಂದು ವಿಷಯ ಸ್ಪಷ್ಟವಾಗಿ ತಿಳಿಯುತ್ತದೆ. ಕೃಷಿ ಜಿಡಿಪಿಯು ಉದಾರೀಕರಣದ ಕಾಲದಲ್ಲಿ ಶೇ.29 ರಿಂದ ಶೇ.14ಕ್ಕೂ ಕೆಳಗಿಳಿದು ಅಧೋಗತಿಯಲ್ಲಿದೆ. ಇದರಲ್ಲಿ ಕಾಲು ಭಾಗವು ಪಶುಪಾಲನೆಯದು. ಬಜೆಟ್ ನಲ್ಲಿ ಪಶುಪಾಲನಗೇನು ಗಿಟ್ಟಿದೆ ಎಂಬುದನ್ನು ನೀವೇ ಗಮನಿಸಬೇಕು. ಹೀಗೇ, ಉದ್ಯೋಗದಲ್ಲಿ 6ಕ್ಕಿಂತ ಹೆಚ್ಚು ಕೆಲಸಗಾರರು ಇರುವ ಘಟಕಗಳು ಉದ್ಯೋಗ ಕ್ಷೇತ್ರಕ್ಕೆ ಕೊಡುವ ಪಾಲು ಶೇ.4.5 ಮಾತ್ರ. ಉಳಿದ ಶೇ 95.5 ಕೆಲಸಗಾರರು ಬಜೆಟ್ ಹತ್ತಿರವೂ ಬರುವುದು ಕಾಣೆ. ಈ ಪಶುಪಾಲನೆ ಹಾಗೂ ಹಳ್ಳಿಯ ಉದ್ದಿಮೆ ವರ್ಗಗಳೇ ಬಜೆಟ್ ಗೆ ಅಸ್ಪೃ್ಯರು-ಅನರ್ಹರು. ಇವರನ್ನು ಕೇಳುವವರು ಯಾರು?

    ಈಗಿನ ಬಜೆಟ್ ಭರಾಟೆ ನೋಡಿದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಮೂಡುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts