More

    ಕೇಂದ್ರ ಬಜೆಟ್ 2020| ನಿರೀಕ್ಷೆಗಳ ರಾಕೆಟ್

    ಕೇಂದ್ರ ಸರ್ಕಾರದ 2020-21ನೇ ಸಾಲಿನ ಬಜೆಟ್ ಮಂಡನೆಗೆ ದಿನಗಣನೆ ಆರಂಭವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇನ್ನು 12 ದಿನಗಳಲ್ಲಿ (ಫೆ.1) ಆಯವ್ಯಯ ಮಂಡಿಸಲಿದ್ದಾರೆ. ದೇಶದ ಹಲವು ವಲಯಗಳಲ್ಲಿ ಆರ್ಥಿಕ ಹಿಂಜರಿತ ಕಾಣಿಸಿಕೊಂಡಿರುವ ಈ ಸಂದರ್ಭದಲ್ಲಿ ಉದ್ಯಮ ವಲಯದ ನಿರೀಕ್ಷೆಗಳನ್ನು ತಣಿಸುವಂತೆ ಬಜೆಟ್ ಮಂಡಿಸುವುದು ನಿಜಕ್ಕೂ ಹಗ್ಗದ ಮೇಲಿನ ನಡಿಗೆಯೇ.

    ಭಾರತದ ಆರ್ಥಿಕತೆ ಇಂದು ಕವಲುದಾರಿಯಲ್ಲಿದೆ. ಅತಿ ಕಡಿಮೆ ಬೆಳವಣಿಗೆ ದರ, ಆರು ವರ್ಷಗಳಲ್ಲೇ ಅತಿ ಹೆಚ್ಚಿನ ಚಿಲ್ಲರೆ ಹಣದುಬ್ಬರ, ಹೆಚ್ಚುತ್ತಿರುವ ನಿರುದ್ಯೋಗ, ಕುಂಟುತ್ತಿರುವ ಜಿಎಸ್​ಟಿ ಯುಗ, ಬ್ಯಾಂಕಿಂಗ್ ವಲಯದ ‘ಅನಾರೋಗ್ಯ’, ಕಚ್ಚಾವಸ್ತುಗಳ ದುಬಾರಿ ಬೆಲೆ, ಕಚ್ಚಾತೈಲದ ಬೆಲೆ ಏರಿಕೆ… ಒಂದೇ, ಎರಡೇ… ಈ ಎಲ್ಲ ಸಮಸ್ಯೆಗಳ ನಡುವೆ ಸಹಜವಾಗಿಯೇ ಆರ್ಥಿಕ ಕೊರತೆ ಅಧಿಕವಾಗಿರುತ್ತದೆ; ತೆರಿಗೆ ಸಂಗ್ರಹ ಸಾಮಾನ್ಯವಾಗಿರುತ್ತದೆ. ಇಂತಹ ಸನ್ನಿವೇಶದಲ್ಲಿ ದೇಶದ ಹಣಕಾಸು ಸಚಿವರ ಹೊಣೆ ಗಾರಿಕೆಯನ್ನು ನಿಭಾಯಿಸುವುದು ಬರೀ ಕಷ್ಟದ ಕೆಲಸವಲ್ಲ, ಅದೊಂದು ಸವಾಲೇ ಸರಿ. ಆದರೂ ಇತ್ತೀಚೆಗೆ ಕೇಂದ್ರ ಸರ್ಕಾರ ಆರ್ಥಿಕತೆಯ ಚೇತರಿಕೆಗಾಗಿ ಕೆಲವು ಮಧ್ಯಂತರ ಕ್ರಮಗಳನ್ನು ಕೈಗೊಂಡಿರುವುದರಿಂದ ಉದ್ಯಮ ವಲಯ ಈಗ ಭಾರಿ ಬೇಡಿಕೆಗಳನ್ನೇನೂ ಮುಂದಿಡುತ್ತಿಲ್ಲ ಎಂಬುದು ಹಣಕಾಸು ಸಚಿವರಿಗೆ ಸಮಾಧಾನ ತರುವ ಸಂಗತಿ. ಮೂಲಸೌಕರ್ಯ, ಗ್ರಾಮೀಣ ಅಭಿವೃದ್ಧಿಗೆ ಹೆಚ್ಚು ಬಜೆಟ್​ನಲ್ಲಿ ಹಣ ನೀಡಿದರೆ, ಸರಕುಗಳಿಗೆ ಬೇಡಿಕೆ ಹೆಚ್ಚುತ್ತದೆ; ಶ್ರೀಮಂತ ಉದ್ಯಮಸಂಸ್ಥೆಗಳು ಹೆಚ್ಚು ಹಣ ತೊಡಗಿಸಲು ಮುಂದಾಗುತ್ತವೆ; ಅದರಿಂದ ಆರ್ಥಿಕತೆಯನ್ನು ಮೇಲೆತ್ತಲು ಸಹಾಯವಾಗುತ್ತದೆ ಎಂಬುದು ದೇಶದ ಬಹುತೇಕ ಆರ್ಥಿಕ ತಜ್ಞರು ಮತ್ತು ಉದ್ಯಮಪತಿಗಳ ಅನಿಸಿಕೆ.

    ಕೆಲವೇ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 11 ಪ್ರಮುಖ ಉದ್ಯಮಿಗಳ ಜತೆ ಸಭೆ ನಡೆಸಿ ರ್ಚಚಿಸಿದ್ದಾರೆ. ರತನ್ ಟಾಟಾ, ಮುಕೇಶ್ ಅಂಬಾನಿ, ಸುನೀಲ್ ಮಿತ್ತಲ್ ಮುಂತಾದ ದಿಗ್ಗಜರು ಇದರಲ್ಲಿದ್ದರು. ಆರ್ಥಿಕತೆ ಬಲಪಡಿಸುವುದು, ಉದ್ಯೋಗ ಸೃಷ್ಟಿ ಹೆಚ್ಚಳ ಈ ಭೇಟಿಯ ಚರ್ಚಾ ವಿಷಯವಾಗಿತ್ತು. ಮಾರುಕಟ್ಟೆಯಲ್ಲಿ ಈ ಕಂಪನಿಗಳ ಒಟ್ಟಾರೆ ಪಾಲು 34.17 ಲಕ್ಷ ಕೋಟಿ ರೂ.; ಒಟ್ಟು ಆದಾಯ 2018-19ರಲ್ಲಿ 21.32 ಲಕ್ಷ ಕೋಟಿ; ಅಂದರೆ ಜಿಡಿಪಿಯ ಶೇಕಡ 10ರಷ್ಟು; ಒಟ್ಟು ಲಾಭ 1.19 ಲಕ್ಷ ಕೋಟಿ ರೂ.! ನಾಳೆ ಬಜೆಟ್ಟನ್ನು ಇವರೆಲ್ಲ ಮುಕ್ತಕಂಠದಿಂದ ಹೊಗಳಿದರೂ ಇವರು ಬಂಡವಾಳ ಹೂಡದೆ ದೇಶದ ಆರ್ಥಿಕತೆ ಒಂದಿಂಚೂ ಮುಂದೆ ಹೋಗುವುದಿಲ್ಲ ಎಂಬುದು ಪ್ರಧಾನಿಗೆ ಚೆನ್ನಾಗಿ ಗೊತ್ತು. ಪ್ರಧಾನಿಯ ಮನವೊಲಿಕೆಗೆ ಇವರೆಲ್ಲ ತಲೆಬಾಗಿದರೂ ಹೂಡಿಕೆಯ ಪೂರ್ಣ ಅಧಿಕಾರ ಇವರ ಕೈಯಲ್ಲಿಲ್ಲ. ಪ್ರತಿ ಕಂಪನಿಗೂ ಷೇರುದಾರರಿದ್ದಾರೆ. ಅವರ ಪಾಲೇ ಹತ್ತಿರತ್ತಿರ ಶೇಕಡ 40-50ರಷ್ಟಿದೆ. ಹೂಡಿಕೆಗೆ ತಕ್ಕ ಲಾಭ ಬರುತ್ತದೆ ಎಂದರೆ ಮಾತ್ರ ಷೇರುದಾರರು ಒಪ್ಪಿಗೆ ಕೊಡುತ್ತಾರೆ. ಲಾಭ ಖಚಿತವಾಗುವುದು ಯಾವಾಗ? ಬೇಡಿಕೆ ಹೆಚ್ಚಿದಾಗ. ಹೂಡಿಕೆ ಮಾಡದೇ ಬೇಡಿಕೆ ಕುದುರುವುದಿಲ್ಲ. ಬೇಡಿಕೆ ಹೆಚ್ಚದೆ ಹೂಡಿಕೆ ಮಾಡಲು ಆಗುವುದಿಲ್ಲ. ಇದೊಂದು ರೀತಿಯ ಚಕ್ರವ್ಯೂಹ. ಇದನ್ನು ಭೇದಿಸುವುದೇ ಈಗ ಕೇಂದ್ರ ಸರ್ಕಾರಕ್ಕಿರುವ ದೊಡ್ಡ ಸವಾಲು.

    ಪ್ರಮುಖ ವಲಯಗಳ ಬೇಡಿಕೆಗಳು

    ಆಟೋಮೊಬೈಲ್: 2019ರ ಉದ್ದಕ್ಕೂ ಈ ವಲಯ ಹಲವು ಸಂಕಷ್ಟಗಳನ್ನು ಎದುರಿಸಿದೆ. ಕಳೆದೆರಡು ದಶಕಗಳಲ್ಲೇ ಅತಿ ಕಡಿಮೆ ಎನ್ನುವಷ್ಟು ಇಳಿದಿತ್ತು ವಾಹನಗಳ ಮಾರಾಟ. ಹಾಗಾಗಿ ಇದು ಬಜೆಟ್ಟನ್ನು ಚಾತಕಪಕ್ಷಿಯಂತೆ ಕಾಯುತ್ತಿದೆ. ಒಂದು ಗಮನಿಸಬೇಕಾದ ವಿಷಯವೆಂದರೆ ಈಗ ಕೇಂದ್ರ ಸರ್ಕಾರ ‘ಕೇಳಿಸಿಕೊಳ್ಳುವ’ ಸ್ಥಿತಿಯಲ್ಲಿದೆ. ಆರ್ಥಿಕವೃದ್ಧಿಯ ನಿಧಾನಗತಿಗೆ ಸರ್ಕಾರವೇ ಒಂದು ಗತಿ ಕಾಣಿಸಬೇಕು. ಆ ಮೂಲಕ ತಲಾದಾಯ ಹೆಚ್ಚಿಸಬೇಕು. ಕೆಲ ವರ್ಷಗಳಲ್ಲಿ ವಾಹನಗಳ ಬೆಲೆ ಶೇಕಡ 10-12ರಷ್ಟು ಏರಿದೆ. ಏಪ್ರಿಲ್​ನಲ್ಲಿ ಬಿಎಸ್-6 ನಿಯಮ ಜಾರಿಗೆ ಬಂದ ಬಳಿಕ ಮತ್ತೆ ಶೇಕಡ 8-10ರಷ್ಟು ಬೆಲೆ ಏರಲಿದೆ. ಆಗ ಜನ ಇನ್ನಷ್ಟು ಹಿಂದೆ ಸರಿಯುತ್ತಾರೆ. ಜಿಎಸ್​ಟಿಯನ್ನು ಶೇ 28ರಿಂದ 18ಕ್ಕೆ ಇಳಿಸಿದರೆ ಈ ಹೊಡೆತದಿಂದ ಸ್ವಲ್ಪಮಟ್ಟಿಗೆ ಬಚಾವಾಗಬಹುದು. 1995ಕ್ಕಿಂತ ಮುಂಚಿನ ವಾಹನಗಳನ್ನು ರದ್ದು ಮಾಡುವುದಕ್ಕೆ ಪ್ರತಿಯಾಗಿ ಸರ್ಕಾರ ಸಹಾಯಧನ/ಉತ್ತೇಜನ ಮೊತ್ತ ನೀಡಬೇಕು. ರಾಜ್ಯ ಸರ್ಕಾರಗಳ ಸಾರಿಗೆ ಸಂಸ್ಥೆಗಳು ಹೆಚ್ಚು ಬಸ್​ಗಳನ್ನು ಖರೀದಿಸಲು ಕೇಂದ್ರ ಪ್ರೋತ್ಸಾಹಿಸಬೇಕು.

    ಉಕ್ಕು ಉದ್ಯಮ: ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಳ ಮಾಡಿದರೆ ಉಕ್ಕು ಉದ್ಯಮ ಚೇತರಿಸಿಕೊಳ್ಳುತ್ತದೆ. ಭಾರತೀಯ ರೈಲ್ವೆಯೇ ಈ ಉದ್ಯಮದ ಬಹುದೊಡ್ಡ ಗ್ರಾಹಕ. ಒಟ್ಟು ಉತ್ಪಾದನೆಯ ಶೇಕಡ 30ರಷ್ಟನ್ನು ರೈಲ್ವೆಯೇ ಖರೀದಿಸುತ್ತದೆ. ರೈಲುಮಾರ್ಗಗಳ ಡಬ್ಲಿಂಗ್​ನಿಂದ ಈ ಉದ್ಯಮಕ್ಕೆ ಚೇತರಿಕೆ ಸಾಧ್ಯ. ಇದಕ್ಕೆ ಕಲ್ಲಿದ್ದಲೇ ಮುಖ್ಯ ಕಚ್ಚಾವಸ್ತು. ಶೇಕಡ 70ರಷ್ಟು ಹೂಡಿಕೆ ಇದಕ್ಕೇ ಖರ್ಚಾಗುತ್ತಿದೆ. ಭಾರತದಲ್ಲೇ ಉತ್ತಮ ಗುಣಮಟ್ಟದ ಕಲ್ಲಿದ್ದಲು ಸಿಗುವಂತೆ ಮಾಡಬೇಕು. ಕಳೆದ ವರ್ಷ ಆಟೋಮೊಬೈಲ್ ಮತ್ತು ರಿಯಲ್​ಎಸ್ಟೇಟ್ ವಲಯಗಳು ನಲುಗಿಹೋಗಿರುವುದು ಉಕ್ಕು ಉದ್ಯಮದ ಮೇಲೆ ದುಷ್ಪರಿಣಾಮ ಉಂಟು ಮಾಡಿದೆ. ಹಾಗಾಗಿ ಕಾರು ಮಾರಾಟ ಮತ್ತು ಮನೆಗಳ ನಿರ್ಮಾಣ ಹೆಚ್ಚಳವಾಗುವುದಕ್ಕೆ ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಈ ವಲಯ ಎದುರುನೋಡುತ್ತಿದೆ.

    ಪ್ರವಾಸೋದ್ಯಮ: ಕಳೆದ ವರ್ಷ ಜುಲೈನಲ್ಲಿ ಮಂಡಿಸಿದ ಬಜೆಟ್​ನಲ್ಲಿ ದೇಶದ ಪ್ರವಾಸೋದ್ಯಮ ತಾಣಗಳ ಮೂಲಸೌಕರ್ಯ ಹೆಚ್ಚಿಸಲು 1378 ಕೋಟಿ ರೂ. ಅನುದಾನ ಸಿಕ್ಕಿತ್ತು. ಈ ಬಾರಿ ಇದನ್ನು ಹೆಚ್ಚಿಸಬೇಕಲ್ಲದೆ, ‘ಗ್ರೀನ್ ಟೂರಿಸಂ’ಗೆ ಆದ್ಯತೆ ನೀಡಬೇಕು. ಪ್ರಾದೇಶಿಕವಾಗಿ ಬಹುಆಯಾಮದ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು. ವಿದೇಶಿ ಪ್ರವಾಸಿಗರನ್ನು ಸೆಳೆಯುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಈ ವಲಯದ ಬೇಡಿಕೆ.

    ಕೃಷಿ ವಲಯ: 2019ರಲ್ಲಿ ಶೇಕಡ 2.9ರಷ್ಟು ಬೆಳವಣಿಗೆ ದಾಖಲಿಸಿದ್ದ ಈ ಕ್ಷೇತ್ರ 2020ರಲ್ಲಿ ಶೇಕಡ 2.8ರಷ್ಟು ಬೆಳವಣಿಗೆ ದಾಖಲಿಸಬಹುದೆಂಬ ಅಂದಾಜಿದೆ. ಬೆಳವಣಿಗೆ ದರ ಹೆಚ್ಚಿಸುವುದಕ್ಕಾಗಿ ರಸಗೊಬ್ಬರಗಳ ಮೇಲಿನ ಜಿಎಸ್​ಟಿಯನ್ನು ಈಗಿರುವ ಶೇಕಡ 18ರಿಂದ 12ಕ್ಕೆ ಇಳಿಸಬೇಕು. ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಇರುವ ತೊಂದರೆಗಳನ್ನು ನಿವಾರಿಸಬೇಕು. ಮೌಲ್ಯವರ್ಧನೆಯ ಮೂಲಸೌಕರ್ಯಕ್ಕೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕು ಎಂಬ ಹಲವು ಬೇಡಿಕೆಗಳನ್ನು ಈ ವಲಯ ಸರ್ಕಾರದ ಮುಂದಿಟ್ಟಿದೆ.

    ಮಾಹಿತಿ ತಂತ್ರಜ್ಞಾನ: ದೇಶದಾದ್ಯಂತ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆಂಡ್ ಡಿ) ಕೇಂದ್ರಗಳ ಸಂಖ್ಯೆ ಹೆಚ್ಚಿಸಬೇಕು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ರೋಬೋಟಿಕ್ಸ್​ನಂತಹ ಕ್ಷೇತ್ರದಲ್ಲಿ ಸಂಶೋಧನೆ-ಅಭಿವೃದ್ಧಿ ಕೈಗೊಳ್ಳುವ ಕಂಪನಿಗಳಿಗೆ ತೆರಿಗೆ ವಿನಾಯ್ತಿ/ರಿಯಾಯ್ತಿ ಸೌಲಭ್ಯಗಳನ್ನು ಮುಂದುವರಿಸಬೇಕು. ರಫ್ತು ಪ್ರಮಾಣ ಹೆಚ್ಚಳಕ್ಕೆ ಅನುವಾಗುವಂತೆ ವಿಶೇಷ ಕೈಗಾರಿಕಾ ವಲಯಗಳಿಗೆ (ಎಸ್​ಇಝುಡ್) ಕಾಯಕಲ್ಪ ಮಾಡಬೇಕು.

    ಆಭರಣ ಉದ್ಯಮ: ದೇಶದ ಜಿಡಿಪಿಗೆ ಈ ಕ್ಷೇತ್ರದ ಕೊಡುಗೆ ಶೇಕಡ 7ರಷ್ಟಿದೆ. ಅಲ್ಲದೆ ಸರಕುಗಳ ರಫ್ತಿನಲ್ಲಿ ಶೇಕಡ 15ರಷ್ಟು ಪಾಲು ಹೊಂದಿದೆ. ಈಗ ಶೇಕಡ 12.5ರಷ್ಟಿರುವ ಚಿನ್ನ ಆಮದು ಸುಂಕವನ್ನು ಇನ್ನಷ್ಟು ಕಡಿಮೆ ಮಾಡಬೇಕು. ಇದರೊಂದಿಗೆ ಚಿನ್ನದ ರೂಪದಲ್ಲಿ ಉಳಿತಾಯಕ್ಕೆ ಪ್ರೋತ್ಸಾಹ ಕೊಡುವ ಯೋಜನೆಗಳನ್ನು ಪ್ರಕಟಿಸಿದರೆ ಉತ್ತಮ ಎಂಬುದು ಈ ವಲಯದ ಅಭಿಪ್ರಾಯ.

    ಜವಳಿ ಉದ್ಯಮ: ನೇರವಾಗಿ ನಾಲ್ಕೂವರೆ ಕೋಟಿ ಜನರಿಗೆ ಮತ್ತು ಪರೋಕ್ಷವಾಗಿ 6 ಕೋಟಿ ಜನರಿಗೆ ಉದ್ಯೋಗ ಕಲ್ಪಿಸಿರುವ ಈ ಕ್ಷೇತ್ರಕ್ಕೆ ರಾಜ್ಯ ಮತ್ತು ಕೇಂದ್ರ ತೆರಿಗೆಯಲ್ಲಿ ರಿಯಾಯ್ತಿ ನೀಡುವುದಾಗಿ ಸರ್ಕಾರ ಈ ಹಿಂದೆ ವಾಗ್ದಾನ ಮಾಡಿತ್ತು. ಈ ಬಜೆಟ್​ನಲ್ಲಿ ಆ ಮಾತನ್ನು ಉಳಿಸಿಕೊಳ್ಳುತ್ತದೆಯೇ ಎಂಬುದು ಕುತೂಹಲಕರ. ಪ್ರಮುಖ ವಿದೇಶಿ ಮಾರುಕಟ್ಟೆಗಳಿಗೆ ಸುಂಕರಹಿತ ರಫ್ತು ಸಾಧ್ಯವಾದರೆ ಈ ಕ್ಷೇತ್ರ ಚೇತರಿಸಿಕೊಳ್ಳುತ್ತದೆ.

    ರಿಯಲ್ ಎಸ್ಟೇಟ್: ಉದ್ಯಮದ ಬೆಳವಣಿಗೆಗೆ ಪೂರಕವಾಗಿ ಕೈಗೊಳ್ಳುವ ಕೆಲವು ನಿರ್ಧಾರಗಳಿಗೆ ದಂಡ/ಶಿಕ್ಷೆ ಎದುರಿಸಬೇಕಾದ ಭಯ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿದೆ. ಕಾನೂನಿನಲ್ಲಿ ಬದಲಾವಣೆ ಮಾಡುವ ಮೂಲಕ ಈ ಭಯ ನಿವಾರಿಸಬೇಕಾಗಿದೆ. ನಾನಾ ಕಾರಣಗಳಿಂದಾಗಿ ದೇಶಾದ್ಯಂತ ಗೃಹ ನಿರ್ಮಾಣ ಯೋಜನೆಗಳು ಸ್ಥಗಿತಗೊಂಡಿವೆ. ಅವುಗಳ ಪುನರಾರಂಭಕ್ಕೆ ಸುಮಾರು 25 ಸಾವಿರ ಕೋಟಿ ರೂ. ಬಂಡವಾಳದ ಅವಶ್ಯಕತೆ ಇದೆ.

    ಆರೋಗ್ಯ ಕ್ಷೇತ್ರ: ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಹೆಚ್ಚಿನ ಅನುದಾನ ಒದಗಿಸುವ ಅವಶ್ಯಕತೆ ಇದೆ. ಸಂಶೋಧನೆ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಕೆಲಸ ಮಾಡುವ ಭಾರತೀಯ ಔಷಧ ಕಂಪನಿಗಳಿಗೆ ತೆರಿಗೆ ಪ್ರೋತ್ಸಾಹಕಗಳನ್ನು ಘೊಷಿಸಬೇಕಿದೆ. ಆಯುಷ್ಮಾನ್ ಭಾರತ್ ಮತ್ತಿತರ ಜನಸ್ನೇಹಿ ಆರೋಗ್ಯ ಕಾರ್ಯಕ್ರಮಗಳನ್ನು ಖಾಸಗಿ ವಲಯ ಮನಃಪೂರ್ವಕವಾಗಿ ಒಪ್ಪಿಕೊಳ್ಳಲು ಅನುವಾಗುವಂತೆ ಅವುಗಳ ವೆಚ್ಚ ಪ್ರಮಾಣವನ್ನು ಹೆಚ್ಚಿಸಬೇಕು. ಇದಕ್ಕೆ ಅಗತ್ಯವಿರುವ ಅನುದಾನವನ್ನು ಬಜೆಟ್​ನಲ್ಲಿ ಒದಗಿಸಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts