ಎಸ್ಸಿ-ಎಸ್ಟಿಗೆ ಉದ್ಯೋಗ ಸಮೃದ್ಧಿ

>

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ನಿರುದ್ಯೋಗಿ ಯುವಕ-ಯುವತಿಯರಿಗೆ ಸುಮಾರು 800 ಕೋಟಿ ರೂ. ವೆಚ್ಚದಲ್ಲಿ ಸಾಮಾಜಿಕ ಉದ್ಯಮಶೀಲತಾ ಕಾರ್ಯಕ್ರಮದಡಿ ಖಾಸಗಿ ಸಂಸ್ಥೆಗಳು ಮತ್ತು ಕಾಪೋರೇಟ್ ಉದ್ದಿಮೆಗಳ ಸಹಭಾಗಿತ್ವದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ‘ಸಮೃದ್ಧಿ’ ಯೋಜನೆ ಜಾರಿಗೆ ಬಂದಿದೆ.

ಮಂಗಳವಾರ ಖಾಸಗಿ ಹೋಟೆಲ್​ನಲ್ಲಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ಇಲಾಖೆ ಅಧಿಕಾರಿಗಳು ವಿವಿಧ 31ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡರು.

‘ಈ ವರ್ಷ ಸುಮಾರು ಹತ್ತು ಸಾವಿರ ಮಂದಿಗೆ ಈ ಯೋಜನೆಯಡಿ ಸ್ವಯಂ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ. ಆಯ್ಕೆಯಾದ ಪ್ರತಿ ಫಲಾನುಭವಿಗೆ ಗರಿಷ್ಠ 10 ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡಲಾಗುವುದು. ಎಸ್​ಸಿ-ಎಸ್​ಟಿ ಜನಾಂಗಗಳ ನಿರುದ್ಯೋಗಿ ಯುವಕ- ಯುವತಿಯರಿಗೆ ಅತ್ಯಧಿಕ ಉದ್ಯೋಗ ಕಲ್ಪಿಸುವ ಭಾರತದ ಮೊಟ್ಟಮೊದಲ ಮಹತ್ವಾಕಾಂಕ್ಷಿ ಬೃಹತ್ ಕಾರ್ಯಕ್ರಮ ಇದಾಗಲಿದೆ’ ಎಂದು ಸಚಿವರು ವಿವರಿಸಿದರು.

‘ಸಮೃದ್ಧಿ ಯೋಜನೆಯಡಿ ಆರ್ಥಿಕ ಚಟುವಟಿಕೆ ಕೈಗೊಳ್ಳಲು ಬಯಸುವ ಫಲಾನುಭವಿಗಳಿಗೆ ಮಾರುಕಟ್ಟೆ ಹಾಗೂ ತಾಂತ್ರಿಕ ನೆರವು ಒದಗಿಸಲು ವಿವಿಧ ಸಂಸ್ಥೆಗಳೊಂದಿಗೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ವಿವಿಧ ಬ್ರಾ್ಯಂಡೆಡ್ ಸಂಸ್ಥೆಗಳ ಸಹಯೋಗದೊಂದಿಗೆ ಸಮೃದ್ಧಿ ಯೋಜನೆ ಜಾರಿಗೆ ತರಲಾಗುತ್ತಿದೆ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಅಗತ್ಯ ಅರ್ಹತೆಗಳು

  • ಎಸ್ಸಿ-ಎಸ್ಟಿ ನಿರುದ್ಯೋಗಿಗಳಿಗೆ ಸೀಮಿತ
  • ಕರ್ನಾಟಕ ಕಾಯಂ ನಿವಾಸಿಯಾಗಿರಬೇಕು
  • ಕನಿಷ್ಠ ವಿದ್ಯಾರ್ಹತೆ ಎಸ್​ಎಸ್​ಎಲ್​ಸಿ
  • ವಯೋಮಿತಿ 21ರಿಂದ 50 ವರ್ಷಗಳು
  • ಕುಟುಂಬದ ವಾರ್ಷಿಕ ವರಮಾನ 5 ಲಕ್ಷ ರೂಪಾಯಿ ಮೀರಿರಬಾರದು
  • ಮೆರಿಟ್, ವಯಸ್ಸು ಆಧರಿಸಿ ಆಯ್ಕೆ ಪ್ರಕ್ರಿಯೆ
  • ಸ್ವಂತ, ಬಾಡಿಗೆ ಮಳಿಗೆ ಹೊಂದಿರಬೇಕು
  • ನೋಂದಾಯಿಸಿಕೊಳ್ಳಲು ಕಲ್ಯಾಣ ಕೇಂದ್ರ ಡಾಟ್ ಕಾಮ್ ವೆಬ್ ತಾಣ
  • ನವೆಂಬರ್ 7ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ

ಒಡಂಬಡಿಕೆಯಾದ ಕಂಪನಿಗಳು

ಬಿಗ್ ಬಾಸ್ಕೆಟ್, ಜಿಇ ಹೆಲ್ತ್ ಕೇರ್, ಕಾಫಿ ಬೋರ್ಡ್, ಕೆಎಂಎಫ್, ಓಲಾ, ಹಟ್ಟಿ ಕಾಫಿ, ಚಾಯ್ ಪಾಯಿಂಟ್, ಜ್ಯೋತಿ ಲ್ಯಾಬೊರೇಟರಿ, ಮೇರು ಕ್ಯಾಬ್ಸ್, ಐಸಿಐಸಿಐ ಫೌಂಡೇಷನ್, ಕ್ಲಾಸಿಕ್ ಪೋಲೋ, ಚಿಕ್ಕಪೇಟೆ ದಮ್ ಬಿರಿಯಾನಿ, ಮಹಿಂದ್ರಾ ಎಲೆಕ್ಟ್ರಿಕ್, ಕುರ್ಲಾನ್, ಬಾಟಾ, ಪಾರಾಗಾನ್, ಖಾದಿಮ್್ಸ, ಟಿಟಿಕೆ ಪ್ರ್ರೆಸ್ಟೀಜ್ ಸೇರಿ 31 ಕಂಪನಿಗಳ ಜತೆ ಸರ್ಕಾರ ಒಡಂಬಡಿಕೆ ಮಾಡಿಕೊಂಡಿದೆ. ಮೊಬೈಲ್ ಮಾರಾಟ ಮತ್ತು ದುರಸ್ತಿ, ಬ್ರಾ್ಯಂಡೆಡ್ ಮೆಡಿಕಲ್ ಸ್ಟೋರ್ಸ್, ಚಿಲ್ಲರೆ ಮಾರಾಟ ಮಳಿಗೆಗಳು, ಬ್ರಾ್ಯಂಡೆಡ್ ಪಾದರಕ್ಷೆ ಮಾರಾಟ ಮಳಿಗೆಗಳು ಮುಂತಾದ ವ್ಯಾಪಾರಗಳನ್ನು ಆರಂಭಿಸಲು ಸಂಬಂಧಿಸಿದ ಸಂಸ್ಥೆಗಳು ತರಬೇತಿ, ಮಾರುಕಟ್ಟೆ ಹಾಗೂ ತಾಂತ್ರಿಕ ನೆರವು ನೀಡಲಿವೆ. ಚಿಲ್ಲರೆ ಮಾರಾಟಕ್ಕೆ ಅವಕಾಶ ಇರುವ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಆರಂಭಿಸಲು ಅಗತ್ಯ ಆರ್ಥಿಕ ನೆರವು ನೀಡಲಾಗುವುದು.

ಸಮೃದ್ಧಿ ಯೋಜನೆಯಲ್ಲಿ ಚಿಲ್ಲರೆ ಮಳಿಗೆಗಳ ನಿರ್ವಹಣೆ, ತೆರಿಗೆ ನೀತಿ ಮತ್ತು ಜಿಎಸ್​ಟಿ, ದಾಸ್ತಾನು ನಿರ್ವಹಣೆ, ತಂತ್ರಜ್ಞಾನ ಕೌಶಲ ಇನ್ನಿತರ ಕ್ಷೇತ್ರಗಳಲ್ಲಿ ಯುವಕ ಮತ್ತು ಯುವತಿಯರಿಗೆ ತರಬೇತಿ ನೀಡಲಾಗುತ್ತದೆ. ಬಳಿಕ ಸರ್ಕಾರ ವೃತ್ತಿ ಕೌಶಲ ಪ್ರಮಾಣೀಕರಿಸಿ, ಚಿಲ್ಲರೆ ಮಾರಾಟ ವಲಯದಲ್ಲಿ ಸೂಕ್ತ ಕ್ಷೇತ್ರ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

| ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ