ಭೂಗತ ಪಾತಕಿ ಅಸ್ಗರ್ ಆಲಿ ಅರೆಸ್ಟ್

ಮಂಗಳೂರು:  ಮೂರು ಕೊಲೆ ಸೇರಿದಂತೆ 9 ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಪಾತಕಿ ಅಸ್ಗರ್ ಆಲಿ ಹಾಗೂ ಆತನಿಗೆ ನಕಲಿ ಪಾಸ್‌ಪೋರ್ಟ್ ನೀಡಿ ಪರಾರಿಯಾಗಲು ಸಹಕರಿಸಿದ ನವಾಝ್ ಹಾಗೂ ರಶೀದ್ ಎಂಬುವರನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಅಸ್ಗರ್ ಆಲಿ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 3 ಕೊಲೆ ಪ್ರಕರಣ ಸೇರಿದಂತೆ ಕೊಲೆ ಬೆದರಿಕೆ, ಸುಲಿಗೆ, ದರೋಡೆ ಸೇರಿದಂತೆ 9 ಪ್ರಕರಣಗಳಿವೆ. ಆರೋಪಿ 2007ರಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ದುಬೈಗೆ ಪರಾರಿಯಾಗಿದ್ದ. ಹಲವು ವರ್ಷಗಳಿಂದ ವಿದೇಶದಲ್ಲೇ ಇದ್ದ ಆತ ಕೆಲ ಸಮಯದ ಹಿಂದೆ ಊರಿಗೆ ಮರಳಿದ್ದ.

ಊರಿಗೆ ಬಂದ ಬಳಿಕ ಕೇರಳದ ಉಪ್ಪಳದಲ್ಲಿ ತಲೆಮರೆಸಿಕೊಂಡಿದ್ದ. ಈ ಬಗ್ಗೆ ನಗರ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಕಂಕನಾಡಿ ಠಾಣಾ ಪೊಲೀಸ್ ಇನ್‌ಸ್ಪೆಕ್ಟರ್ ಜಗದೀಶ್ ಮತ್ತು ಸಿಸಿಬಿ ಇನ್‌ಸ್ಪೆಕ್ಟರ್ ಶ್ಯಾಮಸುಂದರ್ ಅವರನ್ನೊಳಗೊಂಡ ತಂಡ ಉಪ್ಪಳದಲ್ಲಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆತನಿಗೆ ನಕಲಿ ಪಾಸ್‌ಪೋರ್ಟ್ ಮಾಡಲು ಸಹಕರಿಸಿದ ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗೊಳಪಡಿಸಲಾಗಿದೆ.

ಮೂರು ಕೊಲೆ ಕೇಸು 
2005ರಲ್ಲಿ ನಡೆದ ಪೊಳಲಿ ಅನಂತು ಕೊಲೆ, ಟಾರ್ಗೆಟ್ ಗ್ರೂಪ್‌ನ ಇಲ್ಯಾಸ್ ಕೊಲೆ, ಉಳ್ಳಾಲದ ಯುವತಿ ಶಕಿನಾ ಕೊಲೆ ಪ್ರಕರಣದ ಆರೋಪವೂ ಅಸ್ಗರ್ ಮೇಲಿದೆ. ಈ ಯುವತಿಯ ಬಗ್ಗೆ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆದರೆ ಪಾತಕಿ ಮಾಡೂರು ಇಸುಬು ಬಂಧನ ವೇಳೆ ಯುವತಿ ಶಕಿನಾ ಕೊಲೆಯಾಗಿರುವ ಮತ್ತು ಇದರಲ್ಲಿ ಅಸ್ಗರ್ ಆಲಿ ಶಾಮೀಲಾಗಿರುವ ಬಗ್ಗೆ ಆತ ಬಾಯ್ಬಿಟ್ಟಿದ್ದ.

ಪಾಸ್‌ಪೋರ್ಟ್‌ನಲ್ಲಿ ಆಶ್ರ್ ಆಲಿ
ಅಸ್ಗರ್ ಆಲಿ ನಕಲಿ ಪಾಸ್‌ಪೋರ್ಟ್ ಹೊಂದಿದ್ದು, ಅದರಲ್ಲಿ ಅಶ್ರ್ ಆಲಿ ಎಂದು ಹೆಸರು ಕೊಟ್ಟಿದ್ದ. ಈ ನಕಲಿ ಪಾಸ್‌ಪೋರ್ಟ್ ಮಾಡಲು ಸಹಕಾರ ನೀಡಿದ ಇಬ್ಬರನ್ನು ಬಂಧಿಸಲಾಗಿದೆ. ಅವರಿಂದ ಸುಮಾರು 35 ಪಾಸ್‌ಪೋರ್ಟ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಅಸಲಿಯೆಷ್ಟು? ನಕಲಿಯೆಷ್ಟು ಎಂದು ಪತ್ತೆಹಚ್ಚಲಾಗುವುದು. ನಕಲಿ ಪಾಸ್‌ಪೋರ್ಟ್ ಜಾಲದ ಹಿಂದೆ ಇನ್ನಷ್ಟು ಮಂದಿ ಶಾಮೀಲಾಗಿರುವ ಸಾಧ್ಯತೆಯಿದ್ದು, ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಯಾಸ್ ಕೊಲೆಗೆ ದುಬೈನಲ್ಲಿದ್ದೇ ಸುಪಾರಿ
ರಶೀದ್ ಮಲಬಾರಿ ನಿಕಟವರ್ತಿಯಾಗಿರುವ ಆಸ್ಗರ್ ಆಲಿ ಮತ್ತು ಟಾರ್ಗೆಟ್ ಗ್ಯಾಂಗ್‌ನ ಇಲ್ಯಾಸ್ ಮಧ್ಯೆ ವೈಮನಸ್ಸಿದ್ದು, ಇಲ್ಯಾಸ್ ಕೊಲೆಗೆ ದುಬೈನಲ್ಲಿದ್ದೇ ಸುಪಾರಿ ನೀಡಿದ್ದ. ಇಲ್ಯಾಸ್ ಕೊಲೆಯಾದ ಬಳಿಕ ಪ್ರಕರಣದ ಆರೋಪಿಗಳನ್ನು ಮುಂಬೈಗೆ ಕರೆಸಿ ಔತಣ ಕೂಟವನ್ನೂ ಏರ್ಪಡಿಸಿದ್ದಾನೆಂದು ತನಿಖೆಯಿಂದ ತಿಳಿದು ಬಂದಿದೆ. ರಶೀದ್ ಮಲಬಾರಿ ಸಹಚರನಾಗಿರುವ ಆಸ್ಗರ್ ಆಲಿ ಮೂಲಕ ಮಲಬಾರಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *