ಭೂಗತ ಪಾತಕಿ ದಾವೂದ್ ಬಂಟನ ಸೆರೆ

ಬೆಂಗಳೂರು: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಂಟ ಸಿಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಅಂತಾರಾಷ್ಟ್ರೀಯ ರಕ್ತಚಂದನ ಮತ್ತು ನಕಲಿ ನೋಟು ದಂಧೆ ನಡೆಸುತ್ತಿದ್ದ ದಕ್ಷಿಣ ಭಾರತದ ಕಿಂಗ್​ಪಿನ್ ಅಬ್ದುಲ್ ರಷೀದ್ ಅಲಿಯಾಸ್ ಪುತ್ತು ಬಾಯರ್ (48) ಬಂಧಿತ ಡಿ ಗ್ರೂಪ್ ಸದಸ್ಯ. ಈತನ ಜತೆಗೆ 12 ಮಂದಿ ಜೈಲು ಸೇರಿದ್ದಾರೆ.

ಕಳೆದ 10 ವರ್ಷಗಳಿಂದ ಭೂಗತನಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಅಬ್ದುಲ್ ರಷೀದ್, ಸಹಚರರಾದ ಎಚ್​ಎಎಲ್​ನ ಜುಬೇರ್ ಖಾನ್ (33), ಸಲೀಂ ಖಾನ್ (50), ತಾಹೀರ್ ಖಾನ್ (25), ಬಂಟ್ವಾಳದ ಎಂ.ಎಸ್. ಬಾಷಾ (40), ಶಫಿ (30), ಮುನ್ನಾ ಮಹಮ್ಮದ್ ಶಬೀರ್ (25), ಕಾಸರಗೋಡಿನ ನೌಷಾದ್ (27), ಸಿದ್ಧಿಕ್ ಅಬುಬೆಕರ್ (40), ಇಬ್ರಾಹಿಂ (28), ಮಹಮ್ಮದ್ ಅನ್ವರ್ (23), ಕೋಣನಕುಂಟೆಯ ಮುಬಾರಕ್ (26) ಮತ್ತು ವಿಜಯನಗರದ ಆಲಿಖಾನ್ (40) ಬಂಧಿತರು.

ಇನ್​ಸ್ಪೆಕ್ಟರ್ ಎಸ್.ಕೆ. ಮಾಲತೇಶ್, 2 ತಿಂಗಳ ಕಾಲ ಮಾಹಿತಿ ಕಲೆ ಹಾಕಿದ್ದರು. ಇವರು ಕೊಟ್ಟ ಮಾಹಿತಿ ಮೇರೆಗೆ ದಾಳಿ ನಡೆಸಿ 3.5 ಕೋಟಿ ರೂ. ಮೌಲ್ಯದ 4 ಸಾವಿರ ಕೆಜಿ ರಕ್ತ ಚಂದನ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ. ಸುನೀಲ್​ಕುಮಾರ್ ತಿಳಿಸಿದ್ದಾರೆ.

ರಕ್ತ ಚಂದನ ಸಾಗಣೆ: ಕಿಂಗ್​ಪಿನ್ ಅಬ್ದುಲ್ ರಷೀದ್, ಕತಾರ್​ಗೆ ಸಾಂಬಾರ ಪದಾರ್ಥಗಳ ರಫ್ತು ವ್ಯವಹಾರವನ್ನು ನೆಪದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ರಕ್ತಚಂದನ ರವಾನೆ ಮಾಡುತ್ತಿದ್ದ. ಇದಕ್ಕಾಗಿ ಜುಬೇರ್ ಖಾನ್​ನನ್ನು ಬಲಗೈ ಬಂಟ ಮಾಡಿಕೊಂಡು ಹೊಸೂರು ರಸ್ತೆ ಹುಸ್ಕೂರ್, ಸುಬ್ರಮಣ್ಯಪುರ, ಎಲೆಕ್ಟ್ರಾನಿಕ್ಸ್ ಸಿಟಿ, ವಿನಾಯಕನಗರ ಸೇರಿ ವಿವಿಧೆಡೆ ಗೋದಾಮು ತೆರೆದಿದ್ದ. ಜುಬೇರ್ ತನ್ನ ಸಹಚರರ ಜತೆ ಸೇರಿ ಆಂಧ್ರದ ಚಿತ್ತೂರಿನ ಕಾಡಿನಿಂದ ರಕ್ತಚಂದನ ಕದ್ದು ತಂದು ಗೋದಾಮಿನಲ್ಲಿ ಸಂಗ್ರಹಿಸುತ್ತಿದ್ದ. ಬಳಿಕ ವಾಟ್ಸ್​ಆಪ್​ನಲ್ಲಿ ರಕ್ತಚಂದನ ಫೋಟೋವನ್ನು ಅಬ್ದುಲ್ ರಷೀದ್​ಗೆ ಕಳುಹಿಸುತ್ತಿದ್ದ. ಅದನ್ನು ವಿದೇಶದ ಗಿರಾಕಿಗಳಿಗೆ ಕಳುಹಿಸಿ ಬೆಲೆ ನಿಗದಿಪಡಿಸುತ್ತಿದ್ದ.

ವ್ಯವಹಾರ ನಡೆದ ಬಳಿಕ ಅಬ್ದುಲ್ ರಷೀದ್ ಎಲ್ಲಿಗೆ ಯಾವ ರೀತಿ ಕಳುಹಿಸಬೇಕೆಂದು ವಿಳಾಸ ಕೊಡುತ್ತಿದ್ದ. ಅದರಂತೆ ಆರೋಪಿಗಳು ರಕ್ತಚಂದನವನ್ನು ಪ್ಯಾಕ್ ಮಾಡಿ ರವಾನೆ ಮಾಡುತ್ತಿದ್ದರು. ಸುರಕ್ಷಿತವಾಗಿ ಕೈ ಸೇರಿದ ಬಳಿಕ ಅಬ್ದುಲ್ ರಷೀದ್ ಖಾತೆಗೆ ಹಣ ಜಮೆ ಆಗುತ್ತಿತ್ತು.

ಚುನಾವಣೆ ಹಿನ್ನೆಲೆ

ಇನ್​ಸ್ಪೆಕ್ಟರ್ ಎಸ್.ಕೆ. ಮಾಲತೇಶ್ ಮಾಹಿತಿ ಕಲೆ ಹಾಕಿ ಗೋದಾಮು ಪತ್ತೆಹಚ್ಚಿದ್ದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ವಾಹನ ತಪಾಸಣೆ ಇದ್ದ ಕಾರಣ ರಕ್ತಚಂದನ ಸಾಗಾಟ ಸಾಧ್ಯವಾಗಿರಲಿಲ್ಲ. ಆದ್ದರಿಂದ ಗೋದಾಮಿನಲ್ಲಿ ಸಂಗ್ರಹಿಸಿದ್ದರು. ಇದಕ್ಕಾಗಿಯೇ ಕಾದು ಮೇ 17ರಂದು ವಿನಾಯಕನಗರದ ಬಳಿಯ ನ್ಯಾಷನಲ್ ಟ್ರಾವೆಲ್ಸ್​ಗೆ ಸೇರಿದ ಕಾಗೋ ಗೋದಾಮು ಮುಂದೆ ನಿಂತಿದ್ದ ಟಾಟಾ ಏಸ್ ವಾಹನ ಪರಿಶೀಲನೆ ನಡೆಸಿದಾಗ 7 ಬಾಕ್ಸ್​ಗಳಲ್ಲಿ ಶೇಖರಿಸಿದ್ದ 500 ಕೆಜಿ ತುಂಡುಗಳು ಪತ್ತೆಯಾಗಿದ್ದವು. ಸೆರೆಸಿಕ್ಕ ಬಾಷಾ ಕೊಟ್ಟ ಮಾಹಿತಿ ಮೇರೆಗೆ ಮೇ 18ರಂದು ದೊಡ್ಡನಾಗಮಂಗಲದ ಗೋದಾಮು ಮೇಲೆ ದಾಳಿ ನಡೆಸಿದಾಗ 3,500 ಕೆಜಿ ರಕ್ತಚಂದನ ಪತ್ತೆಯಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಕಿಂಗ್​ಪಿನ್ ಸೆರೆಗೆ ಕಾದ ಪೇದೆ

ಕಿಂಗ್​ಪಿನ್ ಅಬ್ದುಲ್ ರಷೀದ್ 10 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಮೊಬೈಲ್​ನಲ್ಲಿ ಕರೆ ಮಾಡದೆ ವಾಯ್್ಸ ಸಂದೇಶ, ಎಸ್​ಎಂಎಸ್​ನಲ್ಲೇ ಎಲ್ಲ ವ್ಯವಹಾರ ನಡೆಸುತ್ತಿದ್ದ. ಈ ಜಾಡು ಪತ್ತೆ ಹಚ್ಚಿದ ಸಿಸಿಬಿ ಪೇದೆ ಆನಂದ್, ಮನೆ ವಿಳಾಸ ಪತ್ತೆಹಚ್ಚಿ ಪುತ್ತೂರಿಗೆ 2 ಬಾರಿ ಹೋಗಿ ಅಲ್ಲೇ ಮೊಕ್ಕಾಂ ಹೂಡಿ ಆರೋಪಿ ಬಗ್ಗೆ ಖಚಿತಪಡಿಸಿದ್ದರು. ಯಾವಾಗ, ಎಷ್ಟೊತ್ತಿಗೆ ಬರುತ್ತಾನೆ ಎಂಬ ಎಲ್ಲ ಮಾಹಿತಿ ಕಲೆಹಾಕಿ ಆನಂದ್ ಕೊಟ್ಟ ಸಿಗ್ನಲ್ ಮೇರೆಗೆ ಇನ್​ಸ್ಪೆಕ್ಟರ್​ಗಳಾದ ಎಂ.ಆರ್. ಹರೀಶ್, ಮಹಮ್ಮದ್ ಷರೀಫ್ ರಾವುತ್ತರ್, ಲಕ್ಷ್ಮೀಕಾಂತಯ್ಯ ಶುಕ್ರವಾರ ರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಲ್ಲೆಲ್ಲಿಗೆ ರಫ್ತಾಗುತ್ತಿತ್ತು?

ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಲ್ಲಿ ರಕ್ತಚಂದನ ಸಾಗಣೆ ಜಾಲ ವ್ಯವಸ್ಥಿತವಾಗಿ ಹರಡಿತ್ತು. ಬಸ್, ರೈಲು, ಲಾರಿ, ಹಡಗು ಮತ್ತು ವಿಮಾನದಲ್ಲಿ ಉನ್ನತ ದರ್ಜೆಯ ಪಾರ್ಸಲ್ ಕವರ್ ಮಾಡಿ ನಕಲಿ ವಿಳಾಸ, ಬಿಲ್​ಗಳಲ್ಲಿ ರವಾನೆ ಮಾಡಲಾಗುತ್ತಿತ್ತು. ಚೆನ್ನೈ, ಮುಂಬೈಗೆ ರವಾನಿಸಿ ಅಲ್ಲಿಂದ ಹಾಂಕಾಂಗ್, ಮಲೇಷ್ಯಾ, ವಿಯೆಟ್ನಾಂ ಮತ್ತು ಚೀನಾಗೆ ಕಳ್ಳಸಾಗಣೆ ಮಾಡುತ್ತಿದ್ದರು.

ಟ್ರಾವೆಲ್ಸ್​ನಲ್ಲಿ ಪಾರ್ಸೆಲ್: ನ್ಯಾಷನಲ್ ಟ್ರಾವೆಲ್ಸ್​ನ ಪಾರ್ಸೆಲ್ ವಿಭಾಗದಲ್ಲಿ ಮುಬಾರಕ್ ಎಂಬಾತ ರಕ್ತ ಚಂದನ ತುಂಡುಗಳನ್ನು ಪಾರ್ಸಲ್ ಮಾಡಿ ಜುಬೇರ್ ಖಾನ್ ಹೇಳಿದ್ದ ರಾಜ್ಯಕ್ಕೆ ಕಳುಹಿಸುತ್ತಿದ್ದ.

ಹೀಗಿತ್ತು ದಾಳಿ…

ಬೆಂಗಳೂರು: ಕಟ್ಟಿಗೇನಹಳ್ಳಿಯಲ್ಲಿ ನಡೆಯುತ್ತಿದ್ದ ಅಂತಾರಾಷ್ಟ್ರೀಯ ರಕ್ತಚಂದನ ಕಳ್ಳ ಸಾಗಾಣಿಕೆ ಜಾಲವನ್ನು ಭೇದಿಸಲು ಹೋಗಿದ್ದ ಪೊಲೀಸ್ ಅಧಿಕಾರಿಗಳ ಮೇಲೆಯೇ ಸ್ಥಳೀಯರು

ದಾಳಿ ಮಾಡಲು ಯತ್ನಿಸಿದ್ದರು. ರಕ್ತಚಂದನ ದಂಧೆಕೋರರ ಕುಮ್ಮಕ್ಕಿನಿಂದ ಗ್ರಾಮಸ್ಥರು ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದರು. ಆದ್ದರಿಂದ ಈ ಬಾರಿ ಸಿಸಿಬಿ ಅಧಿಕಾರಿಗಳು ಪೂರ್ವ ತಯಾರಿ ಮಾಡಿಕೊಂಡೇ ಕಾರ್ಯಾಚರಣೆಗೆ ಇಳಿದಿದ್ದರು.

ರಕ್ತಚಂದನ ಮತ್ತು ಶ್ರೀಗಂಧ ಮರ ಕಳ್ಳಸಾಗಣೆಯಲ್ಲಿ ಕುಖ್ಯಾತಿ ಹೊಂದಿರುವ ಕಟ್ಟಿಗೇನಹಳ್ಳಿ ಮೂಲದ ಜುಬೇರ್ ಖಾನ್, ಸಲೀಂ ಖಾನ್, ತಾಹೀರ್ ಖಾನ್ ಸೆರೆಸಿಕ್ಕಿದ್ದರು. ಇವರು ಕೊಟ್ಟ ಮಾಹಿತಿ ಮೇರೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಡಿಸಿಪಿಗಳಾದ ಗಿರೀಶ್, ದೇವರಾಜ್,ಅಬ್ದುಲ್ ಅಹದ್ ನೇತೃತ್ವದ 100 ಅಧಿಕಾರಿಗಳು ಶನಿವಾರ ಕಟ್ಟಿಗೇನಹಳ್ಳಿ ಮೇಲೆ ದಾಳಿ ನಡೆಸಿದೆ. ಒಂದು ವೇಳೆ ಕಲ್ಲು ತೂರಾಟ ಮತ್ತು ಪ್ರತಿದಾಳಿ ನಡೆಸಿದರೆ ಎನ್​ಕೌಂಟರ್​ಗೂ ಪೊಲೀಸರು ಸಿದ್ಧರಾಗಿದ್ದರು. ಆದರೆ, ಬಂಧನಕ್ಕೊಳಗಾದ ತಮ್ಮ ಸಹಚರರ ಮೊಬೈಲ್ ಆಫ್ ಆಗಿದ್ದ ಕಾರಣಕ್ಕೆ ಸೆರೆ ಸಿಕ್ಕಿರುವ ಸುಳಿವಿನಿಂದ ಕಟ್ಟಿಗೇನಹಳ್ಳಿಯ ದಂಧೆಕೋರರು ಮನೆ ಖಾಲಿ ಮಾಡಿದ್ದರು. ಈಗಾಗಿ ಯಾರು ಸಿಗದೆ ಬರಿಕೈಲಿ ಪೊಲೀಸರು ವಾಪಸಾಗಬೇಕಾಯಿತು.

ದಂಧೆಕೋರರ ಸಂಚಿನ ಬಗ್ಗೆ ಮೊದಲೇ ತಿಳಿದುಕೊಂಡಿದ್ದ ಸಿಸಿಬಿ ಅಧಿಕಾರಿಗಳು ಈ ಬಾರಿ ಪೂರ್ವತಯಾರಿ ನಡೆಸಿಯೇ ದಾಳಿ ನಡೆಸಿದ್ದರು. ಆದ್ದರಿಂದ ಈ ಬಾರಿ ದಂಧೆಕೋರರ ಯಾವುದೇ ಆಟ ಪೊಲೀಸರ ಮುಂದೆ ನಡೆಯಲಿಲ್ಲ. ಅಲ್ಲದೆ, ಮನೆಗಳ ಮೇಲೆ ದಾಳಿ ನಡೆಸಿದಾಗ ಯಾವುದೇ ಅಹಿತಕರ ಪ್ರಕರಣ ನಡೆಯಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಯಶಸ್ವಿ ಕಾರ್ಯಾಚರಣೆ: ನೂರಾರು ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದರು. ಒಂದೊಂದು ಓಣಿಯಲ್ಲೂ ಇಂತಿಷ್ಟು ಪೊಲೀಸ್ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ಬಂದೂಕು ಹಿಡಿದುಕೊಂಡು ನಿಂತಿದ್ದರು. ಸೈನಿಕರ ಮಾದರಿ ಕಾರ್ಯಾಚರಣೆ ನಡೆಸಿದ್ದರಿಂದ ಗ್ರಾಮಸ್ಥರಿಂದ ಯಾವುದೇ ಅಡಚಣೆ ಉಂಟಾಗುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *