ವಿಚಾರಣಾಧೀನ ಕೈದಿ ಮೇಲೆ ಆಸ್ಪತ್ರೆಯಲ್ಲಿ ಅತ್ಯಾಚಾರ ಎಸಗಿದ ಪೊಲೀಸರು

ಪಟನಾ: ವಿಚಾರಣಾಧೀನ ಕೈದಿಯನ್ನು ಇಬ್ಬರು ಪೊಲೀಸರು ಅತ್ಯಾಚಾರ ಮಾಡಿದ ಘಟನೆ ಮುಝಾಫರ್​ಪುರದಲ್ಲಿ ನಡೆದಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದೆ.

ಅಪಹರಣ ಆರೋಪದಡಿ ಈ ಯುವತಿಯನ್ನು ಬಂಧಿಸಲಾಗಿತ್ತು. ಆಕೆಗೆ ಮೂತ್ರಪಿಂಡ ಸಂಬಂಧಿ ಕಾಯಿಲೆ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ನ.11ರಂದು ಆಸ್ಪತ್ರೆಗೆ ಸೇರಿಸಿ ಜೈಲು ವಾರ್ಡ್​ನಲ್ಲಿ ಇಡಲಾಗಿತ್ತು. ನ.22ರಂದು ಆಕೆಯನ್ನು ಡಿಸ್​ಚಾರ್ಜ್​ ಮಾಡಲಾಗಿತ್ತು. ಅಲ್ಲಿಂದ ಬಂದ ನಂತರ ಆಕೆ ಪೊಲೀಸರಿಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ನ.14ರಂದು ಆಸ್ಪತ್ರೆಯ ವಾಶ್​ರೂಂನಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾಳೆ.

ಇಬ್ಬರು ಮಹಿಳಾ ಪೇದೆಗಳನ್ನು ನಾನಿದ್ದ ವಾರ್ಡ್​ಗೆ ನಿಯೋಜಿಸಲಾಗಿದ್ದರೂ ಪುರುಷ ಪೇದೆಗಳೇ ಶೌಚಗೃಹದವರೆಗೆ ನನಗೆ ಬೆಂಗಾವಲಾಗಿ ಬಂದು ಅತ್ಯಾಚಾರ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಳು. ಈ ಬಗ್ಗೆ ಜೈಲು ಅಧೀಕ್ಷಕ ರಾಜ್ಯ ಪೊಲೀಸ್​ ಅಧಿಕಾರಿಗೆ ಲಿಖಿತವಾಗಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಕರಣ ಬೆಳಕಿಗೆ ಬಂದಿದೆ.

ಬಿಹಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ದಿಲ್ಮಣಿ ದೇವಿ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೆಯೇ ಆಯೋಗದ ತಂಡ ಸಂತ್ರಸ್ತ ಯುವತಿಯನ್ನು ಭೇಟಿಯಾಗಿ ತನಿಖೆ ನಡೆಸಲಿದೆ.

Leave a Reply

Your email address will not be published. Required fields are marked *