ಕಿಂಡಿ ಅಣೆಕಟ್ಟಿನಿಂದ ಅಂತರ್ಜಲ ವೃದ್ಧಿ

|ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಉಡುಪಿ ಜಿಲ್ಲೆಯ ಹೆಚ್ಚಿನ ಕಡೆ ತೀವ್ರ ಜಲಕ್ಷಾಮದಿಂದ ಜನ ಕುಡಿಯುವ ನೀರಿಗೆ ತೊಂದರೆಪಡುತ್ತಿದ್ದಾರೆ. ಆದರೆ ಕುಂದಾಪುರ ತಾಲೂಕಿನ 74ನೇ ಉಳ್ಳೂರು ಗ್ರಾಮ ಚಿಟ್ಟೆ ಹಾಗೂ ಕಟ್ಟಿನಬೈಲು ಎಂಬಲ್ಲಿ ಕಿಂಡಿ ಅಣೆಕಟ್ಟಿನಿಂದ ಸಮೃದ್ಧ ನೀರು ತುಂಬಿ ಆಸುಪಾಸಿನ ಎಲ್ಲ ಕೆರೆ ಬಾವಿಗಳು ಕಡು ಬೇಸಿಗೆಯಲ್ಲೂ ತುಂಬಿ ತುಳುಕುತ್ತಿವೆ.

ಸಿದ್ದರಾಮಯ್ಯ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಅವರನ್ನು ಪಶ್ಚಿಮವಾಹಿನಿ ನೀರಾವರಿ ಅಚ್ಚುಕಟ್ಟು ಸಮಿತಿ ಪದಾಧಿಕಾರಿಗಳು ಭೇಟಿಯಾಗಿ ಮನವಿ ಸಲ್ಲಿಸಿ ಉಳ್ಳೂರು ಗ್ರಾಮದಲ್ಲಿ ತೀವ್ರ ನೀರಿನ ಕೊರತೆ ಇದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿಗೂ ತತ್ವಾರವಿದೆ. ಹರಿಯುವ ತೊರೆಗೆ ಕಿಂಡಿ ಅಣೆಕಟ್ಟು ಕಟ್ಟಿಸಿ ಎಂದು ಮನವಿ ಸಲ್ಲಿಸಿದ್ದರು. ಸಮಿತಿ ಮನವಿಯನ್ನು ಎಂ.ಬಿ.ಪಾಟೀಲರು ಪುರಸ್ಕರಿಸಿ ಉಡುಪಿ ಜಿಲ್ಲಾ ಸಣ್ಣ ನೀರಾವರಿ ಇಲಾಖೆಯಿಂದ ಪ್ರಸ್ತಾವನೆ ಪಡೆದು 28 ಲಕ್ಷ ರೂ. ಅಂದಾಜು ವೆಚ್ಚದ ಎರಡು ಕಿಂಡಿ ಅಣೆಕಟ್ಟು ಗ್ರಾಮದ ಚಿಟ್ಟೆ ಹಾಗೂ ಕಟ್ಟಿನಬೈಲು ಎಂಬಲ್ಲಿಗೆ ಮಂಜೂರು ಮಾಡಿದರು.
ಕಳೆದ ಸಾಲಿನಲ್ಲೇ ಈ ಎರಡು ಕಿಂಡಿ ಅಣೆಕಟ್ಟುಗಳ ಕೆಲಸ ಪ್ರಾರಂಭವಾದರೂ ಮರುಳಿನ ಅಭಾವದಿಂದ ಗುತ್ತಿಗೆದಾರರು ಈ ಸಾಲಿನಲ್ಲಿ ಕಾಮಗಾರಿ ಮುಗಿಸಿದರು. ಕಿಂಡಿ ಅಣೆಕಟ್ಟಿಗೆ ಪ್ಲಾಸ್ಟಿಕ್ ಹಲಗೆ ಅಳವಡಿಸಿದ್ದು, ಸುಮಾರು 10 ಅಡಿಗೂ ಮಿಕ್ಕಿ ನೀರು ತುಂಬಿದ್ದು, ಅಣೆಕಟ್ಟು ಪಾತ್ರದ ಇಕ್ಕೆಲಗಳ ಸುಮಾರು ಒಂದು ಕಿ.ಮೀ. ದೂರದವರೆಗೂ ಚಿಟ್ಟೆ ಹಾಗೂ ಕಟ್ಟಿನಬೈಲಿನ ಕೆರೆ ಹಾಗೂ ಬಾವಿಗಳ ನೀರು ತುಂಬಿದ್ದು, ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿದೆ.

ಕೆಲಸ ಶೀಘ್ರ ಮುಕ್ತಾಯಕ್ಕೆ ಶಾಸಕರ ಕಾಳಜಿ: ವಾರಾಹಿ ಬಲದಂಡೆಯ 11 ಕಿ.ಮೀ. ನಾದೂರು ಎಂಬಲ್ಲಿ ನಾಲೆಯ ಒಂದು ಗೇಟ್‌ನಿಂದ ಚಿಟ್ಟೆ ಹಾಗೂ ಕಟ್ಟಿನಬೈಲು ತೊರೆಗೆ ನೀರು ಹಾಯಿಸಿ ಅದನ್ನು ಕಿಂಡಿ ಅಣೆಕಟ್ಟಿನಿಂದ ತಡೆ ಹಿಡಿದು ನೀರು ಇಂಗಿಸಿಕೊಳ್ಳಲಾಗಿದೆ. ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ವಿಶೇಷ ಕಾಳಜಿ ವಹಿಸಿ ಸಣ್ಣ ನೀರಾವರಿ ಇಲಾಖೆ ಹಾಗೂ ಗುತ್ತಿಗೆದಾರರಿಗೆ ಬೇಗ ಕೆಲಸ ಪೂರೈಸುವಂತೆ ಆದೇಶಿಸಿದ್ದು, ಎರಡು ಕಿಂಡಿ ಅಣೆಕಟ್ಟುಗಳ ಕೆಲಸ ಮುಕ್ತಾಯವಾಗಿದೆ.

ಅಂದಿನ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಖುದ್ದು ಭೇಟಿಯಾಗಿ ಮನವಿ ಮಾಡಿದ್ದೆವು. 74ನೇ ಉಳ್ಳೂರು ಗ್ರಾಮ ವಾರಾಹಿ ನೀರಾವರಿ ಕಾಲುವೆಗೆ ಅತಿ ಹೆಚ್ಚು ಭೂಮಿ ಕೊಟ್ಟ ಗ್ರಾಮವಾಗಿದೆ. ಇಲ್ಲಿ ಕಾಲುವೆ ಭೂ ಗರ್ಭ ಒಡೆದು ಪಾತಾಳದಲ್ಲಿ ಸಾಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಕಿಂಡಿ ಅಣೆಕಟ್ಟು ಅಗತ್ಯ ಇದೆ ಎಂದು ತಿಳಿಸಿದ್ದೆವು. ಸಚಿವರಾಗಿದ್ದ ಎಂ.ಬಿ.ಪಾಟೀಲ್ ನಮ್ಮ ಮನವಿಗೆ ಸ್ಪಂದಿಸಿದ್ದರು.
|ಚಿಟ್ಟೆ ರಾಜಗೋಪಾಲ ಹೆಗ್ಡೆ 74ನೇ ಉಳ್ಳೂರು ಪಶ್ಚಿಮ ವಾಹಿನಿ ನೀರಾವರಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ ಅಧ್ಯಕ್ಷ

Leave a Reply

Your email address will not be published. Required fields are marked *