More

    ಕರೊನಾಗೆ ಚೆಲ್ಲಾಟ, ವೆಂಕಿಗೆ ಪ್ರಾಣಸಂಕಟ: ವಿಜಯವಾಣಿ ಸಿನಿಮಾ ವಿಮರ್ಶೆ

    • ಚಿತ್ರ: ಉಂಡೆನಾಮ
    • ನಿರ್ದೇಶಕ: ಕೆ.ಎಲ್. ರಾಜಶೇಖರ್
    • ನಿರ್ಮಾಣ: ಟಿ.ಆರ್. ಚಂದ್ರಶೇಖರ್
    • ತಾರಾಗಣ: ಕೋಮಲ್ ಕುಮಾರ್, ಹರೀಶ್ ರಾಜ್, ಧನ್ಯಾ ಬಾಲಕೃಷ್ಣ, ವೈಷ್ಣವಿ, ತಬಲಾ ನಾಣಿ, ತನಿಷಾ ಕುಪ್ಪಂಡ, ಸಂಪತ್, ಬ್ಯಾಂಕ್ ಜನಾರ್ಧನ್, ಅಪೂರ್ವಶ್ರೀ ಮುಂತಾದವರು

    | ಹರ್ಷವರ್ಧನ್ ಬ್ಯಾಡನೂರು ಬೆಂಗಳೂರು

    ಕೆಲವೊಮ್ಮೆ ಸಣ್ಣ ಮಕ್ಕಳು ಕೇಳುವ ಮುಗ್ಧ ಪ್ರಶ್ನೆಗಳಿಗೆ, ಉತ್ತರಿಸುವುದು ಪೋಷಕರಿಗೆ ಕಷ್ಟವೆನಿಸುತ್ತದೆ. ಅಂಥದ್ದೇ ಒಂದು ಪ್ರಶ್ನೆಗೆ ಸರಿಯಾದ ಉತ್ತರ ಸಿಗದೇ, ಸುಳ್ಳೇ ನಿಜ ಎಂದುಕೊಳ್ಳುವ ಬಾಲಕ ವೆಂಕಿ, ಬೆಳೆದು ದೊಡ್ಡವನಾದ ಬಳಿಕವೂ ಅದರ ಗುಂಗಲ್ಲೇ ಇರುತ್ತಾನೆ! ಯಾವಾಗ ಮದುವೆ ಆಗುತ್ತೀನೋ ಅಂತ ಹಾತೊರೆಯುವ ಸಾಫ್ಟ್​ವೇರ್ ಎಂಜಿನಿಯರ್ ವೆಂಕಿಗೆ (ಕೋಮಲ್), ಮದುವೆ ದಿನಾಂಕ ನಿಗದಿಯಾಗಿ, ಆಮಂತ್ರಣ ಪತ್ರಿಕೆ ಹಂಚುವ ಹೊತ್ತಿಗೆ ವಧು ಪ್ರೀತಿ (ಧನ್ಯಾ) ಕೈಎತ್ತಿಬಿಡುತ್ತಾಳೆ. ಆಕೆ ಒಪ್ಪದಿದ್ದರೇನಂತೆ, ಅದೇ ದಿನ ಇನ್ನೊಂದು ಹುಡುಗಿಯನ್ನಾದರೂ ಮದುವೆ ಆಗೇ ಆಗುವೆನೆಂದು ವೆಂಕಿ, ಹೊಸ ವಧುವಿನ ಹುಡುಕಾಟದಲ್ಲಿ ತೊಡಗುತ್ತಾನೆ. ಮೊದಲು ಒಪು್ಪವ ಹುಡುಗಿಯರು, ಇನ್ನೇನು ಮದುವೆ ದಿನ ಹತ್ತಿರವಾಯಿತು ಎನ್ನುವಾಗ ಕೈಎತ್ತುತ್ತಿರುತ್ತಾರೆ. ಕೊನೆಗೆ ಗೆಳೆಯ ಕೃಷ್ಣ (ಹರೀಶ್ ರಾಜ್) ಮಾತು ಕೇಳಿ, ಆನ್​ಲೈನ್​ನಲ್ಲಿ ಅಪ್ಸರೆಯನ್ನು ಹುಡುಕುವ ವೆಂಕಿಗೆ ಮಮತಾ (ವೈಷ್ಣವಿ) ಪರಿಚಯವಾಗುತ್ತಾಳೆ. ಆಕೆ ವೆಂಕಿಯ ಮನೆಗೆ ಬಂದ ದಿನವೇ ಕರೊನಾ ಲಾಕ್​ಡೌನ್ ಘೋಷಣೆಯಾಗುತ್ತದೆ… ಮುಂದೆ? ಆತನ ಮದುವೆಗೆ ಅಡ್ಡಗಾಲು ಹಾಕುತ್ತಿರುವವರು ಯಾರು? ಈ ಮಮತಾ ಯಾರು? ಆಕೆಯ ಹಿನ್ನೆಲೆಯೇನು? ವೆಂಕಿ ಮದುವೆಯ ಕನಸು ನನಸಾಗುತ್ತಾ? ಸಿನಿಮಾ ನೋಡಿ.

    ಕೋಮಲ್ ಕುಮಾರ್ ಕಮ್್ಯಾಕ್ ಸಿನಿಮಾ ಆದ ಕಾರಣ ‘ಉಂಡೆನಾಮ’ ಚಿತ್ರದಲ್ಲಿ ಹಾಸ್ಯದ ಹೊನಲು ಹರಿಯುವ ಎಲ್ಲ ನಿರೀಕ್ಷೆಗಳೂ ಇದ್ದವು. ಆ ನಿರೀಕ್ಷೆಯನ್ನು ನಿರ್ದೇಶಕ ರಾಜಶೇಖರ್ ಹುಸಿಗೊಳಿಸಿಲ್ಲ. ಡಬಲ್ ಮೀನಿಂಗ್ ಸಂಭಾಷಣೆ, ಪೋಲಿತನ ಹೆಚ್ಚೆನಿಸಿದರೂ, ಒಂದೊಳ್ಳೆ ಕ್ಲೈಮ್ಯಾಕ್ಸ್ ಅದೆಲ್ಲವನ್ನೂ ಮರೆಸುತ್ತದೆ. ಕರೊನಾ ಸಮಯದಲ್ಲಿ ಉಂಟಾದ ಸಮಸ್ಯೆಗಳನ್ನು ಹಾಸ್ಯದ ಮೂಲಕ ತೋರಿಸುವ ಮೂಲಕ ಮತ್ತೆ ಲಾಕ್​ಡೌನ್ ನೆನಪಿಗೆ ಜಾರಿಸುತ್ತಾರೆ ರಾಜಶೇಖರ್. ಚಿತ್ರದಲ್ಲಿರುವ ಬಹುತೇಕ ಎಲ್ಲ ಪಾತ್ರಗಳೂ, ಎಲ್ಲ ಸನ್ನಿವೇಶಗಳಲ್ಲೂ ನಗಿಸುತ್ತವೆ. ಮೊದಲ ಚಿತ್ರದಲ್ಲಿಯೇ ಎಲ್ಲಿಯೂ ಬೋರ್ ಆಗದಂತೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು. ಶ್ರೀಧರ್ ಸಂಭ್ರಮ್ ಸಂಗೀತದ ಹಾಡುಗಳು ಕತೆಯನ್ನು ಮುನ್ನಡೆಸುತ್ತವೆ. ಛಾಯಾಗ್ರಹಣ, ಸಂಕಲನ ಚಿತ್ರಕ್ಕೆ ಪೂರಕವಾಗಿವೆ. ಕೋಮಲ್ ಕುಮಾರ್ ಎರಡನೇ ಇನ್ನಿಂಗ್ಸ್ ಪ್ರಾರಂಭದಲ್ಲಿಯೇ ಸಿಕ್ಸರ್ ಸಿಡಿಸಿದ್ದಾರೆ. ಅವರ ಕಮ್್ಯಾಕ್​ಗೆ ‘ಉಂಡೆನಾಮ’ ಸಿನಿಮಾ ಒಂದೊಳ್ಳೆ ವೇಗ ನೀಡಿದೆ. ಹರೀಶ್ ರಾಜ್, ಕೋಮಲ್ ಜುಗಲ್​ಬಂದಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ನಾಯಕಿ ಧನ್ಯಾಗೆ ಅಷ್ಟು ಕೆಲಸವಿಲ್ಲ. ಆದರೆ, ಕಿರುತೆರೆ ನಟಿ ವೈಷ್ಣವಿ ಸವಾಲಿನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ವೆಂಕಿ ತಂದೆಯ ಪಾತ್ರದಲ್ಲಿ ತಬಲಾ ನಾಣಿ, ತಾಯಿಯಾಗಿ ಅಪೂರ್ವಶ್ರೀ ಕೂಡ ಕಾಮಿಡಿ ಕಿಕ್ ನೀಡಿದ್ದು, ತನಿಷಾ ಕುಪ್ಪಂಡ ಗ್ಲಾಮರಸ್ ಟಚ್ ನೀಡಿದ್ದಾರೆ. ಎರಡು ತಾಸು ನಕ್ಕು ಎಂಜಾಯ್ ಮಾಡಬೇಕು ಎನ್ನುವವರಿಗೆ ‘ಉಂಡೆನಾಮ’ ಇಷ್ಟವಾಗಲಿದೆ!

    ಭಾಜಪದ ಮತ್ತೊಂದು ವಿಕೆಟ್ ಪತನ, ಶೆಟ್ಟರ್​ ಬಿಜೆಪಿಗೆ ಗುಡ್​ಬೈ; ನಾಳೆಯೇ ರಾಜೀನಾಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts