ತಿ.ನರಸೀಪುರ: ತಾಲೂಕಿನ ಐತಿಹಾಸಿಕ ಪ್ರವಾಸಿ ತಾಣವಾಗಿರುವ ತಲಕಾಡು ಗ್ರಾಮದಲ್ಲಿ ಪುರಾತನ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ದೇವಾಲಯ ಹಾಗೂ ಕಾವೇರಿ ನದಿಗೆ ಸಂಪರ್ಕ ಕಲ್ಪಿಸುವ ಹಳೇ ಬೀದಿ ರಸ್ತೆ ವಿಸ್ತರಣೆ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಮತ್ತು ಮನೆಗಳ ತೆರವು ಕಾರ್ಯ ತಾಂತ್ರಿಕ ಸಮಸ್ಯೆಯಿಂದಾಗಿ ನನೆಗುದಿಗೆ ಬಿದ್ದಿದೆ. ಕಳೆದೊಂದು ದಶಕದಿಂದಲೂ ಪರಿಹಾರವನ್ನಾಗಲಿ ಅಥವಾ ಪರ್ಯಾಯ ನಿವೇಶನವನ್ನಾಗಲಿ ಪಡೆಯಲಾಗದೆ ನಿವಾಸಿಗಳು ಕಾಲ ನೂಕುತ್ತಿದ್ದಾರೆ.

ಜೈನರು ಹಾಗೂ ಗಂಗರ ಅರಸರ ರಾಜಧಾನಿಯಾಗಿದ್ದ ತಲಕಾಡು, ಪಂಚಲಿಂಗ ದರ್ಶನದ ಖ್ಯಾತಿ ಹೊಂದಿರುವ ತಾಲೂಕಿನ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ. ಕಿರಿದಾಗಿದ್ದ ಗ್ರಾಮದ ಹಳೇ ಬೀದಿಯಲ್ಲಿ ಸಂಚಾರವನ್ನು ಸುಗಮಗೊಳಿಸಿ, ಹದಗೆಟ್ಟಿದ್ದ ರಸ್ತೆಗೆ ಅಭಿವೃದ್ಧಿ ಸ್ಪರ್ಶ ನೀಡಲು 2013ರಲ್ಲಿ ಅಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ ಅವರು ಭೂಸ್ವಾಧೀನ ಸೇರಿದಂತೆ ತೆರವುಗೊಳ್ಳುವ ಮನೆಗಳಿಗೆ ಪರಿಹಾರ ಕಲ್ಪಿಸುವ ಯೋಜನೆಯೊಂದಿಗೆ 10 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದರು. ರಸ್ತೆಯಲ್ಲಿದ್ದ 133 ಮನೆಗಳನ್ನು ಸ್ವಾಧೀನಪಡಿಸಿಕೊಂಡು ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ತೆರವಿಗೆ ನೋಂದಣಿ ಮಾಡಿಕೊಂಡಿದ್ದ 80 ಮನೆಗಳ ಮಾಲೀಕರು ಪರಿಹಾರ ಪಡೆದಿದ್ದರೆ ಇನ್ನೂ ನೋಂದಣಿ ಮಾಡಿಕೊಳ್ಳದ 38 ಮನೆಗಳ ನಿವಾಸಿಗಳು ಅರೆಬರೆ ತೆರವು ಕಾರ್ಯಾಚರಣೆಗೆ ಸಿಲುಕಿ ಪರಿಹಾರ ಹಾಗೂ ಪರ್ಯಾಯ ನಿವೇಶನ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಸರ್ಕಾರ ಹಾಗೂ ಶಾಸಕರು ಬದಲಾದ ಬಳಿಕ ಹಳೇ ಬೀದಿಯಲ್ಲಿನ ರಸ್ತೆ ಅಭಿವೃದ್ಧಿ ಕುಂಠಿತಗೊಂಡಿತು. ರಸ್ತೆ ಸಂಪೂರ್ಣ ಹಳ್ಳಗಳಿಂದ ತುಂಬಿ ತುಳುಕುತ್ತಿದೆ. ಶಾಸಕ ಮಹದೇವಪ್ಪ ಅವರ ಸರ್ಕಾರ ಅಧಿಕಾರದಲ್ಲಿರುವುದರಿಂದ 4.98 ಕೋಟಿ ರೂ. ಹಣವನ್ನು ಬಿಡುಗಡೆ ಮಾಡುವ ಮೂಲಕ ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರಿಂದ ಕಾಮಗಾರಿಗೆ ಮರು ಚಾಲನೆ ಕೊಡಿಸಲಾಗಿದೆ. ಆದರೆ ಇತ್ತ 38 ಮನೆಗಳ ನಿವಾಸಿಗಳಿಗೆ ಪರ್ಯಾಯ ನಿವೇಶನವಾಗಲಿ ಅಥವಾ ಪರಿಹಾರವಾಗಲಿ ಇನ್ನೂ ಕೈಗೆ ಸಿಕ್ಕಿಲ್ಲ. ಈ ಬಗ್ಗೆ ಲೌಡ್‌ಸ್ಪೀಕರ್‌ನಲ್ಲಿ ನಿವಾಸಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ತಲಕಾಡಿನ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶೀಘ್ರ ಕಾಮಗಾರಿ ಪ್ರಾರಂಭ
ತಲಕಾಡು ಹಳೇ ಬೀದಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೆ ನಿವೇಶನ ತೆರವು ಮಾಡಿಕೊಡುವ ನಿವಾಸಿಗಳಿಗೆ ಲೋಕೋಪಯೋಗಿ ಇಲಾಖೆಯ ಈಗಿನ ಎಸ್‌ಆರ್ ದರದ ಪ್ರಕಾರವೇ ಪರಿಹಾರವನ್ನು ಮಂಜೂರು ಮಾಡುವ ಬಗ್ಗೆ ಯೋಜನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಬಾಕಿ ಉಳಿದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಿಎಂ ಅವರು ಮರುಚಾಲನೆ ನೀಡಿರುವುದರಿಂದ ಸದ್ಯದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಪ್ರಾರಂಭಿಸಲಾಗುವುದು.
ಎಸ್.ಸತೀಶ್‌ಚಂದ್ರನ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಉಪವಿಭಾಗ, ತಿ.ನರಸೀಪುರ
ಪರ್ಯಾಯ ನಿವೇಶನ ಕಲ್ಪಿಸಲು ಬದ್ಧ
ಅಭಿವೃದ್ಧಿ ಕಾಮಗಾರಿಯನ್ನು ನೆಪವಾಗಿಟ್ಟುಕೊಂಡು ಹಳೇಬೀದಿಯಲ್ಲಿ ವಾಸವಿರುವ ನಿವಾಸಿಗಳನ್ನು ಒಕ್ಕಲಿಬ್ಬಿಸಿ ಅವರನ್ನು ಅತಂತ್ರಗೂಳಿಸಬೇಕೆಂಬ ಯಾವುದೇ ಉದ್ದೇಶ ಸ್ಥಳೀಯ ಜನಪ್ರತಿನಿಧಿಗಳಿಗಿಲ್ಲ. ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿದ ಬಳಿಕ ಆಶ್ರಯ ಬಡಾವಣೆಯಲ್ಲಿ ರಸ್ತೆ ವಿಸ್ತರಣೆಗೆ ಮನೆಗಳನ್ನು ತೆರವು ಮಾಡುವ ನಿವಾಸಿಗಳಿಗೆ ಪರ್ಯಾಯ ನಿವೇಶನವನ್ನು ಕಲ್ಪಿಸಲು ಗ್ರಾಮ ಪಂಚಾಯಿತಿ ಆಡಳಿತ ಬದ್ಧವಾಗಿದೆ.
ಶೋಭಾ ಮಲ್ಲಣ್ಣಿ ಅಧ್ಯಕ್ಷೆ, ತಲಕಾಡು ಗ್ರಾಮ ಪಂಚಾಯಿತಿ
ನಿತ್ಯವೂ ಧೂಳು ಕುಡಿಯುವಂತಾಗಿದೆ
ಪರಿಹಾರ ಅಥವಾ ಪರ್ಯಾಯ ನಿವೇಶನವನ್ನು ಕಲ್ಪಿಸದೆ ರಸ್ತೆ ವಿಸ್ತರಣೆ ಕಾಮಗಾರಿಗೆ ನಮ್ಮಲ್ಲಿದ್ದ 2 ಮನೆಗಳನ್ನು ತೆರವುಗೊಳಿಸಿರುವುದರಿಂದ ಕಳೆದೊಂದು ದಶಕದಿಂದಲೂ ಜೀವನ ನಿರ್ವಹಣೆ ಕಷ್ಟವಾಗಿದೆ. ಜೀವನಕ್ಕೆಂದು ಅವಲಂಬಿಸಿದ್ದ ವ್ಯಾಪಾರದಲ್ಲಿ ನಷ್ಟ ಮಾಡಿಕೊಂಡಿದ್ದು, ನಿತ್ಯವೂ ಧೂಳು ಕುಡಿಯುವಂತಾಗಿದೆ. ಎರಡು ನಿವೇಶನಗಳಿಗೆ ಪರಿಹಾರ ಮತ್ತು ಪರ್ಯಾಯ ನಿವೇಶನಗಳನ್ನು ಕಲ್ಪಿಸಿಕೊಟ್ಟರೆ ಈಗಲೂ ತೆರವು ಕಾರ್ಯಾಚರಣೆಗೆ ಮನೆಗಳನ್ನು ಬಿಟ್ಟುಕೊಡುತ್ತೇವೆ.
ಟಿ.ಆರ್.ಪ್ರಭಾವತಿ ಹಳೇ ಬೀದಿ ನಿವಾಸಿ, ತಲಕಾಡು
ತೀರ್ಪಿನ ಪ್ರತಿ ಸಚಿವರಿಗೆ ರವಾನೆ
2010ರಲ್ಲಿ ಎಸ್‌ಆರ್ ದರಕ್ಕೆ ವಾಸದ ಮನೆಗಳನ್ನು ಕಳೆದುಕೊಂಡು ಪರಿಹಾರವನ್ನು ನೀಡಲು ಮುಂದಾಗಿದ್ದರಿಂದ ನಾವುಗಳು ನ್ಯಾಯಾಲಯದ ಮೊರೆಹೋಗಿದ್ದೆವು. ಈಗಿನ ಎಸ್‌ಆರ್ ದರದಲ್ಲೇ ಪರಿಹಾರ ನೀಡುವಂತೆ ನ್ಯಾಯಾಲಯ ತೀರ್ಪು ನೀಡಿರು ವುದರಿಂದ ಸಚಿವರು ಹಾಗೂ ಲೋಕೋಪಯೋಗಿ ಅಧಿಕಾರಿಗಳಿಗೆ ತೀರ್ಪಿನ ಪ್ರತಿ ನೀಡಿದ್ದೇವೆ. ನಿವಾಸಿಗಳಿಗೆ ನ್ಯಾಯಯುತವಾಗಿ ಪರಿಹಾರ ಮತ್ತು ನಿವೇಶನವನ್ನು ಕಲ್ಪಿಸಿಕೊಟ್ಟರೆ ನಾವೇ ಖುದ್ದಾಗಿ ಮನೆಗಳನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ.
ಟಿ.ಎನ್.ಲೋಕೇಶ್ ಹಳೇ ಬೀದಿಯ ನಿವಾಸಿ
ಶಾಸಕರು ಮುತುವರ್ಜಿ ವಹಿಸಲಿ
ಹಳೇ ಬೀದಿ ಸಾವಿರಾರು ವರ್ಷಗಳ ಇತಿಹಾಸವಿರುವ ಶಿಲಾಯುಗದ ರಸ್ತೆಯಾಗಿದೆ. ಆಡಳಿತಾತ್ಮಕ ಹಾಗೂ ತಾಂತ್ರಿಕ ಸಮಸ್ಯೆಯಿಂದ ರಸ್ತೆ ವಿಸ್ತರಣೆ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಮನೆಗಳ ತೆರವು ಆಗದಿರುವುದು ಸಮಸ್ಯೆಯಾಗಿದೆ. ಈಗಿನ ಸರ್ಕಾರದಲ್ಲಿ ಸಚಿವರಾಗಿರುವ ಕ್ಷೇತ್ರದ ಶಾಸಕರು ಮುತುವರ್ಜಿ ವಹಿಸಿದರೆ ಸಮಸ್ಯೆ ಇತ್ಯರ್ಥವಾಗಿ ರಸ್ತೆ ಕಾಮಗಾರಿಯು ಪೂರ್ಣಗೊಳ್ಳಲಿದೆ.
ಗುರು, ಹಳೇ ಬೀದಿ ನಿವಾಸಿ, ತಲಕಾಡು
ಪರ್ಯಾಯ ವ್ಯವಸ್ಥೆ ಇಲ್ಲ
ರಸ್ತೆ ವಿಸ್ತರಣೆ ಕಾಮಗಾರಿಗಾಗಿ ಹಳೇ ಬೀದಿಯಲ್ಲಿರುವ ನಮ್ಮ ಕುಟುಂಬದ ಎರಡೂ ಮನೆಗಳು ನೆಲಸಮವಾಗಿದೆ. ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ. ಅಲ್ಲದೆ ನಮಗೆ ತಲಕಾಡು ಗ್ರಾಮದಲ್ಲಿ ಪರ್ಯಾಯ ನಿವೇಶನವಿಲ್ಲ. ಮೊದಲು ನಿವೇಶನ ಕೊಟ್ಟು ಆ ಬಳಿಕ ಪರಿಹಾರ ನೀಡಿದರೆ ಬದುಕಲು ಸೂರನ್ನು ಕಟ್ಟಿಕೊಳ್ಳುತ್ತೇವೆ.
ಟಿ.ಎಂ.ಸಂಜು ಹಳೇ ಬೀದಿಯ ನಿವಾಸಿ, ತಲಕಾಡು
ನ್ಯಾಯಾಲಯದಲ್ಲಿದೆ ತಡೆಯಾಜ್ಞೆ
ತಲಕಾಡು ಹಳೇ ಬೀದಿಯಲ್ಲಿ ರಸ್ತೆ ವಿಸ್ತರಣೆಗಾಗಿ ತೆರವುಗೊಳ್ಳುವ ಮನೆಗಳ ಮಾಲೀಕರಿಗೆ ಆಶ್ರಯ ಬಡಾವಣೆಯಲ್ಲಿ ಪರ್ಯಾಯ ನಿವೇಶನ ಕಲ್ಪಿಸಲು ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಮಾಡಿದ್ದೇವೆ. ಆಶ್ರಯ ಬಡಾವಣೆಯಲ್ಲಿನ ಅಕ್ರಮ ಒತ್ತುವರಿ ತೆರವು ಕಾರ್ಯಚರಣೆ ಸಂಬಂಧ ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ನಿವೇಶನ ಹಂಚಿಕೆ ಮಾಡಲು ಸಾಧ್ಯವಾಗಿಲ್ಲ. ಸಂತ್ರಸ್ತರಿಗೆ ನಿವೇಶನ ಕಲ್ಪಿಸಿಕೊಡುವ ಭರವಸೆಯೊಂದಿಗೆ ರಸ್ತೆ ವಿಸ್ತರಣೆ ಕಾಮಗಾರಿಗೆ ನಿವಾಸಿಗಳ ಮನವೊಲಿಸಲು ಪ್ರಯತ್ನಿಸುತ್ತೇವೆ.
ಟಿ.ಎಂ.ಮಹೇಶ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಲಕಾಡು ಗ್ರಾಮ ಪಂಚಾಯಿತಿ
ಮಾತಿಗೆ ಈಗಲೂ ಬದ್ಧ
ತಲಕಾಡು ಹಳೇ ಬೀದಿಯಲ್ಲಿ ಶೇ.50 ರಷ್ಟು ನಿವೇಶನ ಕಳೆದುಕೊಳ್ಳುವವರಿಗೆ ಪರಿಹಾರ ಮತ್ತು ಶೇ.70 ತಿಂದ 80 ರಷ್ಟು ಮನೆಗಳನ್ನು ಕಳೆದುಕೊಳ್ಳುವವರಿಗೆ ಪರ್ಯಾಯ ನಿವೇಶನ ಕಲ್ಪಿಸುವ ಕುರಿತು ತಹಸೀಲ್ದಾರ್‌ರ ಸಮ್ಮುಖದಲ್ಲಿ ನಡೆದಿದ್ದ ನಿವಾಸಿಗಳ ಸಭೆಯಲ್ಲಿ ಸಮ್ಮತಿಸಲಾಗಿತ್ತು. ಕಾಮಗಾರಿ ಪ್ರಕ್ರಿಯೆ ಮತ್ತು ತೆರವು ಕಾರ್ಯಾಚರಣೆ ನನೆಗುದಿಗೆ ಬಿದ್ದಿರುವುದರಿಂದ ಸಮಸ್ಯೆ ಬಗೆಹರಿದಿಲ್ಲ. ಗ್ರಾಮ ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳೆಲ್ಲರೂ ಪರ್ಯಾಯ ನಿವೇಶನ ಕಲ್ಪಿಸಿಕೊಡಲು ಈಗಲೂ ಬದ್ಧರಾಗಿದ್ದೇವೆ.
ನಾಗರಾಜ್ಮೂರ್ತಿ ಉಪಾಧ್ಯಕ್ಷ, ತಲಕಾಡು ಗ್ರಾಮ ಪಂಚಾಯಿತಿ
ಸಹಕಾರ ಅಗತ್ಯವಾಗಿತ್ತು
2013ರಲ್ಲಿಯೇ ತಲಕಾಡು ಹಳೇ ಬೀದಿಯ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡುವಾಗಲೇ ಸಚಿವರು ಪರಿಹಾರ ಮತ್ತು ಪರ್ಯಾಯ ನಿವೇಶನಕ್ಕೆ ಅನುದಾನ ನೀಡಿದ್ದರು. ನಿವಾಸಿಗಳೆಲ್ಲರೂ ಸಹಕಾರ ನೀಡಿದ್ದರೆ ಅಭಿವೃದ್ಧಿ ಕಾಮಗಾರಿ ಪೂರ್ಣವಾಗಿರುತ್ತಿತ್ತು. ಕಳೆದುಕೊಳ್ಳುವ ನಿವೇಶನ ಮತ್ತು ಮನೆಗಳಿಗೆ ಪರಿಹಾರ ಹಣ ಸೂಕ್ತವಾಗಿಲ್ಲವೆಂದು ನ್ಯಾಯಾಲಯದ ಮೊರೆ ಹೋಗಿದ್ದರಿಂದ ಅಭಿವೃದ್ಧಿ ಮತ್ತು ಪರಿಹಾರ ಎರಡು ಸಮಸ್ಯೆಯಾಗಿ ಪರಿಣಮಿಸಿದೆ.
ಚಿಕ್ಕಮಾದನಾಯಕ, ಮಾಜಿ ಅಧ್ಯಕ್ಷ, ತಲಕಾಡು ಗ್ರಾಮ ಪಂಚಾಯಿತಿ
ಸಚಿವರಿಗೆ ಮನವಿ ಸಲ್ಲಿಕೆ
ಕಾವೇರಿ ನದಿ ತೀರ ಮತ್ತು ಶ್ರೀ ವೈದ್ಯನಾಥೇಶ್ವರನ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ತಲಕಾಡು ಗ್ರಾಮದ ಹಳೆಬೀದಿಯ ರಸ್ತೆ ವಿಸ್ತರಣೆಗಿರುವ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದರಿಂದ 80 ಮನೆಗಳ ನಿವಾಸಿಗಳು ಪರಿಹಾರ ಪಡೆದುಕೊಂಡರು. ಇನ್ನುಳಿದ 38 ಮನೆಗಳ ನಿವಾಸಿಗಳು ಪರಿಹಾರಕ್ಕಾಗಿ ನೋಂದಣಿ ಮಾಡಿಕೊಳ್ಳಲು ಹಿಂದೇಟು ಹಾಕಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿ ಆರಂಭಗೊಳ್ಳುವ ಮೊದಲು ನಿವೇಶನ ಮತ್ತು ವಾಸದ ಮನೆಗಳನ್ನು ಕಳೆದುಕೊಳ್ಳುವ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡುವಂತೆ ಸಚಿವರಲ್ಲಿ ಮನವಿ ಮಾಡುತ್ತೇನೆ.
ಮಂಜುನಾಥನ್ ಜಿಪಂ ಮಾಜಿ ಸದಸ್ಯ, ತಲಕಾಡು
ಜನರಿಂದ ನಿತ್ಯ ಹಿಡಿಶಾಪ
ತಲಕಾಡು ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ ಪ್ರವಾಸಿ ಕೇಂದ್ರವಾಗಿರುವುದರಿಂದ ನಿತ್ಯ ಹಾಗೂ ರಜಾ ದಿನಗಳಲ್ಲಿ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಹದಗೆಟ್ಟ ಹಳೇ ಬೀದಿಯ ರಸ್ತೆಯಲ್ಲಿ ಹೋಗುವಾಗ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿ ಪೂರ್ಣಗೊಳ್ಳಬೇಕು. ಸರ್ಕಾರ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಪರ್ಯಾಯ ನಿವೇಶನವನ್ನು ಕಲ್ಪಿಸಲು ಬದ್ಧವಾಗಿರುವುದರಿಂದ ನಿವಾಸಿಗಳು ಅಭಿವೃದ್ಧಿಗೆ ಸಹಕಾರ ನೀಡಬೇಕು.
ಆನಂದ್ ಯುವ ಮುಖಂಡ, ತಲಕಾಡು