ಕಾರ್ಕಳ: ಅಜೆಕಾರು ಶಿರ್ಲಾಲು ಹಾಡಿಯಂಗಡಿಯಲ್ಲಿ ಕುಡಿತದ ಮತ್ತಿನಲ್ಲಿ ಚಿಕ್ಕಪ್ಪನನ್ನು ಬಡಿದು ಕೊಂದ ಆರೋಪಿಯನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ.
ಶಿರ್ಲಾಲು ಹಾಡಿಯಂಗಡಿಯ ನಿವಾಸಿ ಆನಂದ ಸೇರ್ವೆಗಾರ್ (62) ಕೊಲೆಗೀಡಾದವರು. ಪತ್ನಿಯ ಅಕ್ಕನ ಮಗ ಕೆರ್ವಾಸೆಯ ಹರೀಶ್ (28) ಕೊಲೆ ಆರೋಪಿ.
ಮೂವತ್ತು ವರ್ಷಗಳಿಂದ ಹಾಡಿಯಂಗಡಿಯಲ್ಲಿ ನೆಲೆಸಿರುವ ಆನಂದ ಸೇರ್ವೆಗಾರ್‌ಗೆ ನಾಲ್ಕು ಎಕರೆ ಜಾಗ ಇತ್ತು. ಕೃಷಿಯನ್ನೇ ಅವಲಂಬಿಸಿ ಸಂಸಾರ ನಡೆಸುತ್ತಿದ್ದ ಅವರು ಮದ್ಯವ್ಯಸನಕ್ಕೆ ಒಳಗಾಗಿ ಸಾಲಗಾರನಾಗಿದ್ದರು. ಜನವರಿಯಲ್ಲಿ ಜಮೀನನ್ನು ಗಣೇಶ್ ರಾವ್ ಎಂಬುವರಿಗೆ ಮಾರಾಟ ಮಾಡಿದ್ದರು. ಜಾಗದ ಮಾಲೀಕರ ಅನುಮತಿಯೊಂದಿಗೆ ಆ ಬಳಿಕವೂ ಅದೇ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು. ಪತ್ನಿ ಹಾಗೂ ಮಕ್ಕಳು ಬೇರೆಡೆಯಲ್ಲಿ ವಾಸವಾಗಿದ್ದರು.
ಆರೋಪಿ ಹರೀಶ್ ಕೆಲ ತಿಂಗಳುಗಳಿಂದ ಅದೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ. ಕುಡಿತದ ಚಟ ಹೊಂದಿರುವ ಈತ ಮೇ 19 ರಾತ್ರಿ ಆನಂದ ಸೇರ್ವೇಗಾರ್ ಹಾಗೂ ಹರೀಶ್ ನಡುವೆ ವಾಗ್ವಾದ ಉಂಟಾದ ಜಗಳ ತಾರಕ್ಕೇರಿದೆ. ಈ ವೇಳೆ ಹರೀಶ್ ಮರದ ಸೋಂಟೆಯಿಂದ ತಲೆಗೆ ಬಡಿದ ಪರಿಣಾಮ ಆನಂದ ಸೇರ್ವೇಗಾರ್ ತೀವ್ರ ರಕ್ತಸ್ರಾವಕ್ಕೊಳಗಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.