ಹಳ್ಳಿಗಳಲ್ಲಿ ಅಘೋಷಿತ ಬಂದ್

ಮಂಡ್ಯ: ದೇಶದ ಗಮನಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಬಿರುಸಿನ ಮತದಾನದ ನಡೆಯಿತು.

ಕ್ಷೇತ್ರದ ಎಲ್ಲ ಮತ ಕೇಂದ್ರಗಳಲ್ಲೂ ಬೆಳಗ್ಗೆ 7 ಗಂಟೆಯಿಂದಲೇ ಮತದಾರರು ಸಾಲುಗಟ್ಟಿ ನಿಂತು ಉತ್ಸಾಹದಿಂದಲೇ ಹಕ್ಕು ಚಲಾಯಿಸಿದರು. ಅದರಲ್ಲಿಯೂ ಗ್ರಾಮೀಣ ಭಾಗದಲ್ಲಿ ಮತದಾರರ ಉತ್ಸಾಹ ಹೆಚ್ಚಾಗಿತ್ತು. ಹಳ್ಳಿಗಳಲ್ಲಿ ಅಂಗಡಿ ಬಾಗಿಲು ಮುಚ್ಚಿ ಮತದಾನದಲ್ಲಿ ಪಾಲ್ಗೊಂಡ ಪರಿಣಾಮ, ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.

ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಇಬ್ಬರೂ ಅಭ್ಯರ್ಥಿಗಳ ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿದ್ದರು. ಗುರುವಾರ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗುತ್ತಿದ್ದ ಇಬ್ಬರು ಅಭ್ಯರ್ಥಿಗಳು ಎಲ್ಲೆಲ್ಲಿ ಎಷ್ಟೆಷ್ಟು ಮತದಾನ ಆಗಿದೆ ಎಂಬುದನ್ನು ಪರಿಶೀಲನೆ ನಡೆಸುವ ಜತೆಗೆ ತಮ್ಮ ತಮ್ಮ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಪಕ್ಷೇತರ-ಬಿಜೆಪಿ ಇತರ ಸಂಘಟನೆಗಳ ಕಾರ್ಯಕರ್ತರು ರಣೋತ್ಸಾಹದಿಂದ ಮತದಾರರ ಮನವೊಲಿಕೆಗೆ ಹಲವು ಸರ್ಕಸ್ ನಡೆಸುತ್ತಿದ್ದರು. ಮನೆ ಮನೆಗೆ ತೆರಳಿ ಮತದಾರರನ್ನು ವಾಹನಗಳಲ್ಲಿ ಕೂರಿಸಿಕೊಂಡು ಬಂದು ಮತ ಚಲಾಯಿಸುವಂತೆ ಮಾಡುತ್ತಿದ್ದ ದೃಶ್ಯ ಕಂಡುಬಂತು. ಇನ್ನು ಮತದಾನ ಮಾಡಿದ ಬಳಿಕ ಗ್ರಾಮದ ಅಂಗಡಿ, ಹೋಟೆಲ್‌ನಲ್ಲಿ ಕುಳಿತು ಚುನಾವಣಾ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಂತೆಯೇ, ಮಾಧ್ಯಮದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೋಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಹುಕಾಲದಿಂದಲೂ ಸಾಂಪ್ರದಾಯಿಕ ಎದುರಾಳಿಗಳಾಗಿ ಕಾದಾಟ ನಡೆಸುತ್ತಿದ್ದವು. ಆದರೆ, ಈ ಎರಡು ಪಕ್ಷ ಮೈತ್ರಿ ಮಾಡಿಕೊಂಡು ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕಿಳಿಸಿದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾಗೆ ಬಿಜೆಪಿ, ರೈತ ಸಂಘ ಹಾಗೂ ಇತರ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಕದನ ಏರ್ಪಟ್ಟಿತ್ತು.

ನಿಷೇಧ ಲೆಕ್ಕಕ್ಕಿಲ್ಲ: ತೀವ್ರ ಪೈಪೋಟಿಯಿಂದ ಕೂಡಿದ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಅಂತೆಯೇ, ಮತಗಟ್ಟೆಯಿಂದ 100 ಮೀ. ಒಳಗೆ ಯಾರು ಬರದಂತೆ ನಿಷೇಧ ವಿಧಿಸಿದ್ದರೂ, ಅದಕ್ಕೆ ಕಾರ್ಯಕರ್ತರು ತಲೆಕೆಡಿಸಿಕೊಂಡಿರಲಿಲ್ಲ. ಕೆಲವೆಡೆ ನೂರು ಮೀ. ಒಳಗೆ ಟೇಬಲ್ ಹಾಕಿಕೊಂಡು ಚೀಟಿ ಬರೆದುಕೊಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಂತೆಯೇ, ಮತಗಟ್ಟೆ ಸಮೀಪ ಮತದಾರರ ಮನವೊಲಿಕೆ ಪ್ರಕ್ರಿಯೆ ನಿರಂತರವಾಗಿ ಸಾಗಿತ್ತು.