ಚನ್ನಗಿರಿ: ಭದ್ರಾ ಬಲದಂಡೆ ನಾಲೆ ಅಚ್ಚುಕಟ್ಟು ಪ್ರದೇಶದಲ್ಲಿ ಭದ್ರಾ ನಾಲಾ ಕಾಲುವೆಗಳಿಗೆ ಅಳವಡಿಸಿದ ಅನಧಿಕೃತ ಪಂಪ್ಸೆಟ್ಗಳನ್ನು ಶುಕ್ರವಾರ ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಬೆಸ್ಕಾಂ ಇಲಾಖೆ ಜಂಟಿ ಕಾರ್ಯಚರಣೆ ನಡೆಸಿ ತೆರವುಗೊಳಿಸಿ ಜಿಲ್ಲಾಧಿಕಾರಿಗಳ ಆದೇಶದಂತೆ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿತು.

ಈ ವೇಳೆ ತಹಸೀಲ್ದಾರ್ ಜಿ.ಎಸ್. ಶಂಕರಪ್ಪ ಮಾತನಾಡಿ, ಭದ್ರಾ ಕಾಲುವೆಯಲ್ಲಿ 2024-25ನೇ ಸಾಲಿನ ಬೇಸಿಗೆ ಹಂಗಾಮಿಗೆ ನೀರನ್ನು ಹರಿಸಲಾಗುತ್ತಿದೆ. ಕಾಲುವೆಗಳಲ್ಲಿ ಅನಧಿಕೃತ ಪಂಪ್ಸೆಟ್ಗಳನ್ನು ಅಳವಡಿಸಿ ನೀರೆತ್ತುವುದರಿಂದ ಅಚ್ಚುಕಟ್ಟು ಕೊನೆಯ ಭಾಗದವರಿಗೆ ನೀರು ಹರಿಸುವುದು ಕಷ್ಟಕರವಾಗಿದೆ. ಹೀಗಾಗಿ ಅನಧಿಕೃತ ಪಂಪ್ ಸೆಟ್, ಡಿಸೇಲ್ ಜೆನ್ಸೆಟ್ ಮತ್ತು ಇತರೆ ಉಪಕರಣಗಳನ್ನು ತೆರವುಗೊಳಿಸಬೇಕು. ಇಲ್ಲವಾದಲ್ಲಿ ಅವುಗಳನ್ನು ವಶಕ್ಕೆ ಪಡೆದು ಕ್ರಮ ಜರುಗಿಸಲಾಗುತ್ತದೆ ಎಂದರು.
ಭದ್ರಾನಾಲೆಯಿಂದ ನೀರು ಕೊನೆಯ ಭಾಗದವರೆಗೆ ಹರಿಯಬೇಕು. ಹರಿಯುವ ನೀರಿಗೆ ಅಡ್ಡಲಾಗಿ ಮೋಟಾರ್ಗಳನ್ನು ಅಳವಡಿಸಿ ನೀರು ಹಾಯಿಸಿದರೆ ಜನರಿಗೆ ಕುಡಿಯಲು ಮತ್ತು ಕೃಷಿಗೆ ನೀರು ಇಲ್ಲದಂತಾಗಿದೆ ಎಂದರು.
ಹಂಚಿನ ಸಿದ್ದಾಪುರ ಗ್ರಾಮದ ಸುರಂಗದ ಬಳಿ ಬೆಳಗ್ಗೆ 9 ಗಂಟೆಗೆ ಅಧಿಕಾರಿಗಳು ಸಿಬ್ಬಂದಿಯೊಂದಿಗೆ ತೆರಳಿ ಕಾರ್ಯಾಚರಣೆ ನಡೆಸಿ ರೈತರು ಭದ್ರಾನಾಲೆಗೆ ಅಳವಡಿಸಿದ್ದ ಪಂಪ್ಸೆಟ್ಗಳನ್ನು ತೆರವುಗೊಳಿಸಿದರು.
ಕಾರ್ಯಾಚರಣೆಯಲ್ಲಿ ಬೆಸ್ಕಾಂ ಇಂಜಿನಿಯರ್ ಮಂಜನಾಯ್ಕ, ಇಂಜಿನಿಯರ್ ವಿಜಯಕುಮಾರ್, ಸೆಕ್ಷನ್ ಅಧಿಕಾರಿ ಸಂದೀಪ್, ಎಎಸ್ಐ ಮೈಲಾರಪ್ಪ, ಗ್ರಾಮಲೆಕ್ಕಿಗ ಚಂದ್ರಪ್ಪ, ರಾಜಸ್ವ ನಿರೀಕ್ಷಕ ಶ್ರೀನಿವಾಸ್ ಇದ್ದರು.