ನವಲಗುಂದ: ಪಡಿತರ ಆಹಾರ ಧಾನ್ಯ ವಿತರಣೆಯಲ್ಲಿ ಸರ್ವರ್ ಡೌನ್‌ನಿಂದ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಆಹಾರ ಇಲಾಖೆ ಹೊಸದಾಗಿ ಅಳವಡಿಸಿರುವ ತಂತ್ರಾಂಶದಿಂದ ಪಡಿತರದಾರರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು ನ್ಯಾಯಬೆಲೆ ಅಂಗಡಿಗಳ ಮುಂದೆ ದಿನವಿಡೀ ಪಡಿತರ ಧಾನ್ಯಕ್ಕಾಗಿ ಕಾಯುವಂತಾಗಿದೆ.
ರೇಷನ್ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬರುವ ಜನರು ಬೆಳಗ್ಗೆಯಿಂದ ಸಂಜೆಯವರೆಗೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಇತ್ತು. ಸಮಸ್ಯೆ ಪರಿಹರಿಸುವ ಉದ್ದೇಶದಿಂದ ತಂತ್ರಾಂಶದಲ್ಲಿ ಬದಲಾವಣೆ ಮಾಡಲಾಗಿದೆ. ಆದರೂ ಸಮಸ್ಯೆ ಪರಿಹಾರವಾಗಿಲ್ಲ.
ಪಡಿತರಕ್ಕಾಗಿ ಶುಕ್ರವಾರ ನ್ಯಾಯಬೆಲೆ ಅಂಗಡಿಗೆ ಬಂದ ಗ್ರಾಹಕರು ದಿನವಿಡೀ ಕಾದರೂ ಆಹಾರ ಧಾನ್ಯ ಸಿಕ್ಕಿಲ್ಲ. ಪಡಿತರಕ್ಕಾಗಿ ಕೆಲಸ ಕಾರ್ಯ ಬಿಟ್ಟು ಅಲೆದಾಡುವುದು ತಪ್ಪುತ್ತಿಲ್ಲ ಎಂದು ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.