ಡಾ.ರಾಜ್​, ಶಂಕರ್​ನಾಗ್​ ಅನಿಮೇಷನ್​ ಚಿತ್ರ ತೆಗೆಯಲು ಹೋದ, ಕೊನೆಗೆ ಇಡೀ ಕುಟುಂಬ ಕೊಂದು ಆತ್ಮಹತ್ಯೆಗೆ ಶರಣಾದ!

ಮೈಸೂರು: ಆತ ಅನಿಮೇಷನ್​ ಸಂಸ್ಥೆಯೊಂದನ್ನು ನಡೆಸುತ್ತಿದ್ದ. ಆ ಸಂಸ್ಥೆಯಿಂದ 60 ಲಕ್ಷ ರೂ. ವೆಚ್ಚದಲ್ಲಿ ಡಾ. ರಾಜ್​ಕುಮಾರ್​, ಶಂಕರ್​ನಾಗ್​ ಮತ್ತು ವಜ್ರಮುನಿ ಅವರ ಅನಿಮೇಟೆಡ್​ ಚಿತ್ರ ತೆಗೆಯಲು ಮುಂದಾಗಿದ್ದ. ಆದರೆ, ವ್ಯವಹಾರದಲ್ಲಿ ಭಾರಿ ನಷ್ಟವಾಗಿದ್ದರಿಂದ ಸಾಲಕ್ಕೆ ಹೆದರಿ ತುಂಬು ಗರ್ಭಿಣಿ ಪತ್ನಿ, ಮಗ ಹಾಗೂ ಅಪ್ಪ-ಅಮ್ಮನಿಗೆ ಗುಂಡಿಟ್ಟು ಕೊನೆಗೆ ತಾನು ಗುಂಡು ಹೊಡೆದುಕೊಂಡು ತಾಯಿಯ ಮಡಿಲಲ್ಲಿ ಪ್ರಾಣಬಟ್ಟಿದ್ದಾನೆ..!

ಮೂಲತಃ ತುಮಕೂರು ಜಿಲ್ಲೆಯವರಾದ, ಮೈಸೂರಿನ ದಟ್ಟಗಳ್ಳಿ ಬಡಾವಣೆ ನಿವಾಸಿ ಓಂಪ್ರಕಾಶ್​ ಭಟ್ಟಾಚಾರ್ಯ (36) ಅವರ ದುರಂತ ಕಥೆಯಿದು. ತುಂಬು ಗರ್ಭಿಣಿ ನಿಖಿತಾ, ಆರ್ಯಕೃಷ್ಣ, ತಂದೆ ನಾಗರಾಜ ಭಟ್ಟಾಚಾರ್ಯ ಮತ್ತು ತಾಯಿ ಹೇಮಲತಾ ಮೃತರು.

ತುಮಕೂರು ಮೂಲದವರಾಗಿದ್ದ ಓಂಪ್ರಕಾಶ್​ ಭಟ್ಟಾಚಾರ್ಯ ಮೈಸೂರಿಗೆ ಬಂದು ಮೊದಲು ಡೇಟಾಬೇಸ್​ ಕಂಪನಿಯನ್ನು ಆರಂಭಿಸಿದ್ದರು. ಇದಕ್ಕಾಗಿ ಸಾಕಷ್ಟು ಸಾಲವನ್ನೂ ಮಾಡಿಕೊಂಡಿದ್ದರು. ಆದರೆ, ಸಂಸ್ಥೆ ನಷ್ಟ ಅನುಭವಿಸಿದಾಗ ಕಂಪನಿಯನ್ನು ಮುಚ್ಚಿದ್ದರು. ಬಳಿಕ ಜಿ.ವಿ. ಇನ್ಫೊಟೆಕ್​ ಎಂಬ ಐಟಿ ಕಂಪನಿಯನ್ನು ಆರಂಭಿಸಿದ್ದರು. ಇದು ಕೂಡ ನಷ್ಟಕ್ಕೆ ತುತ್ತಾಗಿತ್ತು. ಈ ಸಂಸ್ಥೆ ವತಿಯಿಂದ 60 ಲಕ್ಷ ರೂ. ವೆಚ್ಚದಲ್ಲಿ ಡಾ. ರಾಜ್​ಕುಮಾರ್​, ಶಂಕರ್​ನಾಗ್​ ಹಾಗೂ ವಜ್ರಮುನಿ ಅವರ ಅನಿಮೇಟೆಡ್​ ಸಿನಿಮಾವನ್ನು ತಯಾರಿಸಲು ಓಂಪ್ರಕಾಶ್​ ಮುಂದಾಗಿದ್ದರು. ಆದರೆ, ಅದು ಕೂಡ ಸಾಧ್ಯವಾಗಿರಲಿಲ್ಲ.

ಈ ನಡುವೆ ಸಾಲಗಾರರ ಕಾಟ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಜಿ.ವಿ. ಇನ್ಫೊಟೆಕ್​ ಕಂಪನಿಯ ಉಪಕರಣಗಳು ಮತ್ತಿತರ ವಸ್ತುಗಳನ್ನು ದುಬೈ ಮೂಲದ ವ್ಯಕ್ತಿಗೆ 5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಆದರೂ ಅವರಿಗೆ ಸಾಲವನ್ನು ಸಂಪೂರ್ಣ ತೀರಿಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಅವರು ಕುಟುಂಬದವರ ಜತೆ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿರಬಹುದು ಎಂದು ಚಾಮರಾಜನಗರ ಎಸ್​ಪಿ ಆನಂದಕುಮಾರ್​ ಶಂಕೆ ವ್ಯಕ್ತಪಡಿಸಿದ್ದಾರೆ.

ಮೂರು ದಿನಗಳ ಹಿಂದೆಯೇ ಮನೆ ತೊರೆದಿದ್ದರು
ಓಂಪ್ರಕಾಶ್​ ಭಟ್ಟಾಚಾರ್ಯ ಅವರು ತಮ್ಮ ಪಾಲಕರು, ಪತ್ನಿ ಹಾಗೂ ಮಗನೊಂದಿಗೆ 3 ದಿನಗಳ ಹಿಂದೆಯೇ ಮೈಸೂರಿನಿಂದ ಹೊರಟಿದ್ದರು. ತಮ್ಮ ಸ್ನೇಹಿತರಾದ ಸುರೇಶ್​ ಮತ್ತು ಚೇತನ್​ ಅವರ ಜತೆ ಓಂಪ್ರಕಾಶ್​ ತಮ್ಮ ಕುಟುಂಬದವರ ಜತೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ಬಂದಿದ್ದರು. ತಮ್ಮ ಪರಿಚಿತರಾದ ಎಲಚೆಟ್ಟಿಯ ವೆಂಕಟೇಶ್​ ಅವರಿಗೆ ಸೇರಿದ್ದ ಬಂಡೀಪುರದಲ್ಲಿರುವ ಗ್ರೀನ್​ ವ್ಯಾಲಿ ಎಂಬ ಫಾರ್ಮ್​ ಹೌಸ್​ನಲ್ಲಿ ತಂಗಿದ್ದರು. ಇದಾದ ಬಳಿಕ ಓಂಪ್ರಕಾಶ್​ ಅವರ ಸ್ನೇಹಿತರಾದ ಸುರೇಶ್​ ಮತ್ತು ಚೇತನ್​ ಮೈಸೂರಿಗೆ ಮರಳಿದ್ದರು.

ಆದರೆ, ಗುರುವಾರ ಮಧ್ಯಾಹ್ನ ಸುರೇಶ್​ ಮತ್ತು ಚೇತನ್​ ಅವರಿಗೆ ಫೋನ್​ ಮಾಡಿದ್ದ ಓಂಪ್ರಕಾಶ್​ ಮುಖ್ಯವಾದ ವಿಷಯ ಮಾತನಾಡುವುದಿದೆ. ತಕ್ಷಣವೇ ಎಲಚೆಟ್ಟಿ ವೆಂಕಟೇಶ್​ ಅವರ ಫಾರ್ಮ್​ ಹೌಸ್​ಗೆ ಬರುವಂತೆ ತಿಳಿಸಿದ್ದರು. ಅದರಂತೆ ಮೈಸೂರಿನಿಂದ ಚಾಮರಾಜನಗರ ತಲುಪಿದ್ದ ಸುರೇಶ್​ ಮತ್ತು ಚೇತನ್​ ಗುಂಡ್ಲುಪೇಟೆಯ ನಂದಿ ಲಾಡ್ಜ್​ನಲ್ಲಿ ತಂಗಿದ್ದರು. ಇವರು ಫಾರ್ಮ್​ ಹೌಸ್​ ತಲುಪುವ ಮುನ್ನವೇ ಶುಕ್ರವಾರ ಬೆಳಗಿನ ಜಾವ ಫಾರ್ಮ್​ ಹೌಸ್​ನಿಂದ ಕುಟುಂದವರ ಜತೆ ಹೊರಟಿದ್ದ ಓಂಪ್ರಕಾಶ್​ ಗುಂಡ್ಲುಪೇಟೆ ಬಳಿ ಇರುವ ಮಹೇಶ ಚಂದ್ರಗುರು ಎಂಬುವರ ಜಮೀನು ತಲುಪಿಕೊಂಡಿದ್ದರು.

ಸ್ನೇಹಿತರಿಗೆ, ಕೆಲ ಸಾಲಗಾರರಿಗೆ ಕರೆ ಮಾಡಿದ್ದ ಓಂಪ್ರಕಾಶ್​
ಜಮೀನು ತಲುಪುವ ಮುನ್ನ ಗುರುವಾರ ರಾತ್ರಿ ಕೆಲ ಸಾಲಗಾರರಿಗೆ ಕರೆ ಮಾಡಿದ್ದ ಓಂಪ್ರಕಾಶ್​ ಶುಕ್ರವಾರ ಸಾಲ ತೀರಿಸುವುದಾಗಿ ಭರವಸೆ ನೀಡಿದ್ದರು.ಜಮೀನು ತಲುಪಿದ ಬಳಿಕ ಸುರೇಶ್​ ಮತ್ತು ಚೇತನ್​ ಅವರಿಗೆ ಕರೆ ಮಾಡಿ ತಾವು ಜೀವನದಲ್ಲಿ ಸೋತಿರುವುದಾಗಿಯೂ, ತಾವು ನಂಬಿದ್ದವರು ತಮಗೆ ಕೈಕೊಟ್ಟಿದ್ದಾಗಿಯೂ, ತಮ್ಮ ಕಾರನ್ನು ಗುಂಡ್ಲುಪೇಟೆಯ ಊಟಿ ರಸ್ತೆಯಲ್ಲಿ ನಿಲ್ಲಿಸಿರುವುದಾಗಿಯೂ, ಅದನ್ನು ತೆಗೆದುಕೊಂಡು ಹೋಗುವಂತೆಯೂ ಹೇಳಿದ್ದರು. ಇದರಿಂದ ಅನುಮಾನಗೊಂಡ ಸುರೇಶ್​ ಮತ್ತು ಚೇತನ್​ ತಕ್ಷಣವೇ ಗಂಡ್ಲುಪೇಟೆಯ ಊಟಿ ರಸ್ತೆ ಧಾವಿಸಿ ಬಂದಿದ್ದರು.

ಓಂಪ್ರಕಾಶ್​ ಅವರ ಕಾರು ಅನಾಥವಾಗಿ ನಿಂತಿರುವುದನ್ನು ಕಂಡು ಗಾಬರಿಯಾದ ಅವರು ಸುತ್ತಮುತ್ತಲೂ ಹುಡುಕಾಟ ಆರಂಭಿಸಿದ್ದರು. ಅಷ್ಟರಲ್ಲಿ ಓಂಪ್ರಕಾಶ್​, ಅವರ ಪತ್ನಿ, ಮಗ ಹಾಗೂ ಪಾಲಕರ ಶವಗಳು ಜಮೀನಿನಲ್ಲಿ ಪತ್ತೆಯಾಗಿದ್ದವು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *