ಅಪಾಯಕಾರಿ ಕೋಡಿ ಲೈಟ್‌ಹೌಸ್

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಕೋಡಿ ಸಮುದ್ರ ತೀರದಲ್ಲಿ ಒಂದೆಡೆ ಕಡಲ ಅಬ್ಬರ, ಮತ್ತೊಂದು ಕಡೆ ದೀಪಸ್ತಂಭದ ಅಸುರಕ್ಷಿತ ಮೆಟ್ಟಿಲು… ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ಸುರಕ್ಷತೆಗೆ ಎಷ್ಟು ಮಹತ್ವ ನೀಡುತ್ತದೆ ಎಂಬುದಕ್ಕೆ ಇದು ಸಾಕ್ಷಿ.
ಕುಂದಾಪುರ ತಾಲೂಕಿನ ಪ್ರವಾಸಿ ತಾಣಗಳ ಪೈಕಿ ಕೋಡಿ ಕಿನಾರೆ ಅರಬ್ಬಿ ಸಮುದ್ರದ ದಂಡೆಯಲ್ಲಿ ಬಾನೆತ್ತರಕ್ಕೆ ಎದ್ದು ನಿಂತಿರುವ ಲೈಟ್ ಹೌಸ್ ಒಂದು. ದೀಪಸ್ತಂಭ ಏರಿ ಕುಂದಾಪುರ ಸಮುದ್ರ ತೀರ, ಪಶ್ಚಿಮ ಘಟ್ಟ ತಪ್ಪಲು ವೀಕ್ಷಣೆ ಮನಮೋಹಕ. ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಕೋಡಿ ಕಡಲ ತೀರ ಜನದಟ್ಟಣೆಯಿಂದ ಕೂಡಿರುತ್ತದೆ. ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಮಕ್ಕಳು ಸೇರಿದಂತೆ ಪ್ರವಾಸಿಗಳ ಸಂಖ್ಯೆ ಹೆಚ್ಚಿದೆ. ಲೈಟ್ ಹೌಸ್ ತುದಿಗೆ ಏರುವ ಪ್ರವಾಸಿಗರ ಹುಚ್ಚಾಟ ಮಿತಿ ಮೀರುತ್ತಿದ್ದು, ನಿಯಂತ್ರಿಸಲು ಯಾವುದೇ ಸಿಬ್ಬಂದಿಯಿಲ್ಲ.

ಲೈಟ್‌ಹೌಸ್ ಏಣಿ ಅಸುರಕ್ಷಿತ: ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ತಲೆಗೊಂದಷ್ಟು ಹಣ ನೀಡಿದರೆ ಸಾಕು, ದೊಡ್ಡವರು ಮಕ್ಕಳೆನ್ನದೆ, ಪ್ರವಾಸಿಗರಿಗೆಲ್ಲ ಲೈಟ್ ಹೌಸ್ ಹತ್ತುವ ಅವಕಾಶ ನೀಡಲಾಗುತ್ತದೆ. ಲೈಟ್ ಹೌಸ್‌ನ ಮೇಲಕ್ಕೆ ಏರಲು ಸುತ್ತು ಏಣಿಗಳನ್ನು ನಿರ್ಮಿಸಲಾಗಿದೆ. ಈ ಏಣಿ ಮೆಟ್ಟಿಲುಗಳ ರಕ್ಷಣೆಗಾಗಿ ವೃತ್ತಾಕಾರದ ಸರಳು ಬಳಸಲಾಗಿದೆ. ಈ ರೀತಿ ರಕ್ಷಣೆಗಾಗಿ ಹಾಕಿರುವ ಸರಳುಗಳ ನಡುವಿನ ಅಂತರ ಒಬ್ಬ ಸಾಮಾನ್ಯ ವ್ಯಕ್ತಿ ಸಲೀಸಾಗಿ ಸಾಗುವಷ್ಟು ವಿಶಾಲವಾಗಿದೆ. ಕೆಳಗಿನಿಂದ ಮೆಟ್ಟಿಲು ಏರುವ ಪುಟಾಣಿ ಮಕ್ಕಳು ಜತೆಯಲ್ಲಿ ಇರುವ ಹಿರಿಯರ ಕಣ್ ತಪ್ಪಿಸಿ ಸರಳುಗಳ ನಡುವೆ ತೂರಿ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಸೆಲ್ಫಿ ಗೀಳಿಗೆ ಏಣಿಗೆ ಹತ್ತಿ ನಿಂತು ಫೋಟೋ ಕ್ಲಿಕ್ಕಿಸಲು ಹೋಗಿ ಆಪಾಯ ಮೈಮೇಲೆ ಎಳೆದುಕೊಳ್ಳುವ ಜತೆ ಮಕ್ಕಳು ಏಣಿ ಮೆಟ್ಟಿಲ ಸಂದುಗಳಲ್ಲಿ ಇಣುಕುವ ಮೂಲಕವೂ ಅಪಾಯ ಸಂಭವಿಸಬಹುದು. ಅಪಾಯ ಸಂಭಸಿದ ನಂತರ ಪರಿತಪಿಸುವ ಮುನ್ನ ಎಚ್ಚರ ವಹಿಸುವುದು ಉತ್ತಮ ಎಂಬುದು ಪ್ರವಾಸಿಗರ ಸಲಹೆ.

ಮಕ್ಕಳನ್ನು ದೀಪ ಸ್ತಂಭದ ಹೊರ ಆವರಣಕ್ಕೆ ಕರೆತಂದು ಕಿನಾರೆ ಸೌಂದರ್ಯ ತೋರಿಸುವ ಹಿರಿಯರು ಒಂದು ಕ್ಷಣ ಮೈ ಮರೆತರೂ ಅಪಾಯ ಮೈಮೇಲೆ ಎಳೆದುಕೊಂಡಂತೆ. ಲೈಟ್ ಹೌಸ್ ಮೇಲೇರಲು ವಿಪರೀತ ಜನಸಂದಣಿ ಇರುವುದರಿಂದ ನೂಕುನುಗ್ಗಲು ಉಂಟಾಗಿ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ. ಅವಘಡ ಸಂಭವಿಸುವ ಮೊದಲು ಸಂಬಂಧಿಸಿದ ಇಲಾಖೆ ಜಾಗೃತಿ ವಹಿಸಲಿ.
ಪ್ರವಾಸಿಗರು ಉಡುಪಿ

ಕೋಡಿಯಲ್ಲಿ ಸೀ ವಾಕ್ ಆದ ನಂತರ ರಜಾ ದಿನ, ಬೇಸಿಗೆ ರಜೆಯಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯ ಏರಿಕೆ ಕಂಡಿದೆ. ದೀಪಸ್ತಂಭ ಏರುವ ಮೆಟ್ಟಿಲ ಸುತ್ತ ಇರುವ ಸುರಕ್ಷತಾ ಕವಚ ನಡುವೆ ಗ್ಯಾಪ್ ಹೆಚ್ಚಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಯಿದೆ. ದೀಪಸ್ತಂಭ ಏರಿದ ಹಾಗೂ ಏರುವವರಿಗೆ ಸುರಕ್ಷತೆ ಬಗ್ಗೆ ತಿಳಿಹೇಳಿ, ದೀಪ ಸ್ತಂಭದ ಮೇಲೆ ಸಿಬ್ಬಂದಿ ನೇಮಕ ಮಾಡಿ ಅಪಾಯ ಆಗದಂತೆ ನೋಡಿಕೊಳ್ಳಬೇಕಿದೆ.
ದೀಪಕ್ ಕೋಡಿ, ಸ್ಥಳೀಯ ನಿವಾಸಿ

Leave a Reply

Your email address will not be published. Required fields are marked *