ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆ

ವಿಶ್ವಸಂಸ್ಥೆ: ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದ ಪಾಕಿಸ್ತಾನಕ್ಕೆ ಭಾರಿ ಹಿನ್ನಡೆ ಉಂಟಾಗಿದೆ. ಜಮ್ಮು-ಕಾಶ್ಮೀರ ವಿಚಾರವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸಲಹೆ ನೀಡಿದ್ದಾರೆ.

ಜಿನೀವಾದಲ್ಲಿ ಮಂಗಳ ವಾರ ನಡೆದ ವಿಶ್ವಸಂಸ್ಥೆ ಮಾನವಹಕ್ಕುಗಳ ಮಂಡಳಿ 42ನೇ ಸಮಾವೇಶದಲ್ಲಿ ಭಾರತದ ವಿರುದ್ಧ ದೂರಿದ ಪಾಕ್​ಗೆ ಗುಟೆರೆಸ್​ರ ಹೇಳಿಕೆ ಮುಖಭಂಗ ಉಂಟುಮಾಡಿದೆ.

ಭಾರತ ಹಾಗೂ ಪಾಕ್ ಪ್ರಧಾನಿಯನ್ನು ಗುಟೆರೆಸ್ ಸಂರ್ಪಸಿದ್ದು, ಉಭಯ ದೇಶಗಳ ಉದ್ವಿಗ್ನ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಶೀಘ್ರವೇ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಹೇಳಿದ್ದಾರೆಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿಗಳ ವಕ್ತಾರರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ.

ಫ್ರಾನ್ಸ್​ನಲ್ಲಿ ನಡೆದ ಜಿ-7 ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿಯನ್ನು ಭೇಟಿಯಾಗಿದ್ದಾಗ ಗುಟೆರೆಸ್ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ವಿಶ್ವಸಂಸ್ಥೆ ಯಲ್ಲಿ ಪಾಕಿಸ್ತಾನದ ಕಾಯಂ ಪ್ರತಿನಿಧಿ ಮಾಲೀಹಾ ಲೋಧಿ ಸೋಮವಾರ ಗುಟೆರೆಸ್​ರನ್ನು ಭೇಟಿಯಾಗಿದ್ದ ವೇಳೆ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿದ್ದರು. ಆಗಲೂ ಮಹಾಪ್ರಧಾನ ಕಾರ್ಯದರ್ಶಿ ಇದೇ ಸಲಹೆ ನೀಡಿದ್ದರು ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಡುಜಾರಿಕ್ ಹೇಳಿದ್ದಾರೆ.

Leave a Reply

Your email address will not be published. Required fields are marked *