Friday, 16th November 2018  

Vijayavani

Breaking News

ವಿಶ್ವ ಕಿರೀಟಕ್ಕೆ ದಿಟ್ಟ ಫ್ರಾನ್ಸ್ ನಿಕಟ

Thursday, 12.07.2018, 3:04 AM       No Comments

ಸೇಂಟ್​ಪೀಟರ್ಸ್​ಬರ್ಗ್: ಜರ್ಮನಿಯ ಬರ್ಲಿನ್​ನ ಒಲಿಂಪಿಯಾ ಸ್ಟೇಡಿಯಂನಲ್ಲಿ ಎದುರಾಗಿದ್ದ ನಿರಾಸೆಯನ್ನು ಅಳಿಸಿಹಾಕಲು ಫ್ರಾನ್ಸ್ 12 ವರ್ಷಗಳ ಬಳಿಕ ಅವಕಾಶ ಪಡೆದುಕೊಂಡಿದೆ. ಹಾಲಿ ವಿಶ್ವಕಪ್ ಫುಟ್​ಬಾಲ್​ನಲ್ಲಿ ಈವರೆಗೂ ಗರಿಷ್ಠ ಗೋಲು ಬಾರಿಸಿದ ರೆಡ್ ಡೆವಿಲ್ಸ್ ತಂಡವನ್ನು ಬಗ್ಗು ಬಡಿದ ಮಾಜಿ ಚಾಂಪಿಯನ್ ಫ್ರಾನ್ಸ್ ಫೈನಲ್​ಗೆ ಲಗ್ಗೆ ಇಟ್ಟಿದೆ. 2ನೇ ಅವಧಿಯಲ್ಲಿ ಡಿಫೆಂಡರ್ ಸ್ಯಾಮ್ಯುಯೆಲ್ ಉಮ್ಟಿಟಿ ಬಾರಿಸಿದ ಹೆಡರ್ ಗೋಲಿನ ನೆರವಿನಿಂದ 1998ರ ಆವೃತ್ತಿಯ ಚಾಂಪಿಯನ್ ಫ್ರಾನ್ಸ್ 2006ರ ಬಳಿಕ ವಿಶ್ವಕಪ್​ನಲ್ಲಿ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿದೆ.

ಸೇಂಟ್ ಪೀಟರ್ಸ್​ಬರ್ಗ್ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ 1-0 ಗೋಲುಗಳಿಂದ ಬಲಿಷ್ಠ ಬೆಲ್ಜಿಯಂ ತಂಡವನ್ನು ಮಣಿಸಿತು. ಐದು ಬಾರಿಯ ಚಾಂಪಿಯನ್ ಬ್ರೆಜಿಲ್ ತಂಡವನ್ನು ಕ್ವಾರ್ಟರ್​ಫೈನಲ್ ಹಂತದಲ್ಲಿ ಮಣಿಸಿದ್ದ ಬೆಲ್ಜಿಯಂ, ಫ್ರಾನ್ಸ್ ವಿರುದ್ಧವೂ ಕೆಚ್ಚಿನ ಅಟವಾಡಿದರೂ ಮಹಾಬಲಿಷ್ಠ ಡಿಫೆಂಡಿಂಗ್ ವಿಭಾಗ ಗೋಲು ಬಾರಿಸುವ ಅವಕಾಶವನ್ನೇ ನೀಡಲಿಲ್ಲ. ಈಡನ್ ಹಜಾರ್ಡ್ ನಿರಂತರ ಆಕ್ರಮಣದ ಮೂಲಕ ಫ್ರಾನ್ಸ್​ಗೆ ಭೀತಿ ಒಡ್ಡಿದರೂ, ನಿಗಲೋ ಕಾಂಟೆ, ಬೆಂಜಮಿನ್ ಪವಾರ್ಡ್ ಹಾಗೂ ಉಮ್ಟಿಟಿ ಇದ್ದ ರಕ್ಷಣಾ ವಿಭಾಗ ತಂಡದ ನೆರವಿಗೆ ನಿಂತರು. 51ನೇ ನಿಮಿಷದಲ್ಲಿ ಸಿಕ್ಕ ಕಾರ್ನರ್ ಅವಕಾಶದಲ್ಲಿ ಅಂಟೋಯಿನ್ ಗ್ರಿಜ್​ವುನ್ ಬಾರಿಸಿದ ಶಾಟ್​ಅನ್ನು ಉಮ್ಟಿಟಿ ಗೋಲುಪೆಟ್ಟಿಗೆಗೆ ಸೇರಿಸಿ ಫ್ರಾನ್ಸ್​ನ

ಮುನ್ನಡೆಗೆ ಕಾರಣರಾಗಿದ್ದರು. ಕೊನೆಯವರೆಗೂ ಈ ಮುನ್ನಡೆ ಉಳಿಸಿಕೊಂಡ ಫ್ರಾನ್ಸ್ ಕಳೆದ 20 ವರ್ಷಗಳಲ್ಲಿ ಮೂರನೇ ಬಾರಿಗೆ ಪ್ರಶಸ್ತಿ ಹಂತ ಪ್ರವೇಶಿಸಿತು. ಫ್ರಾನ್ಸ್ ತಂಡದ ಗೋಲ್ಕೀಪರ್ ಹಾಗೂ ನಾಯಕ ಹುಗೋ ಲೋರಿಸ್ ಹಾಗೂ ಬೆಲ್ಜಿಯಂನ ಗೋಲ್ಕೀಪರ್ ಥಿಬೌತ್ ಕೋಟೋಯಿಸ್ ಮೊದಲ ಅವಧಿಯಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಎರಡೂ ತಂಡಗಳು ಗೋಲು ಬಾರಿಸಲು ವಿಫಲವಾಗಿದ್ದವು. 2006ರಲ್ಲಿ ಇಟಲಿ ವಿರುದ್ಧ ಪೆನಾಲ್ಟಿಯಲ್ಲಿ ಸೋತು ನಿರಾಸೆ ಕಂಡಿದ್ದ ಫ್ರಾನ್ಸ್ ಪಂದ್ಯದ ಹೆಚ್ಚಿನ ಅವಧಿಯಲ್ಲಿ ಹಿನ್ನಡೆ ಕಂಡಿತ್ತಾದರೂ, ಬೆಲ್ಜಿಯಂನ ಉತ್ಸಾಹಿ ಆಟವನ್ನು ನಿಯಂತ್ರಿಸುವಲ್ಲಿ ಯಶ ಕಂಡಿತು. ಸಮಬಲದ ಗೋಲಿಗಾಗಿ ಬೆಲ್ಜಿಯಂ ಮಾಡಿದ ಶ್ರಮವನ್ನು ಫ್ರಾನ್ಸ್ ಡಿಫೆಂಡರ್​ಗಳು ವ್ಯರ್ಥ ಮಾಡಿದರು. ಅಕ್ಸೆಲ್ ವಿಟ್ಸೆಲ್ ಕೊನೇ ಹಂತದಲ್ಲಿ ಬಾರಿಸಿದ ದೂರ ಅಂತರದ ಶಕ್ತಿಶಾಲಿ ಶಾಟ್​ಅನ್ನು ಹುಗೋ ಲೋರಿಸ್ ಪಂಚ್ ಮಾಡಿ ತಡೆದರು. ಆ ಬಳಿಕ ಟೋಬಿ ಆಲ್ಡೆರ್​ವಿರಾಲ್ಡ್​ರ ಶಾಟ್​ಅನ್ನೂ ತಡೆಯುವ ಮೂಲಕ ಜಯದ ಹೀರೋ ಎನಿಸಿದರು.

ದಾಖಲೆಯ ಸನಿಹ ಕೋಚ್ ಡೆಶಾಂಪ್ಸ್

ರೆಫ್ರಿ ವಿಶಲ್ ಮೊಳಗಿಸಿದಾಗ ಸಹ ಆಟಗಾರರು ಮೈದಾನದ ಮಧ್ಯೆ ಆಟಗಾರರನ್ನು ತಬ್ಬಿಕೊಂಡು ಸಂಭ್ರಮ ಆಚರಿಸಿದರು. 1998ರಲ್ಲಿ ತಂಡದ ನಾಯಕನಾಗಿ ಟ್ರೋಫಿ ಜಯಿಸಿದ್ದ ಡಿಡಿಯರ್ ಡೆಶಾಂಪ್ಸ್​ಗೆ ಕೋಚ್ ಆಗಿಯೂ ವಿಶ್ವಕಪ್ ಗೆದ್ದ ಅಪರೂಪದ ದಾಖಲೆ ಮಾಡುವ ಸನಿಹದಲ್ಲಿದ್ದಾರೆ. ವಿಶ್ವ ಫುಟ್​ಬಾಲ್​ನಲ್ಲಿ ಬ್ರೆಜಿಲ್​ನ ಮಾರಿಯೋ ಜಾಗಲ್ಲೋ ಹಾಗೂ ಜರ್ಮನಿಯ ಫ್ರಾಂಜ್ ಬೆಕೆನ್​ಬರ್ ಮಾತ್ರವೇ ಆಟಗಾರ ಹಾಗೂ ಮ್ಯಾನೇಜರ್ ಆಗಿ ವಿಶ್ವಕಪ್ ಗೆದ್ದ ಅಪರೂಪದ ಸಾಧಕರು. ಅದಲ್ಲದೆ, ಎರಡು ಪ್ರಮುಖ ಟೂರ್ನಿಗಳಲ್ಲಿ ಫ್ರಾನ್ಸ್ ತಂಡವನ್ನು ಫೈನಲ್​ಗೇರಿಸಿದ ಮೊದಲ ಕೋಚ್ ಡಿಡಿಯರ್ ಡೆಶಾಂಪ್ಸ್.

ಫ್ರಾನ್ಸ್ ತಂಡದ ವಿಶ್ವಕಪ್​ನ 11ನೇ ಪಂದ್ಯದಲ್ಲಿ ಡಿಡಿಯರ್ ಡೆಶಾಂಪ್ಸ್ ಕೋಚ್ ಆಗಿ ಮುನ್ನಡೆಸಿದರು. ಇದು ಫ್ರಾನ್ಸ್​ನ ಜಂಟಿ ಗರಿಷ್ಠ ದಾಖಲೆ. ರೇಮಂಡ್ ಡೊಮೆಂಶ್ ಹಾಗೂ ಮಿಕೆಲ್ ಹಿಡ್ಲಾಗೊ ಕೂಡ ಇಷ್ಟೇ ವಿಶ್ವಕಪ್ ಪಂದ್ಯಗಳಿಗೆ ಫ್ರಾನ್ಸ್ ಕೋಚ್ ಆಗಿದ್ದರು. ಭಾನುವಾರ ಡೆಶಾಂಪ್ಸ್ ಈ ದಾಖಲೆಯನ್ನು ಮುರಿಯಲಿದ್ದಾರೆ.

ಫ್ರಾನ್ಸ್ ತಂಡ ಮೂರನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿತು. 1998 ಹಾಗೂ 2006ರಲ್ಲಿಯೂ ಫ್ರಾನ್ಸ್ ವಿಶ್ವಕಪ್ ಫೈನಲ್ ಆಡಿತ್ತು. ಯುರೋಪ್ ದೇಶಗಳ ಪೈಕಿ ಜರ್ಮನಿ (8) ಹಾಗೂ ಇಟಲಿ (6) ಮಾತ್ರವೇ ಗರಿಷ್ಠ ಬಾರಿ ಫೈನಲ್ ಆಡಿವೆ.

ಫ್ರಾನ್ಸ್ ತಂಡ ಕಳೆದ 6 ವಿಶ್ವಕಪ್ ಟೂರ್ನಿಗಳಲ್ಲಿ 3 ಬಾರಿ ಫೈನಲ್​ಗೇರಿದೆ. ಈ ಅವಧಿಯಲ್ಲಿ ವಿಶ್ವದ ಯಾವುದೇ ತಂಡ ಕೂಡ ಇಷ್ಟು ಬಾರಿ ಫೈನಲ್​ಗೇರಿದ ಸಾಧನೆ ಮಾಡಿಲ್ಲ.

ಫ್ರಾನ್ಸ್​ನಲ್ಲಿ ಮುಗಿಲುಮುಟ್ಟಿದ ಸಂಭ್ರಮ!

ಪ್ಯಾರಿಸ್: ಫ್ರಾನ್ಸ್ ತಂಡ ವಿಶ್ವಕಪ್ ಫೈನಲ್​ಗೇರುತ್ತಿದ್ದಂತೆ, ಪ್ಯಾರಿಸ್​ನಲ್ಲಿ ಅಭಿಮಾನಿಗಳು ಬೀದಿಗಿಳಿದು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದ್ದಾರೆ. ಇಡೀ ರಾತ್ರಿ ಅಂದಾಜು 50 ಸಾವಿರಕ್ಕೂ ಅಧಿಕ ಅಭಿಮಾನಿಗಳು ಹಷೋದ್ಘಾರದ ಮೂಲಕ ಗೆಲುವನ್ನು ಸಂಭ್ರಮಿಸಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್​ಅನ್ನು ಐತಿಹಾಸಿಕ ಐಫೆಲ್ ಟವರ್ ಬಳಿಯಲ್ಲಿ ದೈತ್ಯ ಪರದೆಯ ಮೂಲಕ ವೀಕ್ಷಿಸಲು ಅನುಕೂಲವಾಗುವಂತೆ ಎಲ್ಲ ಸಿದ್ಧತೆಗಳು ಆರಂಭವಾಗಿವೆ. ‘ಚಾಂಪ್ಸ್ ಡೆ ಮಾರ್ಸ್ (ಐಫೆಲ್ ಟವರ್ ಎದುರಿನ ಬೃಹತ್ ಸಾರ್ವಜನಿಕ ಸ್ಥಳ) ಬಳಿ ದೈತ್ಯ ಪರದೆಯ ವ್ಯವಸ್ಥೆ ಮಾಡಲಾಗುತ್ತದೆ. ಆ ಮೂಲಕ ಪ್ಯಾರಿಸ್​ನಲ್ಲಿಯೇ ವಿಶ್ವಕಪ್ ಪಂದ್ಯ ವೀಕ್ಷಣೆ ಮಾಡಬಹುದು’ ಎಂದು ಮೇಯರ್ ಆನ್ ಹಿಡಾಲ್ಗೊ ಹೇಳಿದ್ದಾರೆ. 2016ರಲ್ಲಿ ಫ್ರಾನ್ಸ್-ಪೋರ್ಚುಗಲ್ ನಡುವಿನ ಯುರೋ ಕಪ್ ಫೈನಲ್ ಪಂದ್ಯವನ್ನು ಇಲ್ಲಿ 90 ಸಾವಿರ ಮಂದಿ ವೀಕ್ಷಿಸಿದ್ದರು. ಮಂಗಳವಾರ ನಡೆದ ಸೆಮಿಫೈನಲ್​ಗೆ ಸಿಟಿ ಹಾಲ್​ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. 20 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಇಲ್ಲಿ ಹಾಜರಿದ್ದರು. ಪಂದ್ಯ ಗೆದ್ದ ಬಳಿಕ ಪ್ಯಾರಿಸ್​ನ ಪ್ರಧಾನ ಶಾಪಿಂಗ್ ಸ್ಟ್ರೀಟ್ ಆಗಿರುವ ದಿ ಚಾಂಪ್ಸ್ ಎಲ್ಲೀಸ್ ಬಳಿ 10 ಸಾವಿರಕ್ಕೂ ಅಧಿಕ ಅಭಿಮಾನಿಗಳು ದೇಶದ ಪರ ಹಾಗೂ ಆಟಗಾರರ ಪರ ಘೋಷಣೆ ಕೂಗಿದರು. ರಸ್ತೆಯಲ್ಲಿ ಬರುವ ಕಾರ್​ಗಳನ್ನು ತಡೆದು, ಬಸ್​ಗಳನ್ನು ಏರಿ ಸಂಭ್ರಮಿಸಿದರು. ಕೆಂಪು ಹಾಗೂ ನೀಲಿ ಬಣ್ಣದ ಪಟಾಕಿಗಳನ್ನು ಸಿಡಿಸುವ ಮೂಲಕ ಖುಷಿ ವ್ಯಕ್ತಪಡಿಸಿದರು.

ಥಾಯ್ಲೆಂಡ್ ಆಟಗಾರರಿಗೆ ಗೆಲುವು ಅರ್ಪಣೆ

ಫ್ರಾನ್ಸ್ ತಂಡದ ಗೆಲುವನ್ನು ಸ್ಟಾರ್ ಮಿಡ್​ಫೀಲ್ಡರ್ ಪೌಲ್ ಪೋಗ್ಬಾ, ಥಾಯ್ಲೆಂಡ್​ನ ಗುಹೆಯಿಂದ ಪಾರಾದ 12 ಯುವ ಫುಟ್​ಬಾಲ್ ಆಟಗಾರರು ಹಾಗೂ ಕೋಚ್​ಗೆ ಅರ್ಪಿಸಿದ್ದಾರೆ. ಟ್ವಿಟರ್​ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back To Top