ಗಡಿ ಸಮಸ್ಯೆ ಬಗೆಹರಿಸಿದರೆ ಸನ್ಮಾನ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನನಗೆ ಕಾಂಗೆಸ್ ಟಿಕೆಟ್ ಕೊಡಿಸಿ ರಾಜಕೀಯಕ್ಕೆ ಕರೆ ತಂದವರು ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಹೊರತು, ಪ್ರಿಯಾಂಕ್ ಖರ್ಗೆ ಅಲ್ಲ ಎನ್ನುವ ಮೂಲಕ ಶಾಸಕ ಉಮೇಶ ಜಾಧವ್ ಮತ್ತೊಮ್ಮೆ ಕಿಡಿಕಾರಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾಗಿ ಏಳು ತಿಂಗಳಾದರೂ ಪ್ರಿಯಾಂಕ್ ಚಿಂಚೋಳಿ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಲಿಲ್ಲ, ಹೀಗಾದರೆ ಏನು ಮಾಡಬೇಕು? ಜನರು ನಾನು ಕೆಲಸ ಮಾಡುತ್ತಿಲ್ಲ ಎಂದು ತಪ್ಪು ತಿಳಿದುಕೊಳ್ಳುವಂತಾಗಿದೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ಚಿಂಚೋಳಿ ಗಡಿ ವಿವಾದ ಬಗೆಹರಿಸಿದ್ದೇವೆ ಎಂದು ಸಚಿವ ಖರ್ಗೆ ಹೇಳಿದ್ದಾರಾದರೂ ಯಥಾಸ್ಥಿತಿಯಲ್ಲಿದೆ. ಗಡಿವಿವಾದ ಬಗೆಹರಿಸಿದ್ದನ್ನು ತೋರಿಸಲಿ, ಮಾಧ್ಯಮದವರೊಂದಿಗೆ ಸ್ಥಳಕ್ಕೆ ಹೋಗೋಣ. ಅಲ್ಲಿ ಒತ್ತುವರಿ ತೆರವುಗೊಳಿಸಿ ಪಹಣಿ ಹೊಂದಿರುವವರಿಗೆ ಹಸ್ತಾಂತರಿಸಿದ್ದು ತೋರಿಸಿದರೆ ಮತಕ್ಷೇತ್ರದ ಜನತೆ ಪರವಾಗಿ ಅದ್ದೂರಿಯಾಗಿ ಸನ್ಮಾನಿಸುತ್ತೇನೆ ಎಂದರು.
ಗಡಿಲಿಂಗದಳ್ಳಿ ಪುನರ್ವಸತಿ ಕೇಂದ್ರಕ್ಕೆ ಮೂಲಸೌಕರ್ಯ ಕಲ್ಪಿಸುವ 19 ಕೋಟಿ ವಿಶೇಷ ಪ್ಯಾಕೇಜ್ ಕಾಮಗಾರಿ ಶಂಕುಸ್ಥಾಪನೆಗೆ ಆಹ್ವಾನಿಸಿದರೂ ಬರಲಿಲ್ಲ, ದಿನಾಂಕ ನಿಗದಿ ಮಾಡಿ ಬಳಿಕ ಮುಂದೂಡಿದರು. ಇನ್ನು ನಾನು ಹೇಳುವವರೆಗೂ ಉದ್ಘಾಟನೆ ಮಾಡಕೂಡದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ದೂರಿದರು.
10 ವರ್ಷದ ಹಿಂದೆ ಚಿಂಚೋಳಿ ಕ್ಷೇತ್ರದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಲು ಸರ್ಕಾರ 97 ಎಕರೆ ಜಮೀನನನ್ನು ಕೆಐಡಿಬಿಯಿಂದ ಖಾಸಗಿ ಸಂಸ್ಥೆಗೆ ನೀಡಿದೆ. ಇದುವರೆಗೆ ಕಾರ್ಖಾನೆ ಆರಂಭಿಸಿಲ್ಲ, ಈ ಸಮಸ್ಯೆ ಪರಿಹರಿಸುವಂತೆ ಹಲವು ಸಲ ಕೋರಿದರೂ ಪ್ರಯೋಜವಾಗಿಲ್ಲ. ಇದರಿಂದಾಗಿ ಬೇರೆ ಸಕ್ಕರೆ ಕಾರ್ಖಾನೆಗಳಿಗೆ ಪರವಾನಗಿ ನೀಡುತಿಲ್ಲ. ಹತ್ತು ವರ್ಷದಿಂದ ಜಮೀನಿನ ಬಾಡಿಗೆ ಸಹ ಕಂಪನಿಯವರು ಪಾವತಿಸಿಲ್ಲ ಡಾ.ಜಾಧವ್ ಹೇಳಿದರು.
ತಮ್ಮ ಕ್ಷೇತ್ರದಲ್ಲಿ ಅಧಿಕಾರಿಗಳ ವರ್ಗಾವಣೆ ಮೂಲಕ ಸಚಿವರು ಹಸ್ತಕ್ಷೇಪ ಮಾಡುತ್ತಿದ್ದಾರೆ. ಡಿಎಂಎಫ್ ಅನುದಾನ ಕೂಡ ಕ್ಷೇತ್ರಕ್ಕೆ ನೀಡಿಲ್ಲ. ಒಟ್ಟಿನಲ್ಲಿ ಚಿಂಚೋಳಿ ಮತ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಡೆಗಣಿಸಲಾಗುತ್ತದೆ ಎಂದು ಆರೋಪಿಸಿದರು. ಕೆಳದಂಡೆ ಮುಲ್ಲಾಮಾರಿ ಏತ ನೀರಾವರಿ ಯೋಜನೆ ನನೆಗುದಿಗೆ ಬಿದ್ದಿದೆ. 2000 ಹೆಕ್ಟೇರ್ಗೆ ನೀರುಣಿಸುವ ಯೋಜನೆ ಕಾಮಗಾರಿ ಬಗ್ಗೆ ಚಕಾರ ಎತ್ತುತ್ತಿಲ್ಲ, ಬೇರೆ ಕ್ಷೇತ್ರಗಳಲ್ಲಿ ಕೆರೆಗಳಿಗೆ ನೀರು ತುಂಬುವುದು ಸೇರಿ ಇತರ ಯೋಜನೆಗಳಾಗಿರುವಾಗ ಚಿಂಚೋಳಿಗೇಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.