ಭೀಕರ ಅಪಘಾತ, 6 ಜನರ ಸಾವು

>

ಉಮದಿ: ಪಂಢರಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರ ಸರ್ಕಾರಿ ಬಸ್ ಹಾಗೂ ಮಾರುತಿ ಇಕೋ ಕಾರು ನಡುವೆ ಶನಿವಾರ ಸಂಜೆ ಮುಖಾಮುಖಿ ಡಿಕ್ಕಿಯಾಗಿ ಒಂದೇ ಕುಟುಂಬದ 6 ಜನರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸುರೇಶ ರಾಮಚಂದ್ರ ಕೋಕನೆ (68), ಸಚಿನ್ ಸುರೇಶ ಕೋಕನೆ (40), ಸವಿತಾ ಸಚಿನ್ ಕೋಕನೆ (34), ಆರ್ಯನ್ ಸಚಿನ್ ಕೋಕನೆ (12), ಶ್ರದ್ಧಾ ರಾಜೇಶ ಸಾವಂತ (20), ಪ್ರಥಮ ರಾಜೇಶ ಸಾವಂತ (16) ಮೃತಪಟ್ಟಿದ್ದಾರೆ. ಧನಶ್ರೀ ರಾಜೇಶ ಸಾವಂತ (19)ಗಂಭೀರವಾಗಿ ಗಾಯಗೊಂಡಿದ್ದು, ಸೊಲ್ಲಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದಿಂದ ಉಂಟಾದ ಭಾರಿ ಶಬ್ದದಿಂದಾಗಿ ಸಮೀಪದ ಗ್ರಾಮಸ್ಥರು ಕೂಡಲೇ ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಹೊರ ತೆಗೆಯುವ ಸಮಯದಲ್ಲಿ ಸ್ಥಳದಲ್ಲಿಯೇ ಐದು ಜನರು ಮೃತಪಟ್ಟಿದ್ದರು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಸಮೀಪದ ಪಂಢರಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ವೇಳೆ ಚಿಕಿತ್ಸೆ ಲಕಾರಿಯಾಗದೆ ಪ್ರಥಮ ಸಾವಂತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತರೆಲ್ಲರೂ ಮುಂಬೈ ನಗರದ ಘಾಟಕೋಪರ ಪ್ರದೇಶದ ನಿವಾಸಿಗಳಾಗಿದ್ದಾರೆ. ಸುರೇಶ ರಾಮಚಂದ್ರ ಕೋಕನೆ ತಮ್ಮ ಕುಟುಂಬದೊಂದಿಗೆ ಪಂಢರಪುರ ಪಾಂಡುರಂಗನ ದರ್ಶನ ಪಡೆದು ಅಕ್ಕಲಕೋಟದ ಸ್ವಾಮಿ ಸಮರ್ಥ ದೇವಸ್ಥಾನ ದರ್ಶನಕ್ಕಾಗಿ ತೆರಳುತ್ತಿರುವಾಗ ಅಪಘಾತ ಸಂಭವಿಸಿದೆ. ಈ ಕುರಿತು ಪಂಢರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.