ಪಂಢರಿನಗರದಲ್ಲಿ 153 ಕ್ಯಾಮರಾ ಅಳವಡಿಕೆ

ಉಮದಿ: ದೇವಶಯನಿ ಏಕಾದಶಿ ನಿಮಿತ್ತ ಪಂಢರಪುರದಲ್ಲಿ ನಡೆಯಲಿರುವ ಯಾತ್ರೆಯಲ್ಲಿ ಅಹಿತಕರ ಘಟನೆ ನಿಯಂತ್ರಣಕ್ಕೆ ಮಂದಿರ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆ ಪ್ರಮುಖ ಸ್ಥಳಗಳಲ್ಲಿ 153 ಸಿಸಿ ಕ್ಯಾಮರಾ ಅಳವಡಿಸಿದೆ.

ಯಾತ್ರೆಗಾಗಿ ಪ್ರಮುಖ 9 ಪಲ್ಲಕ್ಕಿಗಳು, ನೂರಾರು ದಿಂಡಿಗಳು ಹಾಗೂ 10ರಿಂದ 12 ಲಕ್ಷ ವಾರಕರಿಗಳು ಪಂಢರಪುರಕ್ಕೆ ಆಗಮಿಸಲಿದ್ದಾರೆ.

ದೇಶದಲ್ಲಿ ಯಾವುದೇ ಭಾಗದಲ್ಲಿ ಭಯೋತ್ಪಾದನೆ ಘಟನೆಗಳು ನಡೆದರೆ ಪಂಢರಪುರಕ್ಕೂ ಗುಪ್ತಚರ ಇಲಾಖೆಯಿಂದ ಸಂದೇಶ ರವಾನೆ ಆಗುತ್ತದೆ. ಇದರಿಂದ ಪಂಢರಪುರದಲ್ಲೂ ಹೈಅಲರ್ಟ್ ನೀಡಲಾಗುತ್ತದೆ. ಯಾತ್ರೆ ಕಾಲಾವಧಿಯಲ್ಲಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಬಿಡಿಡಿಎಸ್ ತಂಡ ಮಂದಿರ ಸುತ್ತ ಹದ್ದಿನ ಕಣ್ಗಾವಲು ನಡೆಸುತ್ತದೆ.

100 ಸಿಸಿ ಕ್ಯಾಮರಾ: ಮಂದಿರ ಸಮಿತಿಯಿಂದ ಮಂದಿರದೊಳಗೆ, ಚಂದ್ರಭಾಗ ನದಿ ತೀರ, ಮಹಾದ್ವಾರ, ನಾಮದೇವ ಮೆಟ್ಟಿಲು, ಸಂತ ತುಕಾರಾಮ ಭವನ, ಸಂತ ಜ್ಞಾನೇಶ್ವರ ಮಹಾರಾಜ ದರ್ಶನ ಮಂಟಪ, ಚೌಪಾಳಾ ಸೇರಿ ಅನೇಕ ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಮೆಟಲ್ ಡಿಟೆಕ್ಟರ್ ಹಾಗೂ ಬ್ಯಾಗ್ ಸ್ಕ್ಯಾನರ್ ಅಳವಡಿಕೆ: ಭಕ್ತರ ಸುರಕ್ಷತೆ ದೃಷ್ಟಿಯಿಂದ ವಿಠ್ಠಲ-ರುಕ್ಮೀಣಿ ದರ್ಶನ ಸಾಲಿನಲ್ಲಿ, ದರ್ಶನ ಮಂಟಪ ಹಾಗೂ ನಾಮದೇವ ಮಟ್ಟಿಲಲ್ಲಿ ಮೆಟಲ್ ಡಿಟೆಕ್ಟರ್ ಹಾಗೂ ಬ್ಯಾಗ್ ಸ್ಕ್ಯಾನರ್ ಅಳವಡಿಸಲಾಗಿದೆ.

ಆಷಾಢ ಏಕಾದಶಿಯಲ್ಲಿ ನಡೆಯುವ ಯಾತ್ರೆ ಬಂದೋಬಸ್ತ್​ಗಾಗಿ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ಅಹಿತಕರ ಘಟನೆಗಳನ್ನು ತಡೆಯಲು ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

| ಶ್ರೀಧರ ಪಾಡುಳೆ, ಪೊಲೀಸ್ ನಿರೀಕ್ಷಕ, ಪಂಢರಪುರ