ವಿಠ್ಠಲ ದರ್ಶನಕ್ಕೆ 100 ರೂ.

ಉಮದಿ: ದಲ್ಲಾಳಿ ಹಾಗೂ ಮಧ್ಯವರ್ತಿಗಳ ಹಾವಳಿ ತಡೆಯಲು ಪಂಢರಪುರದ ವಿಠ್ಠಲ ದೇವರ ದರ್ಶನಕ್ಕೆ ಆನ್​ಲೈನ್ ಬುಕಿಂಗ್​ಗೆ 100 ರೂ. ಶುಲ್ಕ ವಿಧಿಸಲು ದೇಗುಲ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಮಂದಿರ ಸಮಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸಚಿನ್ ತೊಲೆ ತಿಳಿಸಿದರು.

ಹಲವಾರು ವರ್ಷಗಳಿಂದ ಪಂಢರಪುರದ ವಿಠ್ಠಲರುಕ್ಮಿಣಿ ಆನ್​ಲೈನ್ ದರ್ಶನ ಉಚಿತವಾಗಿ ದೊರೆಯತ್ತಿತ್ತು. ಆದರೆ ಇದನ್ನೆ ಬಂಡವಾಳ ಮಾಡಿಕೊಂಡು ಕೆಲವು ದಲ್ಲಾಳಿಗಳು ಜೇಬು ತುಂಬಿಸಿಕೊಳ್ಳುತ್ತಿರುವ ಬಗ್ಗೆ ದೂರು ಕಂಡು ಬಂದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ವಾರ್ಷಿಕವಾಗಿ 8-10 ಕೋಟಿ ರೂ. ಮಂದಿರದ ಆದಾಯ ಹೆಚ್ಚುವ ಸಾಧ್ಯತೆ ಇದ್ದು, ಇದನ್ನು ದೇವಸ್ಥಾನ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು ಎಂದು ಪಂಢರಪುರದ ಮಂದಿರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ದೇಶದ ವಿವಿಧ ರಾಜ್ಯಗಳಿಂದ ಪ್ರತಿದಿನ 2 ಸಾವಿರಕ್ಕೂ ಅಧಿಕ ಶ್ರೀಮಂತರು ಹಾಗೂ ಮಧ್ಯಮ ವರ್ಗದ ಜನರು ವಿಠ್ಠಲ- ರುಕ್ಮೀಣಿ ದರ್ಶನಕ್ಕೆ ಆಗಮಿಸುವ ಮುಂಚೆ ಆನ್​ಲೈನ್ ಬುಕಿಂಗ್ ಮಾಡಿಸಿ ಪಂಢರಪುರ ನಗರಕ್ಕೆ ಆಗಮಿಸುತ್ತಾರೆ ಎಂದರು.

ದೂರದ ಊರುಗಳಿಂದ ಆಗಮಿಸುವ ಭಕ್ತರು ದರ್ಶನಕ್ಕಾಗಿ ಸಾಲುಗಳಲ್ಲಿ ನಿಲ್ಲದೆ ಆನ್​ಲೈನ್ ಬುಕಿಂಗ್ ಮಾಡಿಸಿದ ರಸೀದಿ ತೋರಿಸಿ ಶೀಘ್ರವಾಗಿ ವಿಠ್ಠಲ- ರುಕ್ಮಿಣಿ ದರ್ಶನ ಪಡೆಯಬಹುದಿತ್ತು. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಕೆಲವು ದಲ್ಲಾಳಿಗಳು ಭಕ್ತರಿಗೆ ಸುಳ್ಳು ಮಾಹಿತಿ ನೀಡಿ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದರು.

ಮಂದಿರ ಸಮಿತಿ ವ್ಯವಸ್ಥಾಪಕ ಬಾಲಾಜಿ ಪದೂಲವಾಡ, ಸದಸ್ಯರಾದ ಸಂಭಾಜಿ ಶಿಂಧೆ, ಶಕುಂತಲಾ ನಾಡಗೇರ ಇತರರು ಇದ್ದರು.

ವಿಐಪಿಗಳಿಗೂ ಅನ್ವಯಿಸಿ: ಕಾರ್ತಿಕ, ಆಷಾಢ ಏಕಾದಶಿ, 15 ದಿನದ ಏಕಾದಶಿ ಹಾಗೂ ಜನದಟ್ಟನೆ ಇರುವ ಕೆಲವು ದಿನಗಳನ್ನು ಬಿಟ್ಟು ವರ್ಷದ ಉಳಿದ 330 ದಿನ ಸರಾಸರಿ 2 ಸಾವಿರ ಭಕ್ತರು ಆನ್​ಲೈನ್ ಬುಕಿಂಗ್ ಮಾಡಲಿದ್ದು, ಇದರಿಂದ ಮಂದಿರದ ಆದಾಯ ಹೆಚ್ಚಲಿದೆ. ಸಾಮಾನ್ಯ ಜನರಿಗೆ 100 ರೂ. ವಿಧಿಸಿರುವ ಮಂದಿರ ಸಮಿತಿ ವಿಐಪಿಗಳಿಗೂ ಅನ್ವಯಿಸುವಂತೆ ಆದೇಶ ಹೊರಡಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.