ಭಕ್ತರ ಸ್ವಾಗತಕ್ಕಾಗಿ ಪಂಢರಪುರ ಸಜ್ಜು

ಉಮದಿ: ಭೂವೈಕುಂಠ ಎಂದು ಪ್ರಸಿದ್ಧವಾದ ಪಂಢರಪುರದಲ್ಲಿ ಶುಕ್ರವಾರದಿಂದ ಜು.28ರವರಗೆ ಆಷಾಢ ಏಕಾದಶಿ ಯಾತ್ರೆ ನಡೆಯಲಿದ್ದು, ಭಕ್ತರ ಸ್ವಾಗತಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ 10 ರಿಂದ 12 ಲಕ್ಷ ಭಕ್ತರು ಪಂಢರಿನಗರಕ್ಕೆ ಆಗಮಿಸುವ ನಿರೀಕ್ಷೆ ಇದೆ. ಪಲ್ಲಕ್ಕಿ ಮಾರ್ಗಗಳಲ್ಲಿ ಜನದಟ್ಟನೆ ತಡೆಯುವ ದೃಷ್ಟಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಸಂಜಯ ತೇಲಿ ಅವರು 144ಕಲಂ ಜಾರಿಗೊಳಿಸಿ, ಡ್ರೋಣ ಕ್ಯಾಮರಾದಿಂದ ಚಿತ್ರೀಕರಣ ನಿಷೇಧಿಸಿದ್ದಾರೆ. ಆದರೆ, ಖಾಸಗಿ ಟಿವಿ ಚಾನಲ್, ಸಂಘ-ಸಂಸ್ಥೆಗಳ ವತಿಯಿಂದ ಚಿತ್ರೀಕರಣ ಮಾಡಬಹುದಾಗಿದೆ ಎಂದು ಅವರು ಆದೇಶಿಸಿದ್ದಾರೆ.

ಸಂಚಾರಿ ಶೌಚಗೃಹ ವ್ಯವಸ್ಥೆ: ಭಕ್ತರ ಆರೋಗ್ಯದ ದೃಷ್ಟಿಯಿಂದ ಜಿಪಂ ಮುಖ್ಯ ಕಾರ್ಯಕಾರಿ ಅಧಿಕಾರಿ ಡಾ.ರಾಜೇಂದ್ರ ಭಾರೂಢ ಅವರು ದಿಂಡಿ ಮಾರ್ಗಗಳಲ್ಲಿ 100ಕ್ಕೂ ಹೆಚ್ಚು ಸಂಚಾರಿ ಶೌಚಗೃಹ ಹಾಗೂ ಹ್ಯಾಂಡ್​ವಾಶ್ ಕೇಂದ್ರಗಳನ್ನು ತೆರೆಸಿದ್ದಾರೆ.

ಬೃಹತ್ ಎಲ್​ಸಿಡಿ ಪರದೆ: ಯಾತ್ರೆಗೆ ಆಗಮಿಸುವ ಭಕ್ತರು ಪಾಂಡುರಂಗನ ದರ್ಶನ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. 24 ರಿಂದ 30 ಗಂಟೆಗಳವರೆಗೆ ಸರದಿಯಲ್ಲಿ ನಿಂತರೂ ದರ್ಶನ ಭಾಗ್ಯ ದೊರೆಯದೆ ಮಂದಿರದ ಕಲಶ ದರ್ಶನ ಮಾಡಿ ಹಿಂದಿರುಗುತ್ತಾರೆ. ಅದನ್ನು ಗಮನಿಸಿ ಮಂದಿರದ ಆಡಳಿತ ಮಂಡಳಿ ದರ್ಶನ ಸಾಲುಗಳಲ್ಲಿ ಬೃಹತ್ ಎಲ್​ಸಿಡಿ ಪರದೆಗಳನ್ನು ಅಳವಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಂದಿರ ಸಮಿತಿ ಅಧ್ಯಕ್ಷ ಡಾ.ಅತುಲ್ ಭೋಸಲೆ ತಿಳಿಸಿದ್ದಾರೆ.

ಸ್ವಯಂ ಸೇವಕರ ನೇಮಕ

ಭಕ್ತರಿಗೆ ನಿರ್ಮಲ ಸ್ಥಳದ ಅನುಭವ ನೀಡುವುದಕ್ಕಾಗಿ ಮಂದಿರ ಸಮಿತಿ ಸ್ವಚ್ಛತೆ ಕೆಲಸಗಾರರನ್ನು ಹೊರತು ಪಡಿಸಿ ರಾಜ್ಯದ ಅನೇಕ ಕಡೆಗಳಿಂದ ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ಆಗಮಿಸಿದ್ದು, ಅವರಿಗೆ ಟಿ-ಶರ್ಟ್ ನೀಡಲಾಗಿದೆ. ಅವರೆಲ್ಲ ನಿರಂತರ ನಗರದ ಸ್ವಚ್ಛತೆ ಕಾಪಾಡಲಿದ್ದಾರೆ ಎಂದು ಡಾ.ಭೋಸಲೆ ತಿಳಿಸಿದರು.