ವಿಠಲನ ಪೂಜೆಯಲ್ಲೂ ಬೆಲೆ ಏರಿಕೆ

ಉಮದಿ: ಪಂಢರಪುರ ವಿಠಲ- ರುಕ್ಮಿಣಿ ಮಹಾಪೂಜೆ ಬರುವ 8 ತಿಂಗಳವರೆಗೆ ಬುಕ್ ಆಗಿದೆ. ಆದರೆ, ಯುಗಾದಿ ಪಾಢ್ಯದಿಂದ ಮೃಗಶಿರ ನಕ್ಷತ್ರದವರೆಗೆ ನಡೆಯುವ ಶ್ರೀಗಂಧ ಪೂಜೆ ಬುಕಿಂಗ್ ಪ್ರಾರಂಭಗೊಂಡಿವೆ ಎಂದು ಮಂದಿರ ಸಮಿತಿ ತಿಳಿಸಿದೆ.

ಶ್ರೀಗಂಧ ಪೂಜೆ ಬೆಲೆಯಲ್ಲಿ ಏರಿಕೆಯಾಗಿದ್ದು, ಕಳೆದ ವರ್ಷ 15 ಸಾವಿರ ರೂ. ಇದ್ದ ಪೂಜೆಗೆ ಈ ವರ್ಷ 21 ಸಾವಿರ ಹಾಗೂ 7500 ರೂ. ಇದ್ದ ರುಕ್ಮಿಣಿದೇವಿ ಪೂಜೆಗೆ 11 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಈ ವಿಶೇಷ ಪೂಜೆ ನೆರವೇರಿಸಲಿಚ್ಛಿಸುವ ಭಕ್ತರು ಮುಂಗಡವಾಗಿ ಹಣ ಭರಿಸಿ, ದಿನಾಂಕ ಕಾಯ್ದಿರಿಸಬೇಕು.

ನಿತ್ಯ ಒಂದು ಮಹಾಪೂಜೆಗೆ ಬುಕಿಂಗ್ ಮಾಡಲಾಗುತ್ತದೆ. ಅದಕ್ಕಾಗಿ ಭಕ್ತರು 25 ಸಾವಿರ ರೂ. ಭರಿಸಿ ದಿನ ಕಾಯ್ದಿರಿಸಬೇಕು. ಮಹಾಪೂಜೆಗೆ ಕುಟುಂಬದ 10 ಜನರಿಗೆ ಮಂದಿರ ಪ್ರವೇಶಕ್ಕೆ ಅವಕಾಶವಿದ್ದು, ಮಹಿಳೆಯರು ಹಾಗೂ ಯುವತಿಯರು ಕಡ್ಡಾಯವಾಗಿ ಸೀರೆ ಧರಿಸಬೇಕು. ಒಂದು ದಂಪತಿ ಜೋಡಿಗೆ ಮಾತ್ರ ಪೂಜೆಗೆ ಅವಕಾಶವಿದ್ದು, ಇತರರಿಗೆ ಪೂಜೆಗೆ ಕೈಜೋಡಿಸುವ ಅವಕಾಶ ನೀಡಲಾಗುವುದು. ನಿಗದಿತ ದಿನದಂದು ನಸುಕಿನ 3.30 ಗಂಟೆಯೊಳಗೆ ಮಂದಿರದಲ್ಲಿ ಹಾಜರಾಗಬೇಕು. ಈ ಪೂಜೆಗಾಗಿ ಒಂದು ಗಂಟೆ ಸಮಯ ತಗಲುತ್ತದೆ.

ವಿಠಲ-ರುಕ್ಮಿಣಿ ದೇವಿಗೆ ಮಧ್ಯಾಹ್ನ 3.30ಕ್ಕೆ ನಡೆಯುವ ಶ್ರೀಗಂಧ ಪೂಜೆ ನೆರವೇರುವುದು. ಈ ಪೂಜೆಗೂ ಸಹ ಕುಟುಂಬದ 10 ಜನರಿಗೆ ಗರ್ಭಗುಡಿಯಲ್ಲಿ ಪ್ರವೇಶವಿದೆ ಎಂದು ನಿತ್ಯೋಪಚಾರ ಪ್ರಮುಖ ಸಂಜಯ ಕೋಕಿಳ ತಿಳಿಸಿದ್ದಾರೆ.