ಜತ್ತ ನಗರದಲ್ಲಿ ಕುಟುಂಬಕ್ಕೆ 30 ವರ್ಷದಿಂದ ಬಹಿಷ್ಕಾರ

ಉಮದಿ (ಮಹಾರಾಷ್ಟ್ರ): ಸಮುದಾಯದ ಪರವಾನಗಿ ಪಡೆಯದೆ ವಿವಾಹ ಮಾಡಿಕೊಂಡಿದ್ದಕ್ಕಾಗಿ ವಿಧಿಸಲಾದ ದಂಡ ಭರಿಸದ ಕಾರಣ ಜತ್ತ ನಗರದ ಮಾರುತಿ ಮುಕುಂದ ಕೋಳಿ ಅವರ ಕುಟುಂಬದ ಮೇಲೆ (ಕಡಕಲಕ್ಷ್ಮಿ) ಯಾದವ ಸಮುದಾಯದ ಮುಖಂಡರು 30 ವರ್ಷಗಳಿಂದ ಬಹಿಷ್ಕಾರ ಹಾಕಿದ್ದಾರೆ.

ಸಮುದಾಯದ ಮುಖಂಡ 30 ವರ್ಷಗಳಿಂದ ನೀಡುತ್ತಿರುವ ದೌರ್ಜನ್ಯ ಸಹಿಸಿಕೊಂಡು ಇಂದಲ್ಲ ನಾಳೆ ಬಹಿಷ್ಕಾರ ತೆರವುಗೊಳಿಸಬಹುದೆಂಬ ಆಸೆಯಲ್ಲಿದ್ದ ಮಾರುತಿ ಕೋಳಿ ಕುಟುಂಬ ಸದ್ಯ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆಹೋಗಿದೆ.

ಬಹಿಷ್ಕಾರಕ್ಕೆ ಕಾರಣವೇನು?

ಮಾರುತಿ ಮೊದಲ ಪತ್ನಿ ಬುದ್ದವ್ವ ಜೊತೆ ವಿವಾಹವಾಗುವಾಗ ವಧುವಿನ ತಂದೆ ರಿವಾಜಿನಂತೆ 5 ಸಾವಿರ ರೂ. ದಕ್ಷಿಣೆ ನೀಡಿದ್ದರು. ಆದರೆ, ಸಮುದಾಯಕ್ಕೆ ಯಾವುದೇ ಕಾಣಿಕೆ ನೀಡದೆ ಹಾಗೂ ಪರವಾನಗಿ ಪಡೆಯದೆ ವಿವಾಹ ಮಾಡಿಸಿದ್ದಾರೆ ಎಂದು ಸಮುದಾಯದ ಮುಖಂಡರು 1 ಲಕ್ಷ ರೂ. ದಂಡ ವಿಧಿಸಿದ್ದರು. ಮುಖಂಡರು ವಿಧಿಸಿದ ದಂಡವನ್ನು ಸಂಪೂರ್ಣವಾಗಿ ಭರಿಸಿದರೂ, ಸುಮ್ಮನಾಗದ ಮುಖಂಡರು 2 ಲಕ್ಷ ರೂ. ದಂಡ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಬಡ ಕುಟುಂಬದ ಬದುಕು

ಜತ್ತ ನಗರದ ಸ್ಟೀಲ್ ಕಾಲನಿಯಲ್ಲಿ ಮಾರುತಿ ಇಬ್ಬರು ಪತ್ನಿಯರು ಹಾಗೂ ಐದು ಜನ ಮಕ್ಕಳೊಂದಿಗೆ ವಾಸವಾಗಿದ್ದು, ಕುಲದೇವಿ ಆರಾಧನೆ ಮಾಡುತ್ತ ದಿನ ಬೆಳಗಾದರೆ ಒಂದೊಂದು ಊರು ತಿರುಗುತ್ತ ದುರ್ಗಮ್ಮನ ಮಹಿಮೆ ಸಾರುತ್ತ ಮೈಮೇಲೆ ಬಾಸುಂಡೆ ಬರುವಂತೆ ಮೈಗೆ ಶಿಕ್ಷಿಸುತ್ತ ಜನ ನೀಡಿದ್ದರಲ್ಲೆ ಬದುಕು ಸಾಗಿಸುತ್ತಿದ್ದಾರೆ.

ಸದ್ಯ ಮಾರುತಿ ಅವರು ಹೆಣ್ಣುಮಕ್ಕಳ ಮದುವೆ ವಯಸ್ಸಿಗೆ ಬಂದಿದ್ದು, ಬಹಿಷ್ಕಾರ ಹಿಂಪಡೆಯುವಂತೆ ಮುಖಂಡರಿಗೆ ಅಂಗಲಾಚಿದರೂ ಕಿಂಚಿತ್ತು ಕನಿಕರ ತೋರದ ಕಾರಣ ಮಾರುತಿ ಅವರು ಮೂಢನಂಬಿಕೆ ನಿಮೂಲನೆ ಸಮಿತಿ ಸಹಾಯದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಹೈಲ್ ಶಮಾ ಅವರ ಬಳಿ ಸಮುದಾಯದ ಮುಖಂಡ ಅಣ್ಣಪ್ಪ ಕೋಳಿ (ಚಡಚಣ), ಸ್ವಾಮಿ ಕೋಳಿ, ಬುಡಪ್ಪ ಕೋಳಿ (ಬರಡೋಲ), ಶಂಕರ ಕೋಳಿ (ಹಲಸಂಗಿ ಜಿಲ್ಲಾ ವಿಜಯಪುರ), ದುರ್ಗಪ್ಪ ಕೋಳಿ, ರಾಮ ಕೋಳಿ, ಬಾಲಪ್ಪ ಕೋಳಿ, ಶಿವಪ್ಪ ಕೋಳಿ, ಮಾಯಪ್ಪ ಕೋಳಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

ಮದುವೆ ಮನೆಯಿಂದ ಹೊರಕ್ಕೆ

2018ರ ಜು. 25ರಂದು ಕಣ್ಣೂರದಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ತೆರಳಿದ ಮಾರುತಿ ಕೋಳಿ ಕುಟುಂಬವನ್ನು ಸಮುದಾಯದ ಮುಖಂಡರು ಕತ್ತು ಹಿಡಿದು ಎಲ್ಲರ ಸಮ್ಮುಖದಲ್ಲಿ ಹೊರಹಾಕಿ ಅವಮಾನಗೊಳಿಸಿದ್ದರು.

ಯುಗಾದಿಯಂದು ಜತ್ತ- ಸಾತಾರಾ ರಸ್ತೆಯಲ್ಲಿನ ಮೈದಾನದಲ್ಲಿ ನಡೆದ ಸಮುದಾಯದ ಸಭೆಯಲ್ಲಿ ನನ್ನ ಮಕ್ಕಳ ಮದುವೆ ಮಾಡುವುದಿದೆ. ನಮ್ಮ ಮೇಲಿನ ಬಹಿಷ್ಕಾರ ಹಿಂಪಡೆಯಬೇಕೆಂದು ವಿನಂತಿಸಿದರೂ ಮುಖಂಡರು ನಿರಾಕರಿಸಿದ್ದರಿಂದ ಸಮುದಾಯದ ಮುಂದೆ ಮೂಗು ನೆಲಕ್ಕೆ ತಿಕ್ಕಿದರೂ ಕನಿಕರ ಬಾರದೆ ಬಹಿಷ್ಕಾರ ಮುಂದುವರಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಮೂಢನಂಬಿಕೆ ನಿಮೂಲನೆ ಸಮಿತಿಯ ರಾಜ್ಯ ಕಾರ್ಯಕಾರಣಿ ಸಂಜಯ ಬನಸೊಡೆ, ಅಲೆಮಾರಿ ಜನಾಂಗದ ಅಭಿವೃದ್ಧಿ ಸದಸ್ಯ ವಿಕಾಸ ಮೋರೆ ಹಾಗೂ ಮಾರುತಿ ಕೋಳಿ ಪೊಲೀಸ್ ವರಿಷ್ಠಾಧಿಕಾರಿ ಸುಹೇಲ್ ಶರ್ಮಾ ಅವರಿಗೆ ದೂರು ಸಲ್ಲಿಸಿದ್ದಾರೆ.