ಧರ್ಮ ಮಾರ್ಗದಿಂದ ಧನ ಸಂಪಾದಿಸಿ


ಉಮದಿ:
ಪ್ರತಿಯೊಬ್ಬರೂ ಧರ್ಮ ಮಾರ್ಗದಿಂದ ಧನ ಸಂಪಾದಿಸಬೇಕು. ವಾಮ ಮಾರ್ಗದಿಂದ ಗಳಿಸಿದ ಹಣ, ಸಂಪತ್ತು ಉಳಿಯದು ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಅಭಿಪ್ರಾಯಪಟ್ಟರು.

ಸಮೀಪದ ಮೊರಬಗಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಕಲಶಾರೋಹಣ, ಅಡ್ಡಪಲ್ಲಕ್ಕಿ, ಧರ್ಮಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧಪಂಡಿತಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿ, ಈ ದೇವಸ್ಥಾನದ ಶಿಖರ, ಕಲಶ ಅಧ್ಯಾತ್ಮದ ಟವರ್ ಇದ್ದಂತೆ. ಧರ್ಮದ ಟವರ್ ಸ್ಥಾಪನೆಯಾಗುತ್ತಿದ್ದಂತೆ ನಿರಂತರವಾಗಿ ಭಗವಂತನನ್ನು ನೆನೆಯುವುದಕ್ಕೆ ಸಂಪರ್ಕ ಕಲ್ಪಿಸಿ ಭಕ್ತರಿಗೆ ಭಾವ ಮತ್ತು ಆಧ್ಯಾತ್ಮಿಕ ಮಾರ್ಗಕ್ಕೆ ಸಂಪರ್ಕ ಕಲ್ಪಿಸಿಕೊಡುತ್ತದೆ ಎಂದರು.

ಇಂಚಗೇರಿ ಡಾ.ರೇಣುಕ ಶ್ರೀಗಳು, ಮಂದ್ರೂಪದ ರೇಣುಕಾ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ಹೊಟಗಿ ಬೃಹನ್ಮಠದ ಡಾ.ಮಲ್ಲಿಕಾರ್ಜುನ ಶಿವಾಚಾರ್ಯರು, ಗುಡ್ಡಾಪುರ ಗುರುಪಾದ ದೇವರು, ನಾಗಠಾಣದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಜೈನಾಪುರದ ಡಾ. ಶ್ರೀರೇಣುಕ ಶಿವಾಚಾರ್ಯರು, ಮುಮ್ಮಟೆಗುಡ್ಡ-ಅರಕೇರಿ ಅವಧೂತಸಿದ್ಧ ಮಹಾರಾಜರು, ಚಡಚಣ ಪಪಂ ಅಧ್ಯಕ್ಷ ಬಾಬುಗೌಡ ಪಾಟೀಲ ಇದ್ದರು.

ಹಣಮಂತರಾಯಗೌಡ ಬಗಲಿ ಸ್ವಾಗತಿಸಿದರು. ಎಲ್.ಎಸ್. ಅಂಕಲಗಿ ನಿರೂಪಿಸಿದರು. ಡಾ.ರೇಣುಕ ಶಿವಾಚಾರ್ಯರು ವಂದಿಸಿದರು.