ಫ್ಲೆಕ್ಸ್-ಬ್ಯಾನರ್‌ಗಳಿಗಿಲ್ಲ ಅನುಮತಿ

ಅನ್ಸಾರ್ ಇನೋಳಿ ಉಳ್ಳಾಲ

ಪ್ಲಾಸ್ಟಿಕ್ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ಪಾಲನೆ ಶೂನ್ಯ. ಜನರಲ್ಲಿ ಮೂಡದ ಅರಿವು, ಸರ್ಕಾರ, ಸ್ಥಳೀಯಾಡಳಿತಕ್ಕಿಲ್ಲದ ಇಚ್ಛಾಶಕ್ತಿ. ಸರ್ಕಾರಿ ಮಟ್ಟದ ಕಚೇರಿ, ಪಂಚಾಯಿತಿಗಳಲ್ಲಿ ಹಾಕಲಾಗುವ ಎಚ್ಚರಿಕೆ ಫಲಕದಡಿಯಲ್ಲೇ ನಿಷೇಧಿತ ವಸ್ತು ಕಾಣಲು ಸಿಗುವುದು ಹೊಸ ವಿಚಾರವಲ್ಲ. ಇಂತಹ ಗೊಂದಲಗಳ ನಡುವೆಯೂ ಬೋಳಿಯಾರ್ ಗ್ರಾಮ ಪಂಚಾಯಿತಿ ತಂದಿರುವ ಕಟ್ಟುನಿಟ್ಟಿನ ಕ್ರಮದ ಬಿಸಿ ಧಾರ್ಮಿಕ ಕಾರ್ಯಕ್ರಮಗಳಿಗೂ ತಟ್ಟುವಂತಾಗಿದೆ.

ಎಲ್ಲ ಪಂಚಾಯಿತಿಗಳಂತೆ ಬೋಳಿಯಾರ್ ಪಂಚಾಯಿತಿ ಸಾಮಾನ್ಯ ಸಭೆಯಲ್ಲೂ, ಗ್ರಾಮಸಭೆಯಲ್ಲೂ ಸಾರ್ವಜನಿಕ ಸ್ಥಳದಲ್ಲಿ ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್ ಅಳವಡಿಕೆಗೆ ನಿಷೇಧ ಹೇರಿ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ಸಾರ್ವಜನಿಕರಿಗೆ ತಿಳಿಸಲು ಜನನಿಬಿಡ ಪ್ರದೇಶದಲ್ಲಿ ಫಲಕವನ್ನೂ ಅಳವಡಿಸಲಾಗಿದೆ. ಇಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೂ ಪ್ಲಾಸ್ಟಿಕ್ ಮಿಶ್ರಿತ ಬ್ಯಾನರ್, ಫ್ಲೆಕ್ಸ್, ಬಂಟಿಂಗ್ಸ್ ಅಳವಡಿಸಲು ಅವಕಾಶ ಇಲ್ಲ. ಈ ವಿಚಾರದಲ್ಲಿ ಯಾವುದೇ ರೀತಿಯ ಮುಲಾಜು ಅಧಿಕಾರಿ, ಪಂಚಾಯಿತಿ ಪ್ರತಿನಿಧಿಗಳಲ್ಲಿಲ್ಲ. ಕುರ್ನಾಡು ದೇವಸ್ಥಾನ ಸಮಿತಿಯಲ್ಲಿ ಪಂಚಾಯಿತಿ ಸದಸ್ಯರಿದ್ದರೂ ಅಷ್ಟಬಂಧ ಸಹಸ್ರ ಕುಂಭಾಭಿಷೇಕಕ್ಕೆ ಸಂಬಂಧಪಟ್ಟ ಪ್ಲಾಸ್ಟಿಕ್ ಮಿಶ್ರಿತ ಬ್ಯಾನರ್, ಫ್ಲೆಕ್ಸ್, ಬಂಟಿಂಗ್ಸ್ ಅಳವಡಿಕೆಗೆ ಅವಕಾಶ ನೀಡದೆ ಅಧಿಕಾರಿ ವರ್ಗ ಇಚ್ಛಾಶಕ್ತಿ ಪ್ರದರ್ಶಿಸಿದ್ದು, ಸದಸ್ಯರೂ ಒತ್ತಡ ಹೇರದೆ ನಿಯಮಕ್ಕೆ ಬದ್ಧ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸ್ವಚ್ಛ ಭಾರತ ನಿರ್ಮಾಣದ ಕನಸು ಕಂಡಿದ್ದು ಬೆಂಬಲ ನೀಡಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ, ನಮ್ಮ ಪಂಚಾಯಿತಿ ಹೆಚ್ಚು ಜಾಗರೂಕತೆ ಹೊಂದಿದ್ದು, ಧರ್ಮ, ರಾಜಕೀಯ ರಹಿತವಾಗಿ ನಿಯಮ ಜಾರಿಗೆ ತಂದಿರುವುದು ಉತ್ತಮ ಬೆಳವಣಿಗೆ.
|ಪ್ರಶಾಂತ್ ಗಟ್ಟಿ ಬೋಳಿಯಾರ್, ಹಾಪ್‌ಕಾಮ್ಸ್ ನಿರ್ದೇಶಕ

ಗ್ರಾಮ ವ್ಯಾಪ್ತಿಯಲ್ಲಿ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಅಳವಡಿಸಿದ್ದಕ್ಕೆ ನಿಷೇಧ ಹೇರಿ ಹಿಂದಿನ ಪಿಡಿಒ ಇದ್ದ ಸಂದರ್ಭ ಕೈಗೊಂಡಿದ್ದ ನಿರ್ಣಯ ಪಾಲನೆಗೆ ತರಲಾಗಿದೆ. ಮುಂದೆ ಗ್ರಾಮದಲ್ಲಿ ನಿಷೇಧಿತ ಪ್ಲಾಸ್ಟಿಕ್‌ಗೂ ಸಂಪೂರ್ಣ ನಿಷೇಧ ಹೇರುವ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು.
|ಕೃಷ್ಣ ಕುಮಾರ್, ಗ್ರಾಪಂ ಅಭಿವೃದ್ಧಿ ಅಧಿಕಾರಿ

ಕಾನೂನು ಜಾರಿಯಾಗಬೇಕಾದರೆ ಮೊದಲು ಸ್ಥಳೀಯಾಡಳಿತ ಜಾಗೃತವಾಗಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬೋಳಿಯಾರ್ ಪಂಚಾಯಿತಿ ಜಾಗೃತವಾಗಿದೆ ಎಂದು ಭಾವಿಸಬಹುದು. ಈ ಮೂಲಕ ಗ್ರಾಮಸ್ಥರೂ ಜಾಗೃತರಾಗಲಿದ್ದು, ಇತರ ಪಂಚಾಯಿತಿಗೆ ಮಾದರಿಯಾಗಿದೆ.
|ಕೃಷ್ಣ ಮೂಲ್ಯ, ನಿರ್ದೇಶಕ, ಜನಶಿಕ್ಷಣ ಟ್ರಸ್ಟ್