ಕಾರು ಅಪಘಾತವಾದರೂ ಸ್ವಲ್ಪವೂ ಗಾಯಗೊಳ್ಳದ ದೊರೆ ಫಿಲಿಪ್​!

ಲಂಡನ್​: ರಾಣಿ ಎಲಿಜಬೆತ್​ ಅವರ ಪತಿ, 97 ವರ್ಷದ ಎಡಿನ್​ಬರ್ಗ್​ ದೊರೆ ಫಿಲಿಫ್​ ಅವರು ಗುರುವಾರ ನಡೆದ ಕಾರು ಅಪಘಾತದಲ್ಲಿ ಸಣ್ಣ ಗಾಯವೂ ಆಗದಂತೆ ಭಾರಿ ಅಪಾಯದಿಂದ ಪಾರಾಗಿದ್ದಾರೆ.

ಪೂರ್ವ ಇಂಗ್ಲೆಂಡ್​ನ ಸ್ಯಾಂಡ್ರಿಂಘಂ ಬಳಿ ಲ್ಯಾಂಡ್​ ರೋವರ್​ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಫಿಲಿಪ್​ ಕಾರು ಹಾಗೂ ಮತ್ತೊಂದು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ವೇಳೆ ಕಾರು ಪಲ್ಟಿ ಹೊಡೆದಿದ್ದರೂ ರಾಜ ಫಿಲಿಫ್​ಗೆ ಯಾವುದೇ ಗಾಯಗಳಾಗಿಲ್ಲದಿರುವುದು ಅಚ್ಚರಿ ಮೂಡಿಸಿದೆ.

ಅಪಘಾತದ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ ಬಕಿಂಗ್​ಹ್ಯಾಮ್​ ಅರಮನೆ, ‘ರಾಜ ಫಿಲಿಪ್​ಗೆ ಯಾವುದೇ ಗಾಯಗಳಾಗಿಲ್ಲ’ ಎಂದು ಸ್ಪಷ್ಟನೆ ನೀಡಿದೆ.

ಫಿಲಿಪ್​​ ಕಾರಿಗೆ ಡಿಕ್ಕಿ ಹೊಡೆದ ಮತ್ತೊಂದು ಕಾರಿನಲ್ಲಿ ಇಬ್ಬರು ಪ್ರಯಾಣಿಕರಿದ್ದರು. ಈ ಅಪಘಾತದಲ್ಲಿ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ಸಮಯದ ನಂತರ ಅವರನ್ನೂ ಡಿಸ್ಚಾರ್ಜ್​ ಮಾಡಲಾಯಿತು ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವರ್ಷವಷ್ಟೇ ಫಿಲಿಪ್​ ಸೊಂಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. (ಏಜೆನ್ಸೀಸ್)