ಮುಗಿಯದ ಬ್ರೆಕ್ಸಿಟ್​ ವಿವಾದ: ಬ್ರಿಟನ್​ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ ತೆರೇಸಾ ಮೇ

ಇಂಗ್ಲೆಂಡ್​​: ಬ್ರೆಕ್ಸಿಟ್​ ಕುರಿತ ತಮ್ಮ ನಿಲುವಿನಿಂದಾಗಿ ಸ್ನೇಹಿತರು ಮತ್ತು ಪಕ್ಷದ ಸಹೋದ್ಯೋಗಿಗಳಿಂದಲೇ ಸಾಕಷ್ಟು ಟೀಕೆಗೆ ಒಳಗಾಗಿದ್ದ ಬ್ರಟಿನ್​ ಪ್ರಧಾನಿ ತೆರೇಸಾ ಮೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಕನ್ಸರ್ವೇಟಿವ್​ ಪಕ್ಷದ ನಾಯಕಿ ಹುದ್ದೆಯನ್ನು ತ್ಯಜಿಸುತ್ತಿರುವುದಾಗಿ ಶುಕ್ರವಾರ ಘೋಷಿಸಿದ ಮೇ, ಪ್ರಧಾನಿ ಹುದ್ದೆಗೂ ಜೂನ್​ 7ರಂದು ರಾಜೀನಾಮೆ ನೀಡುವುದಾಗಿ ಘೋಷಿಸಿದರು.

ತೆರೇಸಾ ಮೇ ರೂಪಿಸಿದ್ದ ಬ್ರೆಕ್ಸಿಟ್​ ಒಪ್ಪಂದಕ್ಕೆ ಅನುಮೋದನೆ ನೀಡಲು ಬ್ರಿಟನ್​ ಸಂಸತ್ತು ಮೂರು ಬಾರಿ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಭಾರಿ ಟೀಕೆಗೆ ಒಳಗಾಗಿದ್ದರು. ಆದ್ದರಿಂದ, ಪ್ರಧಾನಿ ಹುದ್ದೆ ತ್ಯಜಿಸಲು ನಿರ್ಧರಿಸಿದ್ದರು. ಆದರೆ, ಜೂನ್​ 7ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಬ್ರಿಟನ್​ ಪ್ರವಾಸಕ್ಕೆ ಆಗಮಿಸುತ್ತಿರುವ ದಿನದಂದೇ ಮೇ ನಿರ್ಗಮಿಸುತ್ತಿರುವುದು ಗಮನಾರ್ಹ ಸಂಗತಿ.

ಮಾರ್ಗರೆಟ್​ ಥ್ಯಾಚರ್​ ನಂತರ ಬ್ರಿಟನ್​ನ ಎರಡನೇ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಯೊಂದಿಗೆ ತೆರೇಸಾ ಮೇ 10, ಡೌನಿಂಗ್​ ಸ್ಟ್ರೀಟ್​ನಲ್ಲಿರುವ ಪ್ರಧಾನಿ ನಿವಾಸವನ್ನು ಹೊಕ್ಕಿದ್ದರು. ನಾನು ಪ್ರಧಾನಿ ಆದಾಗಿನಿಂದಲೂ ಬ್ರೆಕ್ಸಿಟ್​ ಒಪ್ಪಂದದ ಕುರಿತು ಪಕ್ಷದ ಸಂಸತ್​ ಸದಸ್ಯರ ಮನವೊಲಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ತನ್ಮೂಲಕ ಪ್ರತಿಷ್ಠಿತರ ಪರವಾಗಿ ಮಾತ್ರವಲ್ಲ ಬ್ರಿಟನ್​ನ ಕಟ್ಟಕಡೆಯ ವ್ಯಕ್ತಿಯ ಹಿತಾಸಕ್ತಿ ಕಾಯಲು ಸರ್ಕಾರ ಬದ್ಧವಾಗಿದೆ. ಹಾಗೂ ಬ್ರೆಕ್ಸಿಟ್​ ವಿಚಾರದಲ್ಲಿ ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಲು ಬದ್ಧ ಎಂಬುದನ್ನು ಸಾಬೀತು ಪಡಿಸಲು ಸಾಕಷ್ಟು ಪ್ರಯತ್ನಿಸಿದೆ. ಆದರೆ, ಈ ಪ್ರಯತ್ನದಲ್ಲಿ ನಾನು ವಿಫಲವಾದೆ. ಆದ್ದರಿಂದ, ರಾಜೀನಾಮೆ ನೀಡುತ್ತಿದ್ದೇನೆ ಎಂದು ಮೇ ಭಾವುಕರಾಗಿ ಹೇಳಿದರು.

ಜೂನ್​ 3ಕ್ಕೆ ಅತ್ಯಂತ ಬಲಿಷ್ಠವಾದ ಒಪ್ಪಂದ ಇರಿಸುವುದಾಗಿ ಹೇಳಿದ್ದರು
ಕೆಲದಿನಗಳ ಹಿಂದೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ತೆರೇಸಾ ಮೇ ಅತ್ಯಂತ ಬಲಿಷ್ಠವಾದ ಬ್ರೆಕ್ಸಿಟ್​ ಒಪ್ಪಂದ ರೂಪಿಸಿ, ಪಕ್ಷದ ಸಂಸತ್​ ಸದಸ್ಯರ ಎದುರು ಮಂಡಿಸಿ, ಅವರ ಅನುಮೋದನೆ ಪಡೆಯುವುದಾಗಿ ಹೇಳಿದ್ದರು. ಆದರೆ, ಅವರ ಈ ಒಪ್ಪಂದದ ಕುರಿತು ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ಪತ್ರಿಕೆಗಳು ಕೂಡ ಅವರ ನಡೆಯನ್ನು ಟೀಕಿಸಿ ವರದಿ ಮಾಡಿದ್ದವು. ಇದೆಲ್ಲದರಿಂದ ಬೇಸತ್ತ ಅವರು, ರಾಜೀನಾಮೆ ನೀಡಲು ನಿರ್ಧರಿಸಿದರು ಎನ್ನಲಾಗಿದೆ.

ಬೋರಿಸ್​ ಜಾನ್ಸನ್​ ಪ್ರಧಾನಿ ಆಗುವ ಸಾಧ್ಯತೆ
ಬ್ರಿಟನ್​ನ ವಿದೇಶಾಂಗ ಖಾತೆ ಮಾಜಿ ಕಾರ್ಯದರ್ಶಿ ಬೋರಿಸ್​ ಜಾನ್ಸನ್​ ಮುಂದಿನ ಪ್ರಧಾನಿಯಾಗಿ ನೇಮಕವಾಗುವ ಸಾಧ್ಯತೆ ಇರುವುದಾಗಿ ಹೇಳಲಾಗುತ್ತಿದೆ. ಇವರಲ್ಲದೆ ಹಾಲಿ ಗೃಹ ಕಾರ್ಯದರ್ಶಿ ಸಾಜೀದ್​ ಜಾವೇದ್​ ಹಾಗೂ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್​ ಕೂಟ ಪ್ರಧಾನಿ ರೇಸ್​ನಲ್ಲಿದ್ದಾರೆ.

2016ರಲ್ಲಿ ಪ್ರಧಾನಿಯಾಗಿದ್ದ ಮೇ
ಬ್ರೆಕ್ಸಿಟ್​ ಕುರಿತು ಸಂಗ್ರಹಿಸಲಾಗಿದ್ದ ಜನಾಭಿಪ್ರಾಯದ ಬಳಿಕ ಆಗಿನ ಪ್ರಧಾನಿ ಡೇವಿಡ್​ ಕೆಮರೂನ್​ 2016ರಲ್ಲಿ ರಾಜೀನಾಮೆ ನೀಡಿದ್ದರು. ಇವರಿಂದ ತೆರವಾದ ಸ್ಥಾನವನ್ನು ತೆರೇಸಾ ಮೇ ತುಂಬಿದ್ದರು.

ಏನಿದು ಬ್ರೆಕ್ಸಿಟ್?
28 ದೇಶಗಳು ಸೇರಿ ರಚಿಸಿಕೊಂಡಿರುವ ರಾಜಕೀಯ ಮತ್ತು ಆರ್ಥಿಕ ಸಂಘಟನೆಯೇ ಐರೋಪ್ಯ ಒಕ್ಕೂಟ. ಇದಕ್ಕೆ ಬ್ರಿಟನ್ 1973ರಲ್ಲಿ ಸೇರ್ಪಡೆಯಾಯಿತು. 1980 ಮತ್ತು 90ರ ದಶಕದಿಂದಲೇ ಐರೋಪ್ಯ ಒಕ್ಕೂಟದಿಂದ ಹೊರಬರಬೇಕು ಎಂಬ ಕೂಗು ಬ್ರಿಟನ್​ನಲ್ಲಿ ಕೇಳಿಬಂದಿತ್ತು. ಬ್ರೆಕ್ಸಿಟ್ ಹೆಸರಿನ ಆಂದೋಲನಗಳು ನಡೆದವು. 2015ರ ಚುನಾವಣೆಯಲ್ಲಿ ಈ ಆಗ್ರಹವನ್ನು ಡೇವಿಡ್ ಕ್ಯಾಮರೂನ್ ಚುನಾವಣಾ ಪ್ರಣಾಳಿಕೆಯಲ್ಲೂ ಸೇರಿಸಿದರು.

ಆಶ್ವಾಸನೆಯಂತೆ 2016ರ ನವೆಂಬರ್ 23ರಂದು ಜನಮತ ಗಣನೆ ನಡೆದು ಶೇ. 52 ಮಂದಿ ಬ್ರೆಕ್ಸಿಟ್ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದರಿಂದ ಬ್ರೆಕ್ಸಿಟ್​ಗೆ ವಿರುದ್ಧ ನಿಲುವು ಹೊಂದಿದ್ದ ಪ್ರಧಾನಿ ಡೇವಿಡ್ ಕ್ಯಾಮರಾನ್​ಗೆ ಮುಖಭಂಗವಾಗಿ ಅವರು ರಾಜೀನಾಮೆ ನೀಡುವಂತಾಯಿತು. ನಂತರ ಥೆರೇಸಾ ಮೇ ಪ್ರಧಾನಿಯಾದರು.

Leave a Reply

Your email address will not be published. Required fields are marked *