ಮಲ್ಯ ಗಡಿಪಾರಿಗೆ ಸಮ್ಮತಿ

ಲಂಡನ್: ಭಾರತೀಯ ಬ್ಯಾಂಕ್​ಗಳಿಗೆ -ಠಿ; 9 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ಸಾಲ ಮರುಪಾವತಿಸದೆ ಲಂಡನ್​ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಮರಳಿ ಕರೆತರುವ ನರೇಂದ್ರ ಮೋದಿ ಸರ್ಕಾರದ ಅವಿರತ ಪ್ರಯತ್ನಕ್ಕೆ ಭಾರಿ ಯಶಸ್ಸು ದೊರಕಿದೆ. ಮಲ್ಯ ಗಡಿಪಾರಿನ ಆದೇಶಕ್ಕೆ ಬ್ರಿಟನ್ ಗೃಹ ಸಚಿವಾಲಯದ ಕಾರ್ಯದರ್ಶಿ ಸಾಜಿದ್ ಜಾವಿದ್ ಭಾನುವಾರ ಸಹಿ ಮಾಡಿದ್ದಾರೆ. ಇದರಿಂದ ‘ಆರ್ಥಿಕ ಅಪರಾಧಿ’ ಮಲ್ಯ ಭಾರತಕ್ಕೆ ಹಸ್ತಾಂತರವಾಗುವ ಕಾಲ ಸನ್ನಿಹಿತವಾಗುತ್ತಿದೆ.

ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸಲು ಅಡ್ಡಿಯಿಲ್ಲವೆಂದು ಕಳೆದ ಡಿ.10ರಂದು ವೆಸ್ಟ್​ಮಿನ್​ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ್ದ ತೀರ್ಪಿನ ಅನ್ವಯ ಈ ಪ್ರಕ್ರಿಯೆ ನಡೆದಿದೆ. ಈ ತೀರ್ಪು ಪ್ರಕಟವಾದ 2 ತಿಂಗಳ ಒಳಗೆ (ಅಂದರೆ ಫೆ. 10ರೊಳಗೆ) ಗೃಹ ಕಾರ್ಯದರ್ಶಿ ಈ ಕಡತವನ್ನು ವಿಲೇವಾರಿ ಮಾಡಬೇಕಿತ್ತು. 62 ವರ್ಷದ ಮಲ್ಯ, 2016ರ ಮಾರ್ಚ್​ನಿಂದ ಲಂಡನ್​ನಲ್ಲಿ ನೆಲೆಸಿದ್ದಾರೆ.

ಹಿಂದಿನ ತೀರ್ಪು ಏನಿತ್ತು?: ಲಂಡನ್​ನ ವೆಸ್ಟ್​ಮಿನ್​ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಕಳೆದ ಡಿ.10ರಂದು ಸಮ್ಮತಿಸಿತ್ತು. ‘ಭಾರತದಲ್ಲಿ ಮಲ್ಯ ವಿರುದ್ಧ ಸುಳ್ಳು ಪ್ರಕರಣಗಳು ದಾಖಲಾಗಿವೆ ಎನಿಸುವುದಿಲ್ಲ. ಭಾರತದ ತನಿಖಾ ಸಂಸ್ಥೆಗಳು ಹಾಗೂ ನ್ಯಾಯಾಂಗ ಮಲ್ಯ ವಿರುದ್ಧ ಪೂರ್ವಗ್ರಹ ಪೀಡಿತವಾಗಿವೆ, ಭ್ರಷ್ಟಾಚಾರದಲ್ಲಿ ನಿರತವಾಗಿವೆ ಎನ್ನುವ ಆರೋಪದಲ್ಲೂ ಹುರುಳಿಲ್ಲ. ಭಾರತದ ನ್ಯಾಯಾಂಗ ವ್ಯವಸ್ಥೆ ಮೇಲೆ ಅತೀವ ಗೌರವವಿದೆ. ಹೀಗಾಗಿ ಸಿಬಿಐ ಹಾಗೂ ಇ.ಡಿ. ಪ್ರಕರಣಗಳ ವಿಚಾರಣೆಯನ್ನು ಮಲ್ಯ ಎದುರಿಸಲಿ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು.

ಕಾಯುತ್ತಿದೆ ಆರ್ಥರ್ ರೋಡ್ ಜೈಲು
ಮುಂಬೈ ದಾಳಿ ಉಗ್ರ ಅಜ್ಮಲ್​ಕಸಬ್​ನನ್ನು ಇರಿಸಿದ್ದ ಆರ್ಥರ್ ರೋಡ್ ಜೈಲಿನಲ್ಲೇ ಮಲ್ಯ ಅವರನ್ನು ಇರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದೊಮ್ಮೆ ಹಸ್ತಾಂತರ ಪ್ರಕ್ರಿಯೆ ತ್ವರಿತವಾಗಿ ನಡೆದರೆ ಎನ್ನುವ ಕಾರಣದಿಂದ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಎರಡು ಅಂತಸ್ತಿನ ಅತ್ಯಧಿಕ ಭದ್ರತೆಯ ಜೈಲು ಇದಾಗಿದೆ.

ಮಲ್ಯ ಮುಂದಿರುವ ಅವಕಾಶ

# ಬ್ರಿಟನ್ ಗೃಹ ಸಚಿವಾಲಯದ ಆದೇಶ ಪ್ರಶ್ನಿಸಿ 14 ದಿನದೊಳಗೆ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬಹುದು.

# ಹೈಕೋರ್ಟ್​ನಲ್ಲಿ ಇಂಥ ಅರ್ಜಿಗಳು ಸಾಮಾನ್ಯವಾಗಿ ಆರು ತಿಂಗಳಲ್ಲಿ ಇತ್ಯರ್ಥವಾಗುತ್ತವೆ.

# ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಲ್ಯ ಅಥವಾ ಸರ್ಕಾರ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬಹುದು. ಆದರೆ, ಸುಪ್ರೀಂಕೋರ್ಟ್ ನೇರವಾಗಿ ಮೇಲ್ಮನವಿ ಸ್ವೀಕರಿಸುವುದಿಲ್ಲ. ಮೇಲ್ಮನವಿ ಸಲ್ಲಿಸಲು ಪೂರಕವಾದ ಅಂಶಗಳನ್ನು ಒಳಗೊಂಡ ಅರ್ಜಿಯನ್ನು ಮೊದಲು ಸಲ್ಲಿಸಬೇಕು. ಇದಕ್ಕೆ ಸುಪ್ರೀಂಕೋರ್ಟ್ ಸಮ್ಮತಿಸಿದರಷ್ಟೇ ಮೇಲ್ಮನವಿ ಅರ್ಜಿ ವಿಚಾರಣೆಗೆ ಬರುತ್ತದೆ. 

ಆಸ್ತಿ ಮುಟ್ಟುಗೋಲಾಗುವುದೇ?
ಮಲ್ಯ ಆರ್ಥಿಕ ಅಪರಾಧ ಎಸಗಿ ತಲೆ ತಪ್ಪಿಸಿಕೊಂಡ ಅಪರಾಧಿ ಎಂದು ಮುಂಬೈನ ಪಿಎಂಎಲ್​ಎ ವಿಶೇಷ ಕೋರ್ಟ್ 2019ರ ಜನವರಿ 6ರಂದು ಘೋಷಿಸಿದೆ. ಮಲ್ಯರ ಯಾವ್ಯಾವ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬುದರ ಬಗ್ಗೆ ಫೆ. 5ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿತ್ತು.

-ಠಿ; 100 ಕೋಟಿಗಿಂತಲೂ ಹೆಚ್ಚು ಆರ್ಥಿಕ ವಂಚನೆ ಮಾಡಿ ವಿದೇಶಕ್ಕೆ ಪಲಾಯನಗೈಯುವ ಆರೋಪಿಗಳನ್ನು ತಲೆತಪ್ಪಿಸಿಕೊಂಡ ಆರ್ಥಿಕ ಅಪರಾಧಿಗಳೆಂದು ಘೋಷಿಸಿ ಅವರ ಆಸ್ತಿಯನ್ನು ಜಪ್ತಿ ಮಾಡಿಕೊಂಡು ಅದನ್ನು ವಿಲೇವಾರಿ ಮಾಡಲು ರೂಪಿತವಾದ ನೂತನ ಕಾಯ್ದೆ ಅನ್ವಯ ಮಲ್ಯ ವಿರುದ್ಧ ಈ ಆದೇಶ ನೀಡಲಾಗಿದೆ.

ನ್ಯಾಯಾಧೀಶೆ ಹೇಳಿದ್ದೇನು?

# ಮಲ್ಯ ವಿರುದ್ಧದ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಕುರಿತ ಭಾರತದ ತನಿಖಾ ಸಂಸ್ಥೆಗಳ ಆರೋಪದ ಬಗ್ಗೆ ಮೇಲ್ನೋಟಕ್ಕೆ ಪ್ರಬಲ ಸಾಕ್ಷಿಗಳಿವೆ ಎಂದು ನ್ಯಾಯಾಧೀಶೆ ಎಮ್ಮಾ ಅರ್ಬಥ್​ನಾಟ್ ಹೇಳಿದ್ದರು.

# ಮುಂಬೈ ಜೈಲಿನಲ್ಲಿ ಮಲ್ಯ ಜೀವಕ್ಕೆ ಪ್ರಾಣಾಪಾಯವಿದೆ ಎನ್ನುವುದು ಸತ್ಯಕ್ಕೆ ದೂರವಾಗಿದೆ. ಜೈಲಿನ ಸವಲತ್ತುಗಳ ಬಗ್ಗೆ ಕೋರ್ಟ್​ಗೆ ಸಂತೃಪ್ತಿಯಿದೆ.

# ಮಲ್ಯ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆಗಳಿವೆ. ಹೀಗಾಗಿ ಮಲ್ಯ ಹಸ್ತಾಂತರದಿಂದ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದಿದ್ದ ನ್ಯಾಯಾಧೀಶೆ.