ಪಿಎನ್​ಬಿ ಬಹುಕೋಟಿ ರೂ. ಹಗರಣದ ರೂವಾರಿ ನೀರವ್​ ಮೋದಿಗೆ ಜಾಮೀನು ನಿರಾಕರಿಸಿದ ಲಂಡನ್​ ಕೋರ್ಟ್​

ಲಂಡನ್​/ನವದೆಹಲಿ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ಕೋಟ್ಯಂತರ ರೂಪಾಯಿಯನ್ನು ವಂಚಿಸಿ ಹಲವು ತಿಂಗಳುಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡು ಬುಧವಾರ ಲಂಡನ್​ ಪೊಲೀಸರ ಬಲೆಗೆ ಬಿದ್ದಿರುವ ವಜ್ರದ ಉದ್ಯಮಿ ನೀರವ್​ ಮೋದಿಗೆ ಲಂಡನ್​ನ ವೆಸ್ಟ್​ಮಿನಿಸ್ಟರ್​ ಮ್ಯಾಜಿಸ್ಟ್ರೇಟ್​ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಮಾರ್ಚ್​ 29ರಂದು ನಡೆಯಲಿರುವ ಮುಂದಿನ ಹಂತದ ವಿಚಾರಣೆವರೆಗೂ ಪೊಲೀಸ್​ ಬಂಧನದಲ್ಲಿರಲು ನ್ಯಾಯಾಲಯ ತಿಳಿಸಿದೆ. ಇದೇ ವೇಳೆ ಪ್ರಕರಣದಲ್ಲಿನ ತನ್ನ ಪಾತ್ರದ ಬಗ್ಗೆ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಲು ನೀರವ್​ ಮೋದಿ ಸಮಯ ಕೋರಿದ್ದಾರೆ ಎಂದು ಹೇಳಲಾಗಿದೆ.

ಲಂಡನ್​ನ​ ವೆಸ್ಟ್​ ಮಿನಿಸ್ಟರ್​ ಮ್ಯಾಜಿಸ್ಟ್ರೇಟ್​ ನ್ಯಾಯಾಲಯ ಹೊರಡಿಸಿದ್ದ ವಾರಂಟ್​ ಹಿನ್ನೆಲೆಯಲ್ಲಿ ನೀರವ್​ ಮೋದಿಯನ್ನು ಬುಧವಾರ ಬಂಧಿಸಲಾಗಿದ್ದು, ಬಳಿಕ ಆತನನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಆರೋಪಿಯನ್ನು ಹಸ್ತಾಂತರಿಸುವಂತೆ ಜಾರಿ ನಿರ್ದೇಶನಾಲಯ ಮಾಡಿದ್ದ ಮನವಿ ಮೇರೆಗೆ ನೀರವ್​ ಮೋದಿಯನ್ನು ಬಂಧಿಸಲಾಗಿದೆ.

ನೀರವ್​ ಮೋದಿ ಹಾಗೂ ಆತನ ಕುಟುಂಬದ ವಿರುದ್ಧ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ 13,500 ಕೋಟಿ ರೂ. ವಂಚಿಸಿರುವ ಆರೋಪವಿದ್ದು, ಕಳೆದ ವರ್ಷ ನಡೆದ ಈ ಹಗರಣ ದೊಡ್ಡ ಸುದ್ದಿಯಾಗುತ್ತಿದ್ದಂತೆ ನೀರವ್​ ಮೋದಿ ದೇಶ ಬಿಟ್ಟು ತಲೆಮರೆಸಿಕೊಂಡಿದ್ದರು. ಕಳೆದ ವರ್ಷ ಜೂನ್​ನಲ್ಲಿ ನೀರವ್​ ಮೋದಿ ವಿರುದ್ಧ ಇಂಟರ್​ಪೋಲ್​ ರೆಡ್​ ಕಾರ್ನರ್​ ನೋಟಿಸ್​ ಹೊರಡಿಸಿತ್ತು.

ಆರೋಪಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯವೂ ಈಗಾಗಲೇ ಯುನೈಟೆಡ್​ ಕಿಂಗ್​​​ಡಮ್​ ಸರ್ಕಾರಕ್ಕೆ ಮನವಿಯನ್ನು ಕಳುಹಿಸಿದೆ. ಪ್ರಕರಣದಲ್ಲಿ ನೀರವ್​ ಮೋದಿ ಅಂಕಲ್​ ಮೆಹಲ್​ ಛೋಕ್ಸಿ ಕೂಡ ಪಾಲುದಾರರಾಗಿದ್ದು, ಆತನು ಕೂಡ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. (ಏಜೆನ್ಸೀಸ್​)