ಬಡತನ ಅರಿತ ಪ್ರಧಾನಿಯಿಂದ ಭಾರತಕ್ಕೆ ವಿಶ್ವಮನ್ನಣೆ

ಬಂಟ್ವಾಳ: ಬಡತನದ ಅನುಭವವಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನರ ಸಂಕಷ್ಟ ಅರಿತಿದ್ದಾರೆ. ಹೀಗಾಗಿ ಅಡುಗೆ ಅನಿಲ ವಿತರಣೆ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಿ ಜಗತ್ತಿನಲ್ಲಿ ಭಾರತ ತಲೆ ಎತ್ತಿ ನಿಲ್ಲುವಂತೆ ಮಾಡಿದ್ದಾರೆ ಎಂದು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ, ಸಂಸದ ಪ್ರಲ್ಹಾದ ಜೋಷಿ ಹೇಳಿದರು.

ಬಂಟ್ವಾಳದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಮೈದಾನದಲ್ಲಿ ಶುಕ್ರವಾರ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಎರಡನೇ ಹಂತದ ಉಚಿತ ಅಡುಗೆ ಅನಿಲ ವಿತರಣೆ ಮತ್ತು ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿ, ಭಾರತ ಜಗತ್ತಿನಲ್ಲಿ ಪ್ರಥಮ ಸ್ಥಾನ ಪಡೆಯುವ ಕಾಲ ಹತ್ತಿರವಾಗುತ್ತಿದ್ದು, ಅದಕ್ಕಾಗಿ ಮತ್ತೊಮ್ಮೆ ಜನಾಶಿರ್ವಾದ ಬೇಕಿದೆ ಎಂದರು.

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಕಾರ್ಯಕ್ರಮ ಉದ್ಘಾಟಿಸಿ, ಎಲ್‌ಪಿಜಿ ಸಂಪರ್ಕಗಳನ್ನು ನೀಡುವ ಮೂಲಕ ದೇಶಾದ್ಯಂತ ಬಡಜನರ ಸಂಕಷ್ಟ ನಿವಾರಿಸುವ ಕಾರ್ಯ ಪ್ರಧಾನಿ ನಡೆಸುತ್ತಿದ್ದಾರೆ. ಎಲ್ಲ ಅಡುಗೆಮನೆಗಳನ್ನು ಹೊಗೆಮುಕ್ತ ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಕಾರ್ಯಕ್ರಮ ಇದಾಗಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಪ್ರಸ್ತಾವಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ಸಿ.ಟಿ.ರವಿ, ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಸಂಜೀವ ಮಠಂದೂರು, ಎಸ್.ಅಂಗಾರ, ಐಒಸಿಎಲ್ ಚೀಫ್ ಜನರಲ್ ಮ್ಯಾನೇಜರ್ ಕೆ.ಶೈಲೇಂದ್ರ, ಬಿಡಿಎಂ ಬಿಪಿಸಿಎಲ್‌ನ ಪ್ರೇಮನಾಥ್ ಟಿ, ಬಿಪಿಸಿಎಲ್ ಕರ್ನಾಟಕ ಮುಖ್ಯಸ್ಥ ಪ್ರದೀಪ್ ನಾಯರ್ ಸಹಿತ ವಿವಿಧ ತೈಲ ಕಂಪನಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಬಿಪಿಸಿಎಲ್ ಪ್ರಾದೇಶಿಕ ಎಲ್‌ಪಿಜಿ ಮ್ಯಾನೇಜರ್ ತಂಗವೇಲು ಸ್ವಾಗತಿಸಿದರು. ಎಚ್‌ಎಎಲ್ ವಲಯ ಮುಖ್ಯಸ್ಥ ಅಂಬಾ ಭವಾನಿ ವಂದಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಮತ್ತು ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮಹಿಳಾ ಸಮಾವೇಶ: ಫಲಾನುಭವಿಗಳ ಸಮಾವೇಶಕ್ಕೂ ಮುನ್ನ ಮಹಿಳೆಯರ ಸಮಾವೇಶ ನಡೆಯಿತು. ಆಶಾ ಕಾರ್ಯಕರ್ತೆ ರೇಖಾ ಮಾತನಾಡಿದರು. ಸುಲೋಚನಾ ಜಿ.ಕೆ. ಭಟ್ ಮತ್ತು ಜೈನಾಬಿ ಉಪಸ್ಥಿತರಿದ್ದರು. ಪೆಟ್ರೋಲಿಯಂ ಇಲಾಖೆಯ ಗಣೇಶ್‌ಪ್ರಸಾದ್ ಮತ್ತು ಪ್ರಸಾದ್ ಎಲ್‌ಪಿಜಿ ಮತ್ತು ಆಯುಷ್ಮಾನ್ ಭಾರತ್ ಯೋಜನೆ ಸಹಿತ ಕೇಂದ್ರದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ಪಟ್ಲ ಸತೀಶ ಶೆಟ್ಟಿ ನೇತೃತ್ವದಲ್ಲಿ ಯಕ್ಷಗಾನ ವೈಭವ ಪ್ರಸ್ತುತಗೊಂಡಿತು.

ವಾದ್ರಾ ಲೂಟಿಕೋರ: ಜಗತ್ತಿನ ಅತ್ಯಂತ ದೊಡ್ಡ ಲೂಟಿಕೋರ ರಾಬರ್ಟ್ ವಾದ್ರಾ ಎಂದು ಪ್ಲಲ್ಹಾದ ಜೋಷಿ ಗಂಭೀರ ಆರೋಪ ಮಾಡಿದರು. ಪ್ರಿಯಾಂಕಾ ಗಾಂಧಿ ಬಗ್ಗೆ ಹೇಳುವುದೇ ಬೇಡ. ವಿದೇಶಗಳಲ್ಲಿ ದೇಶದ್ರೋಹಿಗಳ ಜತೆ ಸೇರಿ ಇವಿಎಂ ಕುರಿತು ಅಪಪ್ರಚಾರ ಮಾಡುವ ಕೃತ್ಯ ಕಾಂಗ್ರೆಸ್ ನಡೆಸುತ್ತಿದೆ. ಪ್ರತಿ ಕಾಂಗ್ರೆಸ್ ಸರ್ಕಾರಗಳಲ್ಲೂ ಹಗರಣಗಳು ನಡೆದಿದ್ದು, ನಕಲಿ ಗಾಂಧಿ ಕಂಪನಿಯಿಂದಾಗಿ ದೇಶ ಪ್ರಗತಿಯಾಗಲಿಲ್ಲ ಎಂದು ಆರೋಪ ಮಾಡಿದರು. ಬರೆದುಕೊಟ್ಟದ್ದನ್ನು ಓದುವ ರಾಹುಲ್ ಗಾಂಧಿ ಮೇಕ್ ಇನ್ ಇಂಡಿಯಾ ಬಗ್ಗೆ ಪ್ರಶ್ನಿಸುತ್ತಾರೆ. ಈಗಾಗಲೇ 125 ಮೊಬೈಲ್ ಕಂಪನಿಗಳು ದೇಶಕ್ಕೆ ಬಂದಿವೆ, ಇವು ಮೇಕ್ ಇನ್ ಇಂಡಿಯಾದ ಕೊಡುಗೆ ಎಂದರು.

ತಿಂಗಳಲ್ಲಿ ಹೊಗೆಮುಕ್ತ ಜಿಲ್ಲೆ
10 ದಿನಗಳಲ್ಲಿ ಬೆಳ್ತಂಗಡಿ ತಾಲೂಕು ಹೊಗೆಮುಕ್ತವಾಗಲಿದ್ದು, ತಿಂಗಳ ಒಳಗೆ ದ.ಕ. ಹೊಗೆಮುಕ್ತ ಜಿಲ್ಲೆಯಾಗಲಿದೆ. ಜಿಲ್ಲೆಗೆ ಕೇಂದ್ರದಿಂದ 15 ಸಾವಿರ ಕೋಟಿ ರೂ. ಅನುದಾನ ಒಗಿಸಲಾಗಿದ್ದು, 5 ವರ್ಷಗಳಲ್ಲಿ ದ.ಕ.ದ ಹಳ್ಳಿ ಹಳ್ಳಿಗೆ ಹಲವು ಯೋಜನೆ ರೂಪಿಸಲಾಗಿದೆ. ಭಾರತ್ ಮಾಲಾ ಯೋಜನೆಯಡಿ ಚತುಷ್ಪಥ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಗಲಿವೆ.
| ನಳಿನ್ ಕುಮಾರ್ ಕಟೀಲ್, ಸಂಸದ