ಕೋಟೆ ಚಾನಲ್ ಅಭಿವೃದ್ಧಿಗೆ ಹಾಕಿದ ಹಣ ವ್ಯರ್ಥ

ಚಿಕ್ಕಮಗಳೂರು: ನಗರದ ಕೋಟೆ ಚಾನಲ್ ಅಭಿವೃದ್ಧಿಗೆ ಹಲವು ವರ್ಷಗಳಿಂದ ಲಕ್ಷಾಂತರ ರೂ. ಸುರಿಯುತ್ತಿದ್ದರೂ ಕೊಚ್ಚೆಯಿಂದ ಮುಕ್ತಗೊಳಿಸಲು ಸಾಧ್ಯವಾಗುತ್ತಿಲ್ಲ. ಸದ್ಯ ಸಣ್ಣ ನೀರಾವರಿ ಇಲಾಖೆ, ಅಭಿವೃದ್ಧಿ ನೆಪದಲ್ಲಿ ಮತ್ತೆ 90 ಲಕ್ಷ ರೂ. ಸುರಿಯುತ್ತಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ.

ನಗರ ದಕ್ಷಿಣ ಭಾಗದ ಬಡಾವಣೆಗಳಲ್ಲಿ ಹಾದು ಹೋಗಿರುವ ಚಾನಲ್ ಉಪ್ಪಳ್ಳಿಯಿಂದ ಕೋಟೆ ಕೆರೆ ತನಕ 4 ಕಿ.ಮೀ.ಉದ್ದವಿದೆ. ಅಕ್ಕಪಕ್ಕದ ಬಡಾವಣೆ ಒಳಚರಂಡಿ ನೀರು ಇಲ್ಲಿ ಬಿಟ್ಟಿರುವುದರಿಂದ ಇಲ್ಲಿನ ನಿವಾಸಿಗಳು ನಿತ್ಯ ಮೂಗು ಮುಚ್ಚಿಕೊಂಡೇ ವಾಸಮಾಡಬೇಕು.

ಚಾನಲ್​ಗೆ ಸೇರುತ್ತಿರುವ ಒಳ ಚರಂಡಿ ನೀರು ನಿಲುಗಡೆ ಮಾಡದೆ ಚಾನಲ್ ಅಭಿವೃದ್ಧಿಗೆ ಲಕ್ಷಾಂತರ ರೂ. ಸುರಿಯಲು ಮುಂದಾಗಿರುವುದರ ಹಿಂದಿನ ಮರ್ಮವೇನು? ಚಾನಲ್​ಗೆ ಕಾಂಕ್ರಿಟ್ ವಾಲ್ವ್ ನಿರ್ಮಾಣ ಮಾಡಿದಾಕ್ಷಣ ಕೊಚ್ಚೆ ನೀರು ಪುನರ್ ಹರಿಯುವುದಿಲ್ಲವೆ? ಇಷ್ಟೊಂದು ದುಡ್ಡು ಸುರಿದರೂ ಗಬ್ಬು ವಾಸನೆಯಿಂದ ಮುಕ್ತಿಯಾಗದಿದ್ದರೆ ಯಾತಕ್ಕಾಗಿ ಈ ಕಾಮಗಾರಿ ಮಾಡಬೇಕು? ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕರಿದಂದ ವ್ಯಕ್ತವಾಗ ತೊಡಗಿದೆ.

ರಾಮೇಶ್ವರ ಕೆರೆಯಿಂದ ಈ ಹಿಂದೆ ನೀರಾವರಿಗೆ ಉಪಯೋಗಿಸುತ್ತಿದ್ದ ಕಿರು ಚಾನಲ್ ನಗರ ಬಡಾವಣೆಗಳು ಬೆಳೆದಂತೆ ಕೊಚ್ಚೆ ನೀರು ಹರಿಯಲು ಆರಂಭಿಸಿತು. ಇಲ್ಲಿನ ಯುಜಿಡಿ ಸರಿಪಡಿಸುವಂತೆ ದಶಕದಿಂದ ಕೋಟೆ, ಹೊಸಮನೆ, ರಾಮೇಶ್ವರನಗರ, ನೆಹರು ನಗರ, ಜಯನಗರ ಬಡಾವಣೆ, ಅಗ್ರಹಾರ ಸರ್ಕಲ್ ನಿವಾಸಿಗಳು ಗೋಗೊರೆಯುತ್ತಿದ್ದಾರೆ. ಆದರೆ, ಯುಜಿಡಿ ಕೊಚ್ಚೆ ಬರುವುದನ್ನು ಈ ತಡೆಯಲು ಈತನಕ ಸರಿಯಾದ ಪ್ರಯತ್ನ ನಗರಸಭೆಯಿಂದ ಆಗಿಲ್ಲ.

ಸಣ್ಣ ನೀರಾವರಿ ಇಲಾಖೆಗೆ 4702ರ ಹೆಡ್​ನಲ್ಲಿ 2017-18ನೇ ಸಾಲಿಗೆ 90 ಲಕ್ಷ ರೂ. ಅನುದಾನ ಬಂದಿತ್ತು. ಈ ಅನುದಾನ ವ್ಯವಸ್ಥಿತವಾಗಿ ಸಾರ್ವಜನಿಕ ಉಪಯೋಗಕ್ಕೆ ಬರುವಂತೆ ಇಲಾಖೆ ಯೋಜನೆ ರೂಪಿಸಬೇಕಿತ್ತು. ಅನುದಾನ ಬಂದು ವರ್ಷದ ನಂತರ ಈಗ ಚಾನಲ್ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ನಗರಸಭೆ ಜತೆ ಸಮನ್ವಯತೆ ಮಾಡಿಕೊಂಡಿದ್ದರೆ ಮೊದಲು ಈ ಚಾನೆಲ್​ಗೆ ಬರುವ ಯುಜಿಡಿ ಕೊಚ್ಚೆ ನೀರು ನಿಲ್ಲಿಸಿ ನಂತರ ಅನುದಾನ ಖರ್ಚು ಮಾಡಬಹುದಿತ್ತು.

ಕೊಚ್ಚೆ ನೀರು ಸಂಪರ್ಕ ನಿಲ್ಲಿಸಿ: ನಗರದಲ್ಲಿ ನಗರೋತ್ಥಾನ ಯೋಜನೆಯಡಿ ಯುಜಿಡಿ ಕೆಲಸ ಪ್ರಾರಂಭವಾಗಿ ಎರಡು ವರ್ಷವಾಗಿದ್ದು, ಕಾಮಗಾರಿ ಅವ್ಯವಸ್ಥೆಯ ಆಗರವಾಗಿದೆ. ಹೀಗಾಗಿ ಈ ಚಾನಲ್​ಗೆ ಕೊಚ್ಚೆ ನೀರು ಬರುವುದು ಇನ್ನೂ ನಿಂತಿಲ್ಲ. ಕೊಚ್ಚೆ ನೀರು ಬರುವುದನ್ನು ಮೊದಲು ಪೂರ್ಣ ನಿಲ್ಲಿಸಿದ ನಂತರವೇ ಚಾನಲ್ ಗೈಡ್ ಮತ್ತು ಸೈಡ್ ವಾಲ್ವ್ ಕಾಮಗಾರಿ ಮಾಡಬೇಕಾಗಿತ್ತು. ಆಗ ಮಾತ್ರ ಸರ್ಕಾರದ ಅನುದಾನದ ಪ್ರತಿಫಲ ಸಾರ್ವಜನಿಕರಿಗೆ ದೊರೆಯುತ್ತಿತ್ತು.

ಅನುದಾನ ಬಳಕೆಯಲ್ಲೂ ಸ್ಪಷ್ಟತೆ ಇಲ್ಲ: ಸದ್ಯ ಚಾನಲ್​ನ 4 ಕಿ.ಮೀ.ಉದ್ದದಲ್ಲಿ 550 ಮೀ. ಮಾತ್ರ ಸೈಡ್ ಮತ್ತು ಗೈಡ್ ವಾಲ್ವ್ ಮಾಡಲಾಗುತ್ತಿದೆ. ಅಗ್ರಹಾರ ಸರ್ಕಲ್ ಬಳಿ ಸಣ್ಣ ಸೇತುವೆ (ಕಲ್ವರ್ಟ್) ನಿರ್ವಿುಸಲಾಗುತ್ತಿದೆ. ಇದರ ಜತೆ ಹಿಂದಿನ ವರ್ಷ ಕೋಟೆ ಕೆರೆಯಲ್ಲಿ ಬೆಳೆದ ಜೊಂಡು ತೆಗೆದಿದ್ದು ಹಾಗೂ ಚಾನಲ್ ಹೂಳು ತೆಗೆದ ಕೆಲಸಕ್ಕೆ ಉಳಿದ ಅನುದಾನ ಬಳಕೆ ಮಾಡಿಕೊಳ್ಳಲಾಗಿದೆ. ಕೆರೆಯಲ್ಲಿದ್ದ ಜೊಂಡು ತೆಗೆಯಲು ಹಾಗೂ ಚಾನಲ್ ಹೂಳು ತೆಗೆಯಲು ಎಷ್ಟು ಅನುದಾನ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಿಲ್ಲ.