ಮುಕ್ತ ವಿವಿಗೆ ಮತ್ತೊಂದು ಸಿಹಿ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಇನ್ನೂ 14 ಕೋರ್ಸ್​ಗಳಿಗೆ ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ಮಾನ್ಯತೆ ನೀಡಿದೆ. ಇದರಿಂದಾಗಿ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಯುಜಿಸಿ ಇತ್ತೀಚೆಗೆ ವಿವಿಗೆ ಮಾನ್ಯತೆ ನೀಡಿ 17 ಕೋರ್ಸ್ ಗಳ ಪ್ರಾರಂಭಕ್ಕೆ ಹಸಿರು ನಿಶಾನೆ ತೋರಿತ್ತು. ಉಳಿದ 14 ಕೋರ್ಸ್ ಗಳ ಪ್ರಾರಂಭಕ್ಕೂ ಅವಕಾಶ ನೀಡಬೇಕು ಹಾಗೂ ಆ ಕೋರ್ಸ್​ಗಳ ಪ್ರಾರಂಭಕ್ಕೆ ವಿವಿಯಲ್ಲಿ ಇರುವ ಸೌಲಭ್ಯಗಳ ಕುರಿತು ಯುಜಿಸಿಗೆ ವಿವಿ ಮನವರಿಕೆ ಮಾಡಿಕೊಟ್ಟಿತ್ತು. ಆ ನಂತರ ಯುಜಿಸಿ ಬಿಎಡ್ ಹಾಗೂ 13 ಸ್ನಾತಕೋತ್ತರ ಕೋರ್ಸ್​ಗಳಿಗೆ ಮಾನ್ಯತೆ ನೀಡಿದೆ. ಸೆ.27 ರಂದು ನಡೆದ ಯುಜಿಸಿಯ ಸಭೆಯಲ್ಲಿ ಮುಕ್ತ ವಿವಿಯ ಉಳಿದ 14 ಕೋರ್ಸ್​ಗಳಿಗೆ ಮಾನ್ಯತೆ ನೀಡುವ ನಿರ್ಧಾರ ಕೈಗೊಂಡು ಅ.3 ರಂದು ಯುಜಿಸಿ ತನ್ನ ವೆಬ್​ಸೈಟ್​ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ.

ಮಾನ್ಯತೆ ಪಡೆದ ಕೋರ್ಸ್

ಬ್ಯಾಚುಲರ್ ಆಫ್ ಎಜುಕೇಶನ್ (ಬಿಇಡಿ), ಸ್ನಾತಕೋತ್ತರ ವಿಭಾಗದಲ್ಲಿ ಬಿಜಿನೆಸ್ ಅಡ್ಮಿನಿಸ್ಟ್ರೇಷನ್, ಸಂಸ್ಕೃತ, ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಕೆಮಿಸ್ಟ್ರಿ, ಕ್ಲಿನಿಕಲ್ ನ್ಯೂಟ್ರಿಷಿಯನ್ ಆಂಡ್ ಡಯಾಬಿಟಿಕ್ಸ್, ಕಂಪ್ಯೂಟರ್ ಸೈನ್ಸ್, ಜಿಯಾಗ್ರಫಿ, ಮಾಹಿತಿ ವಿಜ್ಞಾನ, ಗಣಿತ, ಮೈಕ್ರೋಬಯಾಲಜಿ, ಭೌತಶಾಸ್ತ್ರ, ಮನಶಾಸ್ತ್ರ ಕೋರ್ಸ್​ಗಳು.