ರಾಜ್ಯ ಮುಕ್ತ ವಿವಿಗೆ ಮರುಜೀವ ನೀಡಿದ ಭಗೀರಥ

|ಶೇಖರ್ ಕಿರುಗುಂದ

ಮೈಸೂರು: ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದಿಂದ ಕೋರ್ಸ್​ಗಳ ಮಾನ್ಯತೆ ರದ್ದುಗೊಂಡಿದ್ದಾಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ನೇಮಕಗೊಂಡ ಪ್ರೊ.ಡಿ. ಶಿವಲಿಂಗಯ್ಯ, ಸತತ ಪರಿಶ್ರಮದೊಂದಿಗೆ ಮತ್ತೆ ಮಾನ್ಯತೆ ದೊರಕಿಸಿಕೊಟ್ಟು ವಿಶ್ವವಿದ್ಯಾಲಯಕ್ಕೆ ಮರುಜೀವ ನೀಡಿದ ಭಗೀರಥ ಎನಿಸಿದ್ದಾರೆ.

ಆ ಮೂಲಕ ವಿಶ್ವವಿದ್ಯಾಲಯವಷ್ಟೇ ಅಲ್ಲದೆ, ಲಕ್ಷಾಂತರ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿಗೆ ನಿರಾಳತೆ ಒದಗಿಸಿದ್ದಾರೆ.

1996ರ ಜೂ.1ರಂದು ಮೈಸೂರಿನಲ್ಲಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ತನ್ನದೇ ಆದ ಹೆಸರು ಮಾಡಿತ್ತು. ಆದರೆ, ಕೆಲವು ನಿಯಮಗಳ ಉಲ್ಲಂಘನೆ ಆರೋಪದ ಮೇರೆಗೆ 2013-14ನೇ ಶೈಕ್ಷಣಿಕ ವರ್ಷದಿಂದ ಪೂರ್ವಾನ್ವಯವಾಗುವಂತೆ ಮುಕ್ತ ವಿವಿಯ ಕೋರ್ಸ್ ಗಳ ಮಾನ್ಯತೆ ರದ್ದು ಮಾಡಿ 2015ರ ಜೂ.16 ರಂದು ಯುಜಿಸಿ ಆದೇಶ ಹೊರಡಿಸಿತು. ಅಷ್ಟರಲ್ಲಿ 2013-14, 2014-15ನೇ ಸಾಲಿನ ಪ್ರವೇಶಾತಿ ಮುಗಿದು, 95,853 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದರು. ಕೋರ್ಸ್​ಗಳ ಮಾನ್ಯತೆ ರದ್ದಾದ್ದರಿಂದ ಈ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರದಲ್ಲಿ ಮುಳುಗಿತ್ತು.

2016ರ ಮಾ.11ರಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿಯಾಗಿ ಶಿವಲಿಂಗಯ್ಯ ಅಧಿಕಾರ ವಹಿಸಿಕೊಂಡರು. ತ್ರಿಶಂಕು ಸ್ಥಿತಿಯಲ್ಲಿದ್ದ ವಿವಿ, ವಿದ್ಯಾರ್ಥಿಗಳ ಭವಿಷ್ಯ ಭದ್ರಪಡಿಸುವುದು ನೂತನ ಕುಲಪತಿಗೆ ಆದ್ಯತೆ ಹಾಗೂ ಸವಾಲಾಗಿತ್ತು. ಅದಕ್ಕಾಗಿ, ಸಂಬಂಧಪಟ್ಟ ಎಲ್ಲರ ಸಹಕಾರ ಪಡೆದು ವಿವಿಗೆ ಮಾನ್ಯತೆ ದೊರಕಿಸಿಕೊಡಲು ಮುಂದಾದರು.

ಶಿವಲಿಂಗಯ್ಯ ಅವರ ಹೋರಾಟದಿಂದಾಗಿ 2018- 19ನೇ ಶೈಕ್ಷಣಿಕ ಸಾಲಿನಿಂದ 2022-23ರವರೆಗೆ ವಿವಿಗೆ ಮಾನ್ಯತೆ ಮಂಜೂರು ಮಾಡಿ ಮತ್ತು 17 ತಾಂತ್ರಿಕೇತರ ಕೋರ್ಸ್​ಗಳನ್ನು ಪ್ರಾರಂಭಿಸಲು 2018ರ ಆ.14ರಂದು ಯುಜಿಸಿ ಅನುಮತಿ ನೀಡಿತು. ಅಷ್ಟಕ್ಕೇ ತೃಪ್ತರಾಗದ ಕುಲಪತಿ, ಮತ್ತೆ 15 ಕೋರ್ಸ್ ಗಳಿಗೆ ಮಾನ್ಯತೆ ನೀಡಬೇಕೆಂದು ಪಟ್ಟುಹಿಡಿದು 14 ಕೋರ್ಸ್​ಗಳಿಗೆ ಮಾನ್ಯತೆ ತರುವಲ್ಲಿ ಯಶಸ್ವಿಯಾದರು. ಕೆಲ ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗಳು ನಡೆಯದಿದ್ದರೂ, ಮಾನ್ಯತೆ ದೊರೆತ ಮೊದಲ ವರ್ಷದಲ್ಲಿ 12 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ಉತ್ತಮ ಬೆಳವಣಿಗೆ. ಅಲ್ಲದೆ, 2013-14 ಹಾಗೂ 2014-15ನೇ ಶೈಕ್ಷಣಿಕ ವರ್ಷಗಳಲ್ಲಿ ಪ್ರವೇಶ ಪಡೆದು ಸ್ನಾತಕ/ಸ್ನಾತಕೋತ್ತರ ಕೋರ್ಸ್​ಗಳಲ್ಲಿ ತೇರ್ಗಡೆಯಾದವರನ್ನು ಮುಂದಿನ ವ್ಯಾಸಂಗ, ನೇಮಕಾತಿ ಹಾಗೂ ಮುಂಬಡ್ತಿಗೂ ಪರಿಗಣಿಸುವಂತೆ ಆದೇಶ ತರಲಾಗಿದೆ.

ಜತೆಗೆ, 2013ನೇ ಸಾಲಿನ ಪೂರ್ವದಲ್ಲಿ ಪ್ರವೇಶ ಪಡೆದು, ಉತ್ತೀರ್ಣರಾಗಿ ಅಂಕಪಟ್ಟಿ ಹಾಗೂ ಪದವಿ ಪ್ರಮಾಣಪತ್ರ ಪಡೆಯದಿರುವ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸುವುದು ಸೇರಿ ಇನ್ನಿತರ ಆದೇಶಗಳನ್ನು ತಂದಿರುವುದು ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಕುಲಪತಿಯಾಗಿ ನೇಮಕಗೊಂಡಾಗ ವಿಶ್ವವಿದ್ಯಾಲಯದ ಪರಿಸ್ಥಿತಿ ಗಂಭೀರವಾಗಿತ್ತು. ಅದನ್ನು ಅರ್ಥ ಮಾಡಿಕೊಳ್ಳಲು ಒಂದೆರಡು ತಿಂಗಳು ಬೇಕಾದವು. ನಾನು ಅಧಿಕಾರ ವಹಿಸಿಕೊಳ್ಳುವುದಕ್ಕಿಂತ ಮುಂಚೆ ವಿದ್ಯಾರ್ಥಿಗಳು- ಪಾಲಕರು ನ್ಯಾಯಾಲಯ ಮತ್ತಿತರ ಕಡೆ ವಿವಿ ವಿರುದ್ಧ ಹಲವು ದೂರು ದಾಖಲಿಸಿದ್ದರು. ಅವುಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ. ನನ್ನ ಅಧಿಕಾರಾವಧಿಯಲ್ಲಿ ವಿವಿ ಮತ್ತೆ ಮೊದಲಿನಂತೆ ಆಗಬೇಕೆಂಬ ಆಸೆ ಇದೆ.

| ಪ್ರೊ.ಡಿ. ಶಿವಲಿಂಗಯ್ಯ ಕುಲಪತಿ

ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಮತ್ತೆ ಮಾನ್ಯತೆ ಸಿಕ್ಕಿರುವುದು ಸಂತಸದ ಸಂಗತಿ. ಇದಕ್ಕಾಗಿ ಹಗಳಿರುಳು ಶ್ರಮಿಸಿದ ಕುಲಪತಿಯನ್ನು ಅಭಿನಂದಿಸುತ್ತೇನೆ. ವಿವಿ ಬೆಳವಣಿಗೆಗೆ ನನ್ನ ಸಹಕಾರ ಸದಾ ಇರುತ್ತದೆ.

| ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ

ವಿವಿಯ ಹೊಸ ಯೋಜನೆ, ಕಾರ್ಯಕ್ರಮಗಳು

ಈಗಿರುವ 33 ಕೋರ್ಸ್​ಗಳ ಜತೆಗೆ, ಕೌಶಲಾಭಿವೃದ್ಧಿ ತರಬೇತಿ ಕೋರ್ಸ್​ಗಳನ್ನು ಪ್ರಾರಂಭಿಸಲಾಗಿದ್ದು, ಇದರ ಅವಧಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 2 ವರ್ಷ ಹಾಗೂ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ 3 ವರ್ಷವಾಗಿರುತ್ತದೆ. ಬಿ.ಎ., ಬಿ.ಕಾಂ, ಬಿ.ಲಿಬ್.ಐ.ಎಸ್ಸಿ, ಎಂ.ಎ., ಎಂ.ಲಿಬ್.ಐ.ಎಸ್ಸಿ., ಎಂ.ಎಸ್ಸಿ. ಕೋರ್ಸ್​ಗಳ ಜತೆಗೆ, ಈ ಕೌಶಲಾಭಿವೃದ್ಧಿ ತರಬೇತಿ ನೀಡಲು ಕ್ರಮ ವಹಿಸಲಾಗಿದೆ. ವಿಶ್ವವಿದ್ಯಾಲಯದ ಎಲ್ಲ ಸೇವೆಗಳನ್ನು ‘ಸಕಾಲ’ ಮುಖಾಂತರ ವಿದ್ಯಾರ್ಥಿಗಳಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಆಡಳಿತ ಸಂಬಂಧಿ ಪ್ರಕ್ರಿಯೆಗಳನ್ನು ಆನ್​ಲೈನ್ ಮೂಲಕ ಮಾಡುವುದು, ಗುಣಾತ್ಮಕ ಶೈಕ್ಷಣಿಕ ಪರಿಸರ ನಿರ್ವಿುಸುವುದು, ಮುಂದಿನ ಶೈಕ್ಷಣಿಕ ವರ್ಷ ಸಿಬಿಎಸ್​ಸಿ ಪಠ್ಯಕ್ರಮ ಅಳವಡಿಸುವುದು, ಯುಜಿಸಿ ನಿಯಮಾವಳಿ-2016ರ ಪ್ರಕಾರ ಪಿಎಚ್​ಡಿ ಕೋರ್ಸ್ ಪ್ರಾರಂಭಿಸುವುದು ಸೇರಿ ಇತರ ಯೋಜನೆಗಳ ಬಗ್ಗೆ ಕ್ರಮ ವಹಿಸಲಾಗಿದೆ. ಅಲ್ಲದೆ, ಪ್ರವೇಶಾತಿ ಶುಲ್ಕ, ಮಹಿಳಾ ಅಭ್ಯರ್ಥಿಗಳಿಗೆ ವಿಶೇಷ ರಿಯಾಯಿತಿ, ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ, ಪ್ರವೇಶ-ಪರೀಕ್ಷಾ ಸುಧಾರಣೆಗಳು, ಆನ್​ಲೈನ್ ಪ್ರವೇಶ-ಶುಲ್ಕ ಪಾವತಿ ಇನ್ನಿತರ ಯೋಜನೆಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.