ಬೆಂಗಳೂರು: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್-ಯುಜಿ 2025) ಫಲಿತಾಂಶ ಪ್ರಕಟಿಸಿದ್ದು, ರಾಜ್ಯದ ಏಳು ವಿದ್ಯಾರ್ಥಿಗಳು ಟಾಪ್ ನೂರರಲ್ಲಿ ಸ್ಥಾನ ಪಡೆದಿದ್ದಾರೆ. ಈ ಪೈಕಿ ಅಖಿಲ ಭಾರತ ಮಟ್ಟದಲ್ಲಿ 17ನೇ ರ‌್ಯಾಂಕ್ ಪಡೆದಿರುವ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ನಿಖಿಲ್ ಸೊನ್ನದ್ ಶೇ.99.99 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಅಖಿಲ ಭಾರತ ಮಟ್ಟದಲ್ಲಿ ರಾಜಸ್ಥಾನದ ಮಹೇಶ್‌ಕುಮಾರ್ ಮೊದಲ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶದ ಉತ್ಕರ್ಷ್ ಅವಧಿಯಾ ಎರಡನೇ ಹಾಗೂ ಮಹಾರಾಷ್ಟ್ರದ ಕೃಷಾಂಗ್ ಜೋಶಿ ಮೂರನೇ ರ‌್ಯಾಂಕ್ ಪಡೆದಿದ್ದಾರೆ.
ರಾಜ್ಯದ ಟಾಪರ್‌ಗಳು
ರಾಜ್ಯಮಟ್ಟದಲ್ಲಿ ಎಕ್ಸ್‌ಪರ್ಟ್ ಕಾಲೇಜಿನ ನಿಖಿಲ್ ಸೊನ್ನದ್- 17ನೇ ರ‌್ಯಾಂಕ್ ಹಾಗೂ ಕೆ.ಜಿ. ನಿಧಿ (84) ನೇ ಸ್ಥಾನ ಪಡೆದಿದ್ದಾರೆ. ಅಲೆನ್ ಇನ್‌ಸ್ಟಿಟ್ಯೂಟ್‌ನ ರುಚಿರ್ ಗುಪ್ತಾ (22) ಹಾಗೂ ಪ್ರಾಂಶು ಜಹಗೀರ್‌ದಾರ್ (42), ಚೈತನ್ಯ ಸಂಸ್ಥೆಯ ತೇಜಸ್ ಶೈಲೇಶ್ ೋಟ್ಗಲರ್ 38) ಸೇರಿ ಹರಿಣಿ ಶ್ರೀರಾಮ್ (72), ಎಸ್. ದಿಗಂತ್ (80) ಟಾಪ್ 100ರಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ನೀಟ್‌ಗಾಗಿ ಒಟ್ಟು 22,76,069 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 22,09,318 ಜನರು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 12,36,531 ಜನರು ವೈದ್ಯಕೀಯ ಕೋರ್ಸ್‌ಗಳಿಗೆ ಅರ್ಹತೆ ಪಡೆದಿದ್ದಾರೆ. ರಾಜ್ಯದಲ್ಲಿ ಒಟ್ಟು 83,582 ನೀಟ್ ಅರ್ಹತೆ ಗಳಿಸಿದ್ದಾರೆ ಎಂದು ಎನ್‌ಟಿಎ ತಿಳಿಸಿದೆ.
ಕರ್ನಾಟಕಕ್ಕೆ 4ನೇ ಸ್ಥಾನ
ರಾಜ್ಯದಲ್ಲಿ ಒಟ್ಟು 1,47,782 ವಿದ್ಯಾರ್ಥಿಗಳು ನೀಟ್‌ಗಾಗಿ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 1,42,369 ವಿದ್ಯಾರ್ಥಿಗಳು ಹಾಜರಾಗಿದ್ದರು. ಇವರಲ್ಲಿ 83,582 ಜನರು ವೈದ್ಯಕೀಯ ಸೀಟ್‌ಗೆ ಅರ್ಹತೆ ಪಡೆದಿದ್ದಾರೆ. ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಸಂಖ್ಯೆಯಲ್ಲಿ ಕಡಿಮೆಯಾಗಿದೆ. 2024ರಲ್ಲಿ 1,55,148 ವಿದ್ಯಾರ್ಥಿಗಳು ನೋಂದಾಯಿಸಿಕೊಂಡು 1,50,170 ಜನರು ಹಾಜರಾಗಿದ್ದರು. ಇವರಲ್ಲಿ ಒಟ್ಟಾರೆ 88,877 ಜನರು ಅರ್ಹತೆ ಪಡೆದಿದ್ದರು.
ರಾಜ್ಯವಾರು ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಕ್ರಮವಾಗಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಉತ್ತರಪ್ರದೇಶದಲ್ಲಿ 1.70 ಲಕ್ಷ, ಮಹಾರಾಷ್ಟ್ರದಲ್ಲಿ 1.25 ಲಕ್ಷ, ರಾಜಸ್ಥಾನದಲ್ಲಿ 1.19 ಲಕ್ಷ ಅರ್ಹತೆ ಪಡೆದಿದ್ದಾರೆ.
ಬಾಲಕಿಯರೇ ಮೇಲುಗೈ
ಪರೀಕ್ಷೆ ಬರೆದ ಬಾಲಕಿಯರ ಸಂಖ್ಯೆ ಹೆಚ್ಚಾಗಿದ್ದು, ಅರ್ಹತೆ ಪಡೆದವರಲ್ಲಿಯೂ ವಿದ್ಯಾರ್ಥಿನಿಯರೇ ಮುಂದಿದ್ದಾರೆ. ಪರೀಕ್ಷೆಗೆ ಹಾಜರಾದ 12,71,896 ವಿದ್ಯಾರ್ಥಿನಿಯರಲ್ಲಿ 7,22,462 ಂಂದಿ ವೈದ್ಯಕೀಯ ಕೋರ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ಅಂತೆಯೇ, ಹಾಜರಾಗಿದ್ದ 9,37,411 ಬಾಲಕರ ಪೈಕಿ 5,14,063 ಜನರು ಅರ್ಹತೆ ಪಡೆದಿದ್ದಾರೆ.
ದೇಶದ 552 ನಗರಗಳ ಜತೆಗೆ ಅಬುದಾಬಿ, ದುಬೈ, ಬ್ಯಾಂಕಾಕ್, ಕೊಲಂಬೋ, ದೋಹಾ. ಕಠ್ಮಂಡು, ಕೌಲಾಲಂಪುರ, ಕುವೈತ್, ಲಾಗೋಸ್, ಮನಾಮಾ, ಮಸ್ಕತ್, ರಿಯಾದ್, ಶಾರ್ಜಾಗಳಲ್ಲೂ ಪರೀಕ್ಷೆ ಆಯೋಜಿಸಲಾಗಿತ್ತು. ಇದಕ್ಕಾಗಿ ಒಟ್ಟು 5468 ಕೇಂದ್ರಗಳನ್ನು ಗುರುತಿಸಿ ಮೇ 4ರಂದು ಪರೀಕ್ಷೆ ನಡೆಸಲಾಗಿತ್ತು.
ಪ್ರಾದೇಶಿಕ ಭಾಷೆಯಲ್ಲಿ ಬರೆಯುವವರ ಸಂಖ್ಯೆ ಇಳಿಮುಖ
ನೀಟ್ ಯುಜಿ- 2025 ಪರೀಕ್ಷೆಯನ್ನು ಕನ್ನಡ ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗಿತ್ತು.
ಹೀಗಿದ್ದರೂ ಇದರತ್ತ ವಿದ್ಯಾರ್ಥಿಗಳ ಒಲವು ಕಡಿಮೆಯಾಗಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯುವುದಾಗಿ ನೋಂದಣಿ ಮಾಡಿಕೊಂಡವರು ಕೇವಲ 460. ಕಳೆದ ವರ್ಷ ಕನ್ನಡದಲ್ಲಿ 1065 ಜನರು ನೋಂದಾಯಿಸಿಕೊಂಡಿದ್ದರು. ಹಿಂದಿಯಲ್ಲಿ 3.2 ಲಕ್ಷ ಜನರು ಬರೆದದ್ದು ಅತಿ ಹೆಚ್ಚು. ನಂತರದಲ್ಲಿ ಗುಜರಾತಿ 53,025, ಬೆಂಗಾಲಿಯಲ್ಲಿ 38 ಸಾವಿರ ಹಾಗೂ ತಮಿಳಿನಲ್ಲಿ 26 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿಕೊಂಡರೆ ಕಡಿಮೆಯಾಗಿದೆ.
ಕ್ಯಾನ್ಸರ್ ಕುರಿತ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಉದ್ದೇಶ ಹೊಂದಿದ್ದೇನೆ. ಸ್ನಾತಕೊತ್ತರ ಪದವಿ ಬಳಿಕ ವೈದ್ಯಕೀಯ ಕ್ಷೇತ್ರದಲ್ಲಿನ ಉದ್ಯಮ ಹೊಂದುವ ಆಲೋಚನೆ ಇದೆ. ಸದ್ಯಕ್ಕೆ ದೆಹಲಿಯ ಏಮ್ಸ್‌ನಲ್ಲಿ ವ್ಯಾಸಂಗ ಮಾಡುವುದರ ಕಡೆಗಷ್ಟೇ ನನ್ನ ಗಮನ. 100ರ ಆಸುಪಾಸಿನಲ್ಲಿ ರ‌್ಯಾಂಕ್ ಬರುವ ನಿರೀಕ್ಷೆ ಇತ್ತು. ಆದರೆ 17ನೇ ರ‌್ಯಾಂಕ್ ಬಂದಿರುವುದು ಖುಷಿಯಾಗಿದೆ.
– ನಿಖಿಲ್ ಸೊನ್ನಾದ್, ರಾಜ್ಯದ ಟಾಪರ್
ಪ್ರತಿ ದಿನ ಕಾಲೇಜಿನಲ್ಲಿಯೇ ಬೆಳಗ್ಗೆ 7.30ರಿಂದ ಸಂಜೆ 5.30ರವರೆಗೆ ವ್ಯಾಸಂಗ ಮಾಡುತ್ತಿದ್ದೆ. ಮತ್ತೆ ಮನೆಯಲ್ಲಿಯೂ ಹೆಚ್ಚಿನ ವ್ಯಾಸಂಗ ಮಾಡುತ್ತಿದ್ದೆ. 38ನೇ ರ‌್ಯಾಂಕ್ ಪಡೆಯುವ ನಿರೀಕ್ಷೆ ಇರಲಿಲ್ಲ. ತುಂಬಾ ಖುಷಿಯಾಗುತ್ತಿದೆ. ಬಿಡುವಿನ ಸಮಯದಲ್ಲಿ ಚೆಸ್ ಮತ್ತು ಬ್ಯಾಡ್ಮಿಂಟನ್ ಆಡುತ್ತಿದ್ದೆ. ದೆಹಲಿಯ ಏಮ್ಸ್‌ನಲ್ಲಿ ಓದುವುದು ನನ್ನ ಉದ್ದೇಶವಾಗಿದೆ.
– ತೇಜಸ್ ಶೈಲೇಶ್, 38ನೇ ರ‌್ಯಾಂಕ್
ಪ್ರಯತ್ನ, ಪರಿಶ್ರಮಕ್ಕೆ ಸೋಲಿಲ್ಲ. ಪಿಯು ಪ್ರಥಮ ವರ್ಷದಿಂದಲೇ ನೀಟ್‌ಗೆ ಪೂರ್ವಭಾವಿ ತಯಾರಿ ನಡೆಸಿದ್ದೆ. ಅದಕ್ಕೆ ತಕ್ಕಂತೆ ಕಾಲೇಜಿನಲ್ಲಿ ನೀಡುತ್ತಿದ್ದ ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಕರ ಪ್ರೋತ್ಸಾಹ ಸ್ಪೋರ್ಟಿವ್ ಆಗಿತ್ತು. ತಂದೆ-ತಾಯಿ ನೀಡಿರುವ ಸಹಕಾರಕ್ಕೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.
– ಕೆ.ಜಿ. ನಿಧಿ, 84ನೇ ರ‌್ಯಾಂಕ್