ಉದ್ಯಾವರ ಮಸೀದಿಗೆ ದೈವಗಳ ಭೇಟಿ

>

ವಿಜಯವಾಣಿ ಸುದ್ದಿಜಾಲ ಮಂಜೇಶ್ವರ
ಇತಿಹಾಸ ಪ್ರಸಿದ್ಧ ಉದ್ಯಾವರ ಮಾಡ ಅರಸು ಮಂಜಿಷ್ಣಾರ್ ಕ್ಷೇತ್ರದ ಜಾತ್ರೆ ಪೂರ್ವಭಾವಿಯಾಗಿ ಉದ್ಯಾವರ ಸಾವಿರ ಜಮಾತ್ ಮಸೀದಿಗೆ ದೈವಗಳ ಭೇಟಿ ಕಾರ್ಯಕ್ರಮ ಶುಕ್ರವಾರ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಯೊಂದಿಗೆ ನೆರವೇರಿತು.
ಹಿಂದು -ಮುಸ್ಲಿಂ ಭಾವೈಕ್ಯದ ಸಂಕೇತದೊಂದಿಗೆ 800 ವರ್ಷಗಳಿಂದ ವಾಡಿಕೆಯಲ್ಲಿರುವ ಸಂಪ್ರದಾಯದಂತೆ ಶುಕ್ರವಾರ ಮಧ್ಯಾಹ್ನ ಅರಸು ದೈವ ಪಾತ್ರಿಗಳು ಮತ್ತು ದೇವಸ್ಥಾನದ ಪ್ರತಿನಿಧಿಗಳು ಸಹಸ್ರಾರು ಭಕ್ತರೊಂದಿಗೆ ಜಮಾತ್‌ಗೆ ಭೇಟಿ ನೀಡಿದರು.
ಮೇಷ ಸಂಕ್ರಮಣದ ನಂತರದ ಮೊದಲ ಶುಕ್ರವಾರ ಈ ಭೇಟಿ ನಡೆಯುತ್ತದೆ. ಮಧ್ಯಾಹ್ನ ಭಂಡಾರ ಮನೆಯಿಂದ ಹೊರಟ ದೈವಗಳನ್ನು ನಮಾಜ್ ಮುಗಿಸಿ ಸಜ್ಜಾಗಿ ನಿಂತಿದ್ದ ಮಸೀದಿಯ ಆಡಳಿತ ಸಮಿತಿ ಪ್ರತಿನಿಧಿಗಳು ಹಾಗೂ ಜಮಾತ್‌ನ ಮುಸ್ಲಿಮರು ಪರಂಪರಾಗತ ರೀತಿಯಲ್ಲಿ ಅದ್ದೂರಿ ಸ್ವಾಗತ ನೀಡಿದರು. ದೈವ ಪಾತ್ರಿಗಳು ಜಮಾತ್‌ನೊಳಗೆ ಪ್ರವೇಶಿಸಿ ಮಸೀದಿ ಮುಂಭಾಗದಲ್ಲಿ ಜಮಾತ್‌ನ ಮುಸ್ಲಿಮರನ್ನು ಜಾತ್ರೆಗೆ ಆಹ್ವಾನಿಸಿದರು. ಸೂಫಿ, ಮೊಯಿದೀನ್ ಕುಂಞಿ, ಖಾದರ್ ಫಾರೂಕ್, ಆಹ್ಮದ್ ಬಾವ, ಅಬೂಬಕ್ಕರ್ ಮಾಹಿನ್, ಹನೀಫ್ ಪಿ.ಎ. ಮತ್ತಿತರರು ನೇತೃತ್ವ ವಹಿಸಿದ್ದರು.
ಮಾಡ ಕ್ಷೇತ್ರದ ಮುಖ್ಯಸ್ಥರಾದ ಡಾ.ಜಯಪಾಲ ಶೆಟ್ಟಿ, ಮಂಜು ಭಂಡಾರಿ, ದುಗ್ಗ ಭಂಡಾರಿ, ತಿಮ್ಮ ಭಂಡಾರಿ ಮುಂಡ ಶೆಟ್ಟಿ, ಹಾಗೂ ಎರಡು ವರ್ಣ ಹಾಗೂ ನಾಲ್ಕು ಗ್ರಾಮದವರಿದ್ದರು.

ಮೇ 9ರಿಂದ ಜಾತ್ರೆ:  ಮೇ 9ರಿಂದ 15ರ ತನಕ ಮಾಡ ಕ್ಷೇತ್ರದ ಉತ್ಸವಕ್ಕೆ ಸಾವಿರ ಜಮಾತ್ ವ್ಯಾಪ್ತಿಯಲ್ಲಿರುವ ಎಲ್ಲ ಮುಸ್ಲಿಂ ಬಾಂಧವರೂ ಪಾಲ್ಗೊಳ್ಳುವ ಮೂಲಕ ಹಿಂದು, ಮುಸ್ಲಿಂ ಭಾವೈಕ್ಯತೆಯ ಕೊಂಡಿಯಾಗಿ ಮುಂದುವರಿದಿದೆ. ನೇಮೋತ್ಸವದ ದಿನದಂದು ಜಮಾತ್‌ನ ಅಧಿಕಾರಿಗಳು ಆಸೀನರಾಗಲು ದೈವಸ್ಥಾನದ ಕಟ್ಟೆಯಲ್ಲಿ ವಿಶೇಷ ಸ್ಥಳ ನೀಡಲಾಗುತ್ತದೆ. ದೈವಗಳು ಆಶೀರ್ವದಿಸಿದ ಮಲ್ಲಿಗೆ ಹೂಗಳನ್ನು ಜಮಾತ್‌ನವರಿಗೆ ನೀಡಲಾಗುತ್ತದೆ.

Leave a Reply

Your email address will not be published. Required fields are marked *