20 ದಿನಕ್ಕಷ್ಟೇ ನೀರು

ಅವಿನ್ ಶೆಟ್ಟಿ, ಉಡುಪಿ

ಬಿಸಿಲ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ನಗರಕ್ಕೆ ನೀರುಣಿಸುವ ಸ್ವರ್ಣಾ ನದಿಯಲ್ಲಿ ಕಲ್ಲುಬಂಡೆಗಳು ಗೋಚರಿಸುತ್ತಿವೆ. ನಗರಕ್ಕೆ 20 ದಿನವಷ್ಟೇ ಪೂರೈಸಬಹುದಾದಷ್ಟು ಪ್ರಮಾಣದಲ್ಲಿ ಬಜೆ ಡ್ಯಾಂನಲ್ಲಿ ನೀರು ಸಂಗ್ರಹವಿದೆ.

ನಗರ ವ್ಯಾಪ್ತಿಯಲ್ಲಿ ರೇಷನಿಂಗ್ ಮಾಡಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಎತ್ತರ ಪ್ರದೇಶಗಳಿಗೆ ಸಮರ್ಪಕ ನೀರು ಪೂರೈಕೆ ಆಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ನಗರಸಭೆ ಸಾಕಷ್ಟು ಮುಂಜಾಗ್ರತೆಯಲ್ಲಿ ನೀರಿನ ಸಮಸ್ಯೆ ನಿವಾರಿಸಲು ಸಿದ್ಧತೆ ನಡೆಸುತ್ತಿದ್ದರೂ, ಅಲ್ಲಲ್ಲಿ ಸಮಸ್ಯೆ ಉಲ್ಬಣವಾಗುತ್ತಿರುವುದು ತಲೆನೋವಿಗೆ ಕಾರಣವಾಗಿದೆ. ಏಪ್ರಿಲ್, ಮೇ ಬಂತೆಂದರೇ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಬಾವಿ, ಬೋರ್ ಸೇರಿದಂತೆ ನೀರಿನ ಮೂಲಗಳು ಬರಿದಾಗುತ್ತಿರುವುದು ಜನತೆಯ ಆತಂಕಕ್ಕೆ ಕಾರಣ.

ಬೇಸಿಗೆ ತಾಪದಿಂದ ಸ್ವರ್ಣಾ ನದಿ ಬಜೆಯಲ್ಲಿ ನೀರು ಈ ಬಾರಿ ವೇಗವಾಗಿ ಬತ್ತುತ್ತಿದೆ, ನೀರಿನ ಪ್ರಮಾಣ ಡೆಡ್‌ಲೈನ್‌ಗೆ ಸಮೀಪಕ್ಕೆ ಸಾಗುತ್ತಿದೆ. ಬಜೆ ಡ್ಯಾಂನ ಡೆಡ್‌ಲೈನ್ 2 ಮೀಟರ್ ಇದೆ. ಪ್ರಸಕ್ತ 3.10 ಮೀಟರ್ ನೀರಿನ ಸಂಗ್ರಹವಿದ್ದು, ನೀರು ವೇಗವಾಗಿ ಬತ್ತಿದರೆ ಡೆಡ್‌ಲೈನ್ ಸಮೀಪ ತಲುಪಲಿದೆ. ಪಂಪಿಂಗ್ ಸಮಯವನ್ನು 24 ಗಂಟೆಯಿಂದ 22 ಗಂಟೆಗೆ ಇಳಿಸಲಾಗಿದೆ. 2 ಗಂಟೆ ಫಿಲ್ಟರ್ ವ್ಯವಸ್ಥೆಗಳ ಸರ್ವೀಸ್ ನಡೆಯಲಿದೆ.

ಮಳೆ ಬಾರದಿದ್ದರೆ?: ಅಜೆಕಾರು, ಹೆಬ್ರಿ, ಕಾರ್ಕಳ ಭಾಗದಲ್ಲಿ ಒಂದೆರಡು ಉತ್ತಮ ಮಳೆಯಾದರೆ ಸ್ವರ್ಣಾ ನದಿ ತುಂಬಿ ಹರಿಯುತ್ತದೆ. ಕಳೆದ ಬಾರಿಯೂ ಬೇಸಿಗೆಯಲ್ಲಿ ಎರಡು ಮಳೆಯಾದ್ದರಿಂದ ಹೆಚ್ಚಿನ ಸಮಸ್ಯೆ ಆಗಿರಲಿಲ್ಲ. ಒಂದು ವೇಳೆ ಮಳೆಯಾಗದಿದ್ದರೆ ಶಿರೂರು ಸೇತುವೆ ಬಳಿ ಡ್ರಜ್ಜಿಂಗ್ ನಡೆಸಿ ನೀರನ್ನು ಬಜೆ ಡ್ಯಾಂಗೆ ಪಂಪ್ ಮಾಡಿ ನಗರಕ್ಕೆ ನೀರು ಪೂರೈಸಬೇಕು. ಅಥವಾ ಟ್ಯಾಂಕರ್ ಮೂಲಕ ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡುವುದು ಅನಿವಾರ್ಯವಾಗಲಿದೆ ಎನ್ನುತ್ತಾರೆ ನಗರಸಭೆ ಸದಸ್ಯರು.

ಸಂಪರ್ಕಕ್ಕೆ ಸಿಗದ ನಗರಸಭೆ: ನೀರಿನ ಸಮಸ್ಯೆ ಹೇಳಲು ಹೋದರೆ, ಜನರಿಗೆ ನಗರಸಭೆ ಸಂಪರ್ಕಕ್ಕೇ ಸಿಗುತ್ತಿಲ್ಲ. ಚುನಾವಣೆ ಕರ್ತವ್ಯದಲ್ಲಿ ಅಧಿಕಾರಿಗಳು ಬ್ಯುಸಿ ಆಗಿದ್ದಾರೆ, ನೀರಿನ ಸಮಸ್ಯೆ ಸಂಬಂಧಿಸಿದ ದೂರುಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ನೀರಿನ ಸಮಸ್ಯೆ ಸಂಬಂಧಿಸಿ ಕಂಟ್ರೋಲ್ ರೂಂ ಸ್ಥಾಪಿಸಿಲ್ಲ ಅಥವಾ ದೂರವಾಣಿ ಸಂಪರ್ಕ ನೀಡಿಲ್ಲ ಎಂದು ನಾಗರಿಕರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲೆಲ್ಲಿ ನೀರಿನ ಸಮಸ್ಯೆ ?: ಹೆರ್ಗ ಗ್ರಾಮದ ಶೆಟ್ಟಿಬೆಟ್ಟು, ಗ್ಯಾಟ್‌ಸನ್, ಪ್ರಸಾದ್ ಸರ್ಕಲ್, ಅಜ್ಜರಕಾಡು, ಬ್ರಹ್ಮಗಿರಿ, ಮಿಷನ್‌ಕಾಂಪೌಂಡ್, ಬನ್ನಂಜೆ, ಅಂಬಲಪಾಡಿ, ಸಂಸ್ಕೃತ ಕಾಲೇಜು ಪರಿಸರ, ಕಲ್ಮಾಡಿ ಬಾಪುತೋಟ, ಗರಡಿ ರಸ್ತೆ, ದೊಡ್ಡಣಗುಡ್ಡೆ, ಕರಂಬಳ್ಳಿ, ಗುಂಡಿಬೈಲು, ಕುಂಜಿಬೆಟ್ಟು, ಈಶ್ವರನಗರ, ಸರಳೇಬೆಟ್ಟು, ಇಂದ್ರಾಳಿ, ಸಗ್ರಿ, ಕಕ್ಕುಂಜೆ, ವಿಜಯನಗರ ಭಾಗದಲ್ಲಿ ನೀರು ಸರಿಯಾಗಿ ಬರುತ್ತಿಲ್ಲ ಎಂದು ನಗರಸಭೆ ಸದಸ್ಯರು ದೂರಿದ್ದಾರೆ.

ಬಜೆ ಡ್ಯಾಂನಲ್ಲಿ ನೀರಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಮಳೆ ಬಂದರೆ ಸಮಸ್ಯೆ ಇಲ್ಲ. ಬಜೆ ಡ್ಯಾಂಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಸೋಮವಾರ ಕುಡಿಯುವ ನೀರಿನ ವಿಚಾರದಲ್ಲಿ ಡಿಸಿ ಸಭೆ ಇದೆ. ಬಳಿಕ ಮುಂದಿನ ತಿರ್ಮಾನ.
|ಆನಂದ್ ಕಲ್ಲೋಳಿಕರ್, ನಗರಸಭೆ ಪೌರಾಯುಕ್ತ

ಮೂರು ದಿನಕ್ಕೊಮ್ಮೆ ನೀರು ಬಿಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದೆವು, ಬಳಿಕ ಪ್ರತಿದಿನ ನೀರು ಕೊಡುತ್ತಿದ್ದರು. ಮತ್ತೆ 2 ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ನೀರಿನ ಸಮಸ್ಯೆಯಿದೆ.
|ಮಂಜುನಾಥ್ ಮಣಿಪಾಲ, ನಗರಸಭೆ ಸದಸ್ಯ.

ಎರಡು ದಿನ ಬಿಟ್ಟು ನೀರು ಕೊಡಲಾಗುತ್ತಿತ್ತು, ಪ್ರಸಕ್ತ ಪ್ರತೀದಿನ ನೀರನ್ನು ಬಿಡುತ್ತಿದ್ದಾರೆ. ಹೀಗೆ ಆದಲ್ಲಿ ಕೆಲವೇ ದಿನಗಳಲ್ಲಿ ಬಜೆ ಡ್ಯಾಂನಲ್ಲಿ ನೀರು ಬರಿದಾಗಲಿದೆ. ಅದರ ಬದಲು ದಿನಬಿಟ್ಟು ದಿನ ಪೂರೈಕೆ ಮಾಡಿದರೇ, ನೀರಿನ ಶೇಖರಣೆ ಸುಧಾರಿಸಬಹುದು. ಸಮಸ್ಯೆ ಇರುವ ಕಡೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಲು ನಗರಸಭೆ ಕ್ರಮ ತೆಗೆದುಕೊಳ್ಳಬೇಕು.
|ನಾರಯಣ ಜಿ.ಕುಂದರ್, ಮಾಜಿ ನಗರಸಭೆ ಸದಸ್ಯ