ಅಧ್ಯಕ್ಷ ರವಿರಾಜ ಎಚ್.ಪಿ. ಮಾಹಿತಿ
ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನ
ವಿಜಯವಾಣಿ ಸುದ್ದಿಜಾಲ ಉಡುಪಿ
ಕನ್ನಡ ಸಾಹಿತ್ಯ ಪರಿಷತ್ನ ಉಡುಪಿ ತಾಲೂಕು ಘಟಕದ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಕಲಾಯತನವು ಮೇ 17ರಂದು ಉಡುಪಿಯ ಕೊಡವೂರು ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಬೆಳಗ್ಗೆ 8:15ರಿಂದ ರಾತ್ರಿ 8:15ರ ವರೆಗೆ ನಿರಂತರವಾಗಿ ಕನ್ನಡದ ಹಬ್ಬ ನಡೆಯಲಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ರವಿರಾಜ ಎಚ್.ಪಿ. ಮಾಹಿತಿ ನೀಡಿದರು.


ಉಡುಪಿಯ ಪ್ರೆಸ್ಕ್ಲಬ್ನಲ್ಲಿ ಮೇ 13ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿರುವ ಶಿಕ್ಷಣ ತಜ್ಞ ಪ್ರೊ. ಎಂ.ಎಲ್. ಸಾಮಗ ಅವರನ್ನು ಮಲ್ಪೆಯ ಸಿಟಿಜನ್ ಸರ್ಕಲ್ನಿಂದ ಮೆರವಣಿಗೆಯೊಂದಿಗೆ ಸ್ವಾಗತಿಸಲಾಗುವುದು. ಸಾಹಿತಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಪುಸ್ತಕ ಮಳಿಗೆ ಉದ್ಘಾಟಿಸಲಿದ್ದಾರೆ. ಹಿರಿಯ ವಿಮರ್ಶಕ ಎಸ್.ಆರ್. ವಿಜಯಶಂಕರ, ಸಾಹಿತಿ ಎಚ್. ಡುಂಡಿರಾಜ ಪಾಲ್ಗೊಳ್ಳಲಿದ್ದಾರೆ ಎಂದರು.
ಸಭಾ ಕಾರ್ಯಕ್ರಮದ ನಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಯಕ್ಷ ರಂಗಾಯಣ ಕಾರ್ಕಳದವರಿಂದ ಕುಮಾರವ್ಯಾಸ ಭಾರತದ ವಿರಾಟ ಪರ್ವದಿಂದ ಆಯ್ದ ಭಾಗ ಆರೊಡನೆ ಕಾದುವೆನು ನಾಟಕ ಪ್ರದರ್ಶನ ಹಾಗೂ ಯಕ್ಷೋನ್ನತಿ ಕಲಾತಂಡದಿಂದ ಚಿತ್ರ ಫಲ್ಗುಣಿ‘ ಯಕ್ಷರೂಪಕ ನಡೆಯಲಿದೆ ಎಂದು ರವಿರಾಜ ಎಚ್.ಪಿ. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜಿನಿ ವಸಂತ, ಸ್ವಾಗತ ಸಮಿತಿಯ ಸಾಧು ಸಾಲ್ಯಾನ್, ಕಾರ್ಯದರ್ಶಿ ಸತೀಶ ಕೊಡವೂರು ಇದ್ದರು.
ವಿಚಾರಗೋಷ್ಠಿ, ಸನ್ಮಾನ
ಯಕ್ಷ ಕವಿಗೋಷ್ಠಿ, ಯಕ್ಷಗಾನ, ದೃಶ್ಯ ಭಾಷೆ ಸಂಸ್ಕೃತಿ ವಿಷಯವಾಗಿ ವಿಚಾರಗೋಷ್ಠಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ, ನಾಟಕ, ಯಕ್ಷಗಾನ ಪ್ರದರ್ಶನವೂ ಇದೆ. ಸಮಾರೋಪ ಸಮಾರಂಭದಲ್ಲಿ ಕಸಾಪ ತಾಲೂಕು ಘಟಕ ಅಧ್ಯಕ್ಷ ರವಿರಾಜ ಎಚ್.ಪಿ. ಅಧ್ಯಕ್ಷತೆ ವಹಿಸಲಿದ್ದು, 20ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಐದು ಸಂಘ-ಸಂಸ್ಥೆಗಳನ್ನು ಗೌರವಿಸಲಾಗುತ್ತಿದೆ. ಸಾಹಿತಿ ಡಾ. ನಿಕೇತನಾ ಸಮಾರಂಭದ ಸಮಾರೋಪ ಭಾಷಣ ಮಾಡಲಿದ್ದಾರೆ.