ದೇಶ ಸುರಕ್ಷಿತವಾದರೆ ಆರ್ಥಿಕಾಭಿವೃದ್ಧಿ

ಉಡುಪಿ: ರಾಷ್ಟ್ರ ಸುಭದ್ರವಾಗಿದ್ದರೆ ಮಾತ್ರ ಆರ್ಥಿಕಾಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ 5 ವರ್ಷಗಳಲ್ಲಿ ಕೇಂದ್ರ ಸರ್ಕಾರ ಸೈನ್ಯವನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದರು.

ಮಣಿಪಾಲ ಖಾಸಗಿ ಹೋಟೆಲ್‌ನಲ್ಲಿ ಜಿಲ್ಲಾ ಬಿಜೆಪಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಭದ್ರತೆ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಒಂದು ಕುಟುಂಬದ ಸ್ಮಾರಕಕ್ಕೆ ಹತ್ತಾರು ಎಕರೆ ಜಾಗವನ್ನು ದೆಹಲಿಯಲ್ಲಿ ನೀಡಲಾಗಿತ್ತು. ಆದರೆ ಮೋದಿ ಸರ್ಕಾರ ಬರುವವರೆಗೆ ದೇಶದಲ್ಲಿ ಹುತಾತ್ಮರಾದ 30 ಸಾವಿರ ಸೈನಿಕರಿಗೆ ರಾಷ್ಟ್ರೀಯ ಸ್ಮಾರಕ ಇರಲಿಲ್ಲ. 2006ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಒನ್‌ರ‌್ಯಾಂಕ್ ಒನ್ ಪೆನ್ಶನ್ ಜಾರಿಗೆ ಒತ್ತಾಯಿಸಿದಾಗ ಮುಂದಿನ ದಿನಗಳಲ್ಲಿ ಐಎಎಸ್ ಅಧಿಕಾರಿಗಳೂ ಇದಕ್ಕೆ ಒತ್ತಾಯಿಸುತ್ತಾರೆ ಎಂದು ಹೇಳಿ ಇದನ್ನು ತಳ್ಳಿ ಹಾಕಿದ್ದರು. ವಾರ್ ಮೆಮೋರಿಯಲ್ ರಚಿಸುವಂತೆ ಮನವಿ ಮಾಡಿದರೆ ಇಂಡಿಯಾ ಗೇಟ್ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ಉತ್ತರಿಸಿದ್ದರು. ಕಾರ್ಗಿಲ್ ವಿಜಯ ದಿವಸ ಆಚರಿಸಿ ಎಂದು ಅಂದಿನ ರಕ್ಷಣಾ ಸಚಿವ ಎ.ಕೆ. ಆ್ಯಂಟನಿಯವರನ್ನು ಒತ್ತಾಯಿಸಿದರೆ ಅದು ಬಿಜೆಪಿಯ ಯುದ್ಧ ಎಂದು ಬೇಜವಾಬ್ದಾರಿಯಾಗಿ ಉತ್ತರಿಸಿದ್ದರು. ಇಂಥ ಕಾಂಗ್ರೆಸ್‌ನಿಂದ ಸೈನ್ಯವನ್ನು ಬಲಪಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.