ಉಡುಪಿ ಎಸ್‌ಪಿ ಕಚೇರಿ ನವೀಕರಣ

ಅವಿನ್ ಶೆಟ್ಟಿ ಉಡುಪಿ

ಬನ್ನಂಜೆ ಬ್ರಹ್ಮಗಿರಿ ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕಚೇರಿ 60ರಿಂದ 70 ಲಕ್ಷ ರೂ ವೆಚ್ಚದಲ್ಲಿ ನವೀಕರಣಗೊಳ್ಳುತ್ತಿದೆ. ಶೌಚಗೃಹ, ನೆಲಹಾಸು, ಸಭಾಂಗಣ ಸೇರಿದಂತೆ ಒಳಾಂಗಣ ನವೀಕರಣ ಕಾರ್ಯ ಭರದಿಂದ ಸಾಗುತ್ತಿದೆ. 2004ರಲ್ಲಿ ಅಂದಿನ ಅಂದಿನ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ನೂತನ ಎಸ್‌ಪಿ ಕಚೇರಿ ಉದ್ಘಾಟಿಸಿದ್ದರು. ಅಂದು ಮುರುಗುನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು. ಉದ್ಘಾಟನೆ ಬಳಿಕ ಎಸ್‌ಪಿ ಕಚೇರಿ ನವೀಕರಣಗೊಳ್ಳುತ್ತಿರುವುದು ಇದೇ ಮೊದಲು.

ಕಚೇರಿ ವಿಶೇಷ: ವಿಶಾಲ ಜಾಗದಲ್ಲಿ ಹಸಿರು, ಮರಗಿಡಗಳ ಪರಿಸರದಲ್ಲಿ ಎಸ್‌ಪಿ ಕಚೇರಿ ಕಟ್ಟಡ ಆಕರ್ಷಕವಾಗಿದೆ. ಎರಡು ಮಹಡಿಯಲ್ಲಿ ಕಂಟ್ರೋಲ್ ರೂಂ, ಎಸ್‌ಪಿ ಕ್ಯಾಬಿನ್, ರಿಸೆಪ್ಶನ್, ಕೇಂದ್ರ ಅಪರಾಧ ವಿಭಾಗ, ಸಭೆ, ಸಮಾರಂಭ ನಡೆಸುವ ಸಭಾಂಗಣ, ಸಾರ್ವಜನಿಕ ಕುಳಿತುಕೊಳ್ಳುವ ಕೊಠಡಿ, ದಾಖಲೆ ವಿಭಾಗ, ವಿಚಾರಣೆ ಕೊಠಡಿ ಸೇರಿದಂತೆ ಮೂಲ ಸೌಲಭ್ಯಗಳನ್ನು ಒಳಗೊಂಡ ಎಸ್‌ಪಿ ಕಚೇರಿ ಸುಸಜ್ಜಿತ ಕಟ್ಟಡವಾಗಿದೆ. ಆದರೆ ಉದ್ಘಾಟನೆಯಾಗಿ 16 ವರ್ಷವಾದ ಹಿನ್ನೆಲೆಯಲ್ಲಿ ಶೌಚಗೃಹ, ನೆಲಹಾಸು ನವೀಕರಣ ಪೀಠೊಪಕರಣ ಬದಲಾವಣೆ ಅಗತ್ಯವಾಗಿತ್ತು.

ಏನೇನು ನವೀಕರಣ?: ಶೌಚಗೃಹಗಳು ಸಂಪೂರ್ಣ ದುಸ್ಥಿತಿಯಲ್ಲಿವೆ. ಸಭಾಂಗಣ ಕುರ್ಚಿ ಟೇಬಲ್ ಸೆಟ್‌ಗಳು ಮುರಿದು ಹೋಗುವ ಹಂತದಲ್ಲಿವೆ. ಎಸಿ, ಫ್ಯಾನ್‌ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ವಯರಿಂಗ್ ವ್ಯವಸ್ಥೆಗೆ ಅಲ್ಲಲ್ಲಿ ಹಾನಿಯಾಗಿತ್ತು. ಟೈಲ್ಸ್‌ಗಳು ಕಿತ್ತು ಹೋಗಿವೆ. ಸಾರ್ವಜನಿಕರು ಕುಳಿತುಕೊಳ್ಳುವ ಸಭಾಂಗಣದಲ್ಲಿ ನೆಲಹಾಸು ಮತ್ತು ಕುಳಿತುಕೊಳ್ಳುವ ಆಸನದ ಸೆಟ್ ಸಹ ದುಸ್ಥಿತಿಯಲ್ಲಿದೆ. ಪ್ರಸಕ್ತ ಅಗತ್ಯಕ್ಕೆ ತಕ್ಕಂತೆ ಪೀಠೊಪಕರಣಗಳನ್ನು ಬದಲಾಯಿಸಲಾಗುತ್ತಿದೆ. ಕಚೇರಿ ಒಳಾಂಗಣ ನವೀಕರಣ ಮಾತ್ರ ನಡೆಯುತ್ತಿದ್ದು 10 ರಿಂದ 20 ಮಂದಿ ಕಾರ್ಮಿಕರು ನವೀಕರಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಸುಸಜ್ಜಿತ ಪೊಲೀಸ್ ಶ್ವಾನಗೃಹ: ಅಪರಾಧ ಪ್ರಕರಣ ಭೇದಿಸುವಲ್ಲಿ ಪೊಲೀಸ್ ಶ್ವಾನಗಳು ಇಲಾಖೆಗೆ ಮಹತ್ವದ ಸಹಕಾರ ನೀಡುತ್ತವೆ. ಶ್ವಾನಗಳ ಪಾಲನೆ, ಪೋಷಣೆ ಬಗ್ಗೆ ಇಲಾಖೆ ಮೇಲೆ ಸಾಕಷ್ಟು ಜವಾಬ್ದಾರಿ ಇರುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕಳೆದ ವರ್ಷ 11 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಶ್ವಾನಗೃಹ ನಿರ್ಮಿಸಲಾಗಿದೆ. ನಗರದ ಮಿಶನ್ ಕಾಂಪೌಂಡ್ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಕೇಂದ್ರಸ್ಥಾನದಲ್ಲಿ ಈ ಸುಸಜ್ಜಿತ ಶ್ವಾನಗೃಹ ನಿರ್ಮಾಣವಾಗಿದೆ. ಪ್ರಸಕ್ತ ನೂತನ ಶ್ವಾನಗೃಹದಲ್ಲಿ ಶ್ವಾನಗಳನ್ನು ಇರಿಸಲಾಗಿದೆ. ಇನ್ನೂ ಒಂದು ವಿಶೇಷವೆಂದರೆ ಉಡುಪಿ ನಗರ ಠಾಣೆ ಸಮೀಪದಲ್ಲಿರುವ ಹಳೆಯ ಪೊಲೀಸ್ ವಸತಿ ಗೃಹದ ಮುಂಭಾಗ ನೂತನ ವಸತಿ ಗೃಹ ನಿರ್ಮಾಣ ಮಾಡಲಾಗುತ್ತಿದೆ. ನೂತನ ಬಹುಮಡಿ ಕಟ್ಟಡ ನಿರ್ಮಾಣವಾಗುತ್ತಿದ್ದು, ನಾಲ್ಕೈದು ತಿಂಗಳಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇವೆರಡಕ್ಕೆ ಪ್ರತ್ಯೇಕ ಅನುದಾನ ಮೀಸಲಿರಿಸಲಾಗಿದೆ.

ಕಚೇರಿ ಒಳಾಂಗಣ ನವೀಕರಣ ಕೆಲಸ ನಡೆಯುತ್ತಿದೆ. ಶೌಚಗೃಹ, ನೆಲಹಾಸು ಬದಲಾವಣೆ ದುರಸ್ತಿ ಕಾರ್ಯ ಜತೆಗೆ ಹಳೆಯ ಪೀಠೋಪಕರಣ ಬದಲಾವಣೆ ಮಾಡಲಾಗುತ್ತಿದೆ.
-ಲಕ್ಷ್ಮಣ ನಿಂಬರಗಿ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ