ಕೃಷ್ಣ ಮಠಕ್ಕೆ ಮರಳಿದ ಸುಭದ್ರೆ

<<ಶಿವಮೊಗ್ಗದ ಸಕ್ರೆಬೈಲು ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖ * ಸ್ವರ್ಣ ಗೋಪುರ ಸಮರ್ಪಣೆಗೆ ಹಿನ್ನೆಲೆಯಲ್ಲಿ ಆಗಮನ>>

ವಿಜಯವಾಣಿ ಸುದ್ದಿಜಾಲ ಉಡುಪಿ
ಪಲಿಮಾರು ಶ್ರೀಗಳ ಪರ್ಯಾಯೋತ್ಸವ ವೇಳೆ ಅನಾರೋಗ್ಯದಿಂದ ಶಿವಮೊಗ್ಗ ಸಕ್ರೆಬೈಲು ಆನೆ ಬಿಡಾರಕ್ಕೆ ತೆರಳಿದ್ದ ಶ್ರೀ ಕೃಷ್ಣ ಮಠದ ಆನೆ ಸುಭದ್ರೆ ಮತ್ತೆ ಮಠಕ್ಕೆ ವಾಪಸಾಗಿದ್ದಾಳೆ.
ಐದು ದಿನಗಳ ಹಿಂದೆ ಮಠಕ್ಕೆ ಆಗಮಿಸಿದ ಸುಭದ್ರೆಯನ್ನು ಶ್ರೀಕೃಷ್ಣ ಮಠದ ಮುಖ್ಯದ್ವಾರ ಬಳಿ ಇರುವ ಹಳೆಯ ಆನೆಲಾಯದಲ್ಲಿ ಇರಿಸಲಾಗಿದೆ. ಸದ್ಯ ಸುಭದ್ರೆ ಗುಣಮುಖ ಹೊಂದಿದ್ದು, ಸಕ್ರೆಬೈಲಿನಲ್ಲಿ ಎಲ್ಲಾ ರೀತಿಯ ಚಿಕಿತ್ಸೆ ಸುಭದ್ರೆಗೆ ಲಭಿಸಿದೆ. ಪ್ರಸ್ತುತ ಶ್ರೀಕೃಷ್ಣಮಠದಲ್ಲಿ ರಥೋತ್ಸವ ನಡೆಯುತ್ತಿದ್ದು, ಮೇ 29ರಿಂದ ಸುವರ್ಣಗೋಪುರ ಸಮರ್ಪಣೆ ಕಾರ್ಯಕ್ರಮಗಳಿರುವ ಕಾರಣದಿಂದ ಮೆರುಗು ನೀಡಲು ಸುಭದ್ರೆಯನ್ನು ತರಿಸಲಾಗಿದೆ.
ಈ ಪರಿಸರಕ್ಕೆ ಹೊಂದಿಕೊಂಡರೆ ಆನೆ ಇಲ್ಲಿಯೇ ಇರುತ್ತದೆ ಎಂದು ಶ್ರೀ ಮಠದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಶ ಭಟ್ ವಿಜಯವಾಣಿಗೆ ತಿಳಿಸಿದ್ದಾರೆ. ಮೂರು ವರ್ಷವಿದ್ದಾಗ ಉಡುಪಿ ಶ್ರೀಕೃಷ್ಣಮಠಕ್ಕೆ ಬಂದಿದ್ದ ಆನೆ ಸುಭದ್ರೆಗೆ ಈಗ 28 ವರ್ಷ, ಕಾಲು ನೋವು, ಮಾನಸಿಕ ವೇದನೆ, ವಿವಿಧ ಅನಾರೋಗ್ಯದಿಂದ ಸುಭದ್ರೆ ಬಳಲುತ್ತಿದ್ದಳು. ದೀರ್ಘಾವದಿ ಚಿಕಿತ್ಸೆ ಸಲುವಾಗಿ ಆನೆಯನ್ನು ಸಕ್ರೆಬೈಲಿಗೆ ಕೊಂಡೊಯ್ಯಲಾಗಿತ್ತು. ಇದೀಗ ಲವಲವಿಕೆಯಿಂದ ಇದ್ದು, ಸಕ್ರೇಬೈಲಿನಿಂದ ಆಗಮಿಸಿದ ಇಬ್ಬರು ಮಾವುತರು ಸುಭದ್ರೆ ಆನೆಯೊಂದಿಗೆ ಇದ್ದಾರೆ.

One Reply to “ಕೃಷ್ಣ ಮಠಕ್ಕೆ ಮರಳಿದ ಸುಭದ್ರೆ”

  1. ದಯವಿಟ್ಟು ಮತ್ತೆ ಆನೆಯನ್ನು ಕಾಡಿಗೇ ಕಳಿಸಿ ಬಿಡಿ. ಮಾನವರ ಮದ್ಯೆ ಇದ್ದರೆ ಅದಕ್ಕೆ ಮಾನಸಿಕವಾಗಿ ಹಿಂಸೆ ಆಗುವುದು. ದೇವರ ಹೆಸರಲ್ಲಿ ಹಿಂಸೆ ಬೇಡ. ಕಾಡಿನಲ್ಲಿ ನೆಮ್ಮದಿಯಿಂದ ಇರಲಿ.

Comments are closed.