More

    ಅದಮಾರು ಪರ್ಯಾಯ ಆರಂಭ, ಉಡುಪಿ ಕೃಷ್ಣಮಠದಲ್ಲಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ

    ಉಡುಪಿ: ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಶನಿವಾರ ಪ್ರಾತಃಕಾಲ 5.57ರ ಶುಭ ಮುಹೂರ್ತದಲ್ಲಿ ಪ್ರಥಮ ಬಾರಿಗೆ ಸರ್ವಜ್ಞ ಪೀಠಾರೋಹಣಗೈಯುವುದರೊಂದಿಗೆ ಶ್ರೀಕೃಷ್ಣಮಠದ ದ್ವೈವಾರ್ಷಿಕ ಪೂಜಾ ಪದ್ಧತಿಯ 250ನೇ ಪರ್ಯಾಯೋತ್ಸವ ವಿಧ್ಯುಕ್ತವಾಗಿ ಆರಂಭಗೊಂಡಿದ್ದು, ಅಭೂತಪೂರ್ವ ಕಾರ್ಯಕ್ರಮಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು. ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಕಾಪು ಉಳಿಯಾರಗೋಳಿ ದಂಡತೀರ್ಥ ಮಠಕ್ಕೆ ನಸುಕಿನಲ್ಲಿ 12.50ಕ್ಕೆ ಆಗಮಿಸಿದ್ದು, ಶ್ರೀ ಮಧ್ವಾಚಾರ್ಯರ ದಂಡದಿಂದ ಉದಿಸಿದ ದಂಡತೀರ್ಥ ಕೆರೆಯಲ್ಲಿ ತೀರ್ಥಸ್ನಾನ ಮಾಡಿ ಜೋಡುಕಟ್ಟೆಗೆ ತೆರಳಿದರು. ಅಲ್ಲಿಂದ ಪಟ್ಟದ ದೇವರ ಜತೆಗೆ ಮೇನೆಯಲ್ಲಿ ಕುಳಿತು ವೈಭವದ ಮೆರವಣಿಗೆಯಲ್ಲಿ ರಥಬೀದಿಗೆ ಆಗಮಿಸಿ 4.50ಕ್ಕೆ ಕನಕ ಕಿಂಡಿಯಲ್ಲಿ ಕೃಷ್ಣ ದರ್ಶನ ಪಡೆದರು. ಈ ಸಂದರ್ಭ ವಿಪ್ರರಿಗೆ ನವಗ್ರಹ ದಾನ, ಫಲದಾನ ನೀಡಲಾಯಿತು. ಬಳಿಕ ಅನಂತೇಶ್ವರ, ಚಂದ್ರಮೌಳೀಶ್ವರ ದರ್ಶನ ಪಡೆದು 5.30ಕ್ಕೆ ಕೃಷ್ಣ ಮಠ ಪ್ರವೇಶಗೈದರು.

    ನಿರ್ಗಮನ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅದಮಾರು ಶ್ರೀಗಳನ್ನು ಸ್ವಾಗತಿಸಿ, ಕೃಷ್ಣ ದೇವರ ಮುಂಭಾಗ ಗಂಧಾದಿ ಉಪಚಾರ ಸಲ್ಲಿಸಿದರು. ಬಳಿಕ ಪಲಿಮಾರು ಶ್ರೀಗಳು ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರಿಗೆ ಮಧ್ವಾಚಾರ್ಯರ ಸನ್ನಿಧಿಯಲ್ಲಿ ಅಕ್ಷಯಪಾತ್ರೆ, ಸಟ್ಟುಗ ಹಸ್ತಾಂತರಿಸಿದರು.

    ಗುರುಗಳನ್ನು ಅನುಸರಿಸಿದ ಶಿಷ್ಯ: ಪಲಿಮಾರು ಶ್ರೀಗಳು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಗಳನ್ನು ಸರ್ವಜ್ಞಪೀಠದಲ್ಲಿ ಕುಳ್ಳಿರಿಸಿ, ಅಧಿಕೃತವಾಗಿ 2 ವರ್ಷ ಪರ್ಯಾಯದ ಜವಾಬ್ದಾರಿ ಹಸ್ತಾಂತರಿಸಿದರು. 1988ರಲ್ಲಿ ತಮ್ಮ ಗುರು ಶ್ರೀ ವಿಬುಧೇಶ ತೀರ್ಥ ಸ್ವಾಮೀಜಿ ಮೊದಲಿಗೆ ಸರ್ವಜ್ಞ ಪೀಠದಲ್ಲಿ ಕುಳಿತು, ಪೀಠವನ್ನು ತನಗೆ ಬಿಟ್ಟು ಕೊಟ್ಟ ಮಾದರಿಯಲ್ಲಿ ವಿಶ್ವಪ್ರಿಯ ತೀರ್ಥರು ತಮ್ಮ ಉತ್ತರಾಧಿಕಾರಿ ಶ್ರೀ ಈಶಪ್ರಿಯ ತೀರ್ಥ ಶ್ರೀಗಳನ್ನು ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿದರು.

    ಮಾಲಿಕಾ ಮಂಗಳಾರತಿ: ಮಠದ ಬಡಗುಮಾಳಿಗೆ ಅರಳುಗದ್ದುಗೆಯಲ್ಲಿ ಅದಮಾರು ಮಠ ವತಿಯಿಂದ ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ವಾಮೀಜಿಯವರನ್ನು ಮಾಲಿಕಾ ಮಂಗಳಾರತಿ ಮೂಲಕ ಗೌರವಿಸಲಾಯಿತು. ಆಶ್ರಮ ಜ್ಯೇಷ್ಠತೆಯ ಆಧಾರದಲ್ಲಿ ಗಂಧಾದ್ಯುಪಚಾರ, ರೇಷ್ಮೆ ಶಾಲು, ಒಣಹಣ್ಣುಗಳಿಂದ ತಯಾರಿಸಿದ ವಿಶಿಷ್ಟ ಹಾರ ಹಾಕಿ, ಮೈಸೂರು ಪೇಟ ತೊಡಿಸಿ ಸತ್ಕರಿಸಲಾಯಿತು. ಪರ್ಯಾಯ ಮಠದ ದಿವಾನ ಎಂ.ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ ವಿವಿಧ ಮಠಾಧೀಶರಿಗೆ ಆರತಿ ಬೆಳಗಿದರು. ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಮೈಸೂರು ಮಹಾರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸಿದ್ದರು.
    ಸಾಯಂಕಾಲ ರಾಜಾಂಗಣದಲ್ಲಿ ಮಠಾಧೀಶರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿದ್ದ ಪರ್ಯಾಯ ದರ್ಬಾರಿನಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಜವಂಶಸ್ಥ ಒಡೆಯರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತಿತರರಿದ್ದರು. 

    ಸರ್ವಜ್ಞ ಪೀಠ ಸಂದೇಶ: ಪರ್ಯಾಯ ಪೀಠ ಅಲಂಕರಿಸಿದ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು. ನಾವು ಇಲ್ಲಿ ನಿಮಿತ್ತ ಮಾತ್ರ. ಆಚಾರ್ಯ ಮಧ್ವರೇ ಪರ್ಯಾಯ ಮಠಾಧೀಶರಲ್ಲಿ ಸನ್ನಿಹಿತರಾಗಿ ಕೃಷ್ಣ ಪೂಜೆ ನಡೆಸುತ್ತಾರೆ. ಸಮಾಜದಲ್ಲೂ ಈ ಭಾವನೆ ಇದೆ. ಗುರುಗಳು ಶಿಷ್ಯನ ಮೇಲೆ ಅನುಗ್ರಹದಿಂದ ಈ ಜವಾಬ್ದಾರಿ ವಹಿಸಿದ್ದಾರೆ. ದೇವರು ಸ್ವಾಮಿ, ನಾವು ದಾಸರೆಂಬ ಭಾವದಲ್ಲಿ ಎಲ್ಲವನ್ನೂ ಆತನಲ್ಲಿ ಬೇಡಿ ಪಡೆದುಕೊಳ್ಳಬೇಕು ಎಂದು ಶ್ರೀಗಳು ಹೇಳಿದರು. ಅದಮಾರು ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಚಂದ್ರ ದೋಷ ನಿವಾರಿಸಿಕೊಳ್ಳಲು ಆರಿಸಿದ ಕ್ಷೇತ್ರ ಉಡುಪಿ. ಮಾನವನ ದೈಹಿಕ, ಮಾನಸಿಕ, ಆಧ್ಯಾತ್ಮಿಕ ದೋಷ ಪರಿಹರಿಸುವ ಸ್ಥಳವೂ ಇದಾಗಿದೆ. ಸನ್ಯಾಸಿಗಳು ದೇವರನ್ನು ಆರಾಧಿಸುವಾಗ ದೇಶಕ್ಕೆ ಒಳ್ಳೆಯದಾಗಲಿ ಎಂದಷ್ಟೇ ಪ್ರಾರ್ಥಿಸುತ್ತಾರೆ ಎಂದು ಆಶೀರ್ವಚನ ನೀಡಿದರು. ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಬದರಿಯಂತೆ ಉಡುಪಿಯೂ ಪವಿತ್ರ ಕ್ಷೇತ್ರ. ಅದಕ್ಕಾಗಿ ವಾಯುದೇವರು ಇಲ್ಲಿ ಅವತರಿಸಿದ್ದಾರೆ. ಆಚಾರ್ಯ ಮಧ್ವರು ಸರ್ವಜ್ಞಪೀಠದಲ್ಲಿ ಕುಳಿತು ಕೃಷ್ಣನನ್ನು ಆರಾಧಿಸಿದ್ದಾರೆ. ಈ ಪೀಠಕ್ಕೆ ತನ್ನ ಶಕ್ತಿಯನ್ನು ಅಂತರ್ದಾನ ಮಾಡಿದ್ದಾರೆ. ಅದಮಾರು ಮಠವೆಂದರೆ ಭಗವಂತನ ಜ್ಞಾನ ಕೊಡುವ ಮಠ ಎಂದು ಆಶೀರ್ವಚನವಿತ್ತರು.
     
    ಪಲ್ಲಕ್ಕಿಯಲ್ಲಿ ಶ್ರೀಗಳು: ಜೋಡುಕಟ್ಟೆಯಿಂದ ರಥಬೀದಿಗೆ ಮೆರವಣಿಗೆಯಲ್ಲಿ ಅದಮಾರು ಮಠದ ಪಟ್ಟದ ದೇವರನ್ನು, ನಂತರದ ಪಲ್ಲಕ್ಕಿಯಲ್ಲಿ ಪರ್ಯಾಯ ಶ್ರೀ ಅದಮಾರು ಈಶಪ್ರಿಯತೀರ್ಥ ಸ್ವಾಮೀಜಿಯವರನ್ನು ಪಲ್ಲಕ್ಕಿಯಲ್ಲಿ ಭಕ್ತರು ಹೊತ್ತುಕೊಂಡು ಸಾಗಿದರು. ಕೃಷ್ಣಾಪುರ, ಪೇಜಾವರ, ಕಾಣಿಯೂರು, ಸೋದೆ ಶ್ರೀಗಳು ತೆರೆದ ವಾಹನದಲ್ಲಿರಿಸಿದ ಪಲ್ಲಕ್ಕಿಯಲ್ಲಿ ಕುಳಿತು ಸಾಗಿದರು. ಪೇಜಾವರ ಶ್ರೀಗಳ ಪಲ್ಲಕ್ಕಿ ಗರಿ ಅಲಂಕಾರ ಆಕರ್ಷಣೀಯವಾಗಿತ್ತು. ಪರ್ಯಾಯ ಅವಧಿ ಮುಗಿಸಿದ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಅದಮಾರು ಹಿರಿಯ ಸ್ವಾಮೀಜಿ ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರೂ ಮೆರವಣಿಗೆಯಲ್ಲಿ ಕಾಣಿಸಿಲ್ಲ.
     
    ಕೃಷ್ಣಮಠದಲ್ಲಿ ಭಕ್ತರ ದಂಡು: ಪರ್ಯಾಯ ಕಣ್ತುಂಬಿಕೊಳ್ಳಲು ದೂರದ ಊರಿನಿಂದ ಆಗಮಿಸಿದ ಸಾವಿರಾರು ಭಕ್ತರು ಕೃಷ್ಣನಗರಿಯಲ್ಲಿ ಬೀಡು ಬಿಟ್ಟಿದ್ದು, ಸಹಸ್ರ ಸಂಖ್ಯೆಯಲ್ಲಿ ಶನಿವಾರ ಮಠಕ್ಕೆ ಆಗಮಿಸಿ ಕೃಷ್ಣ ದರ್ಶನ ಮಾಡಿದರು. ಚಂದ್ರಮೌಳೇಶ್ವರ, ಅನಂತೇಶ್ವರ ದೇವಳಕ್ಕೂ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. ಕೃಷ್ಣಮಠ ಪರಿಸರ, ರಥಬೀದಿ, ಅದಮಾರು ಮಠದಲ್ಲಿ ಸಂಭ್ರಮದ ವಾತಾವರಣವಿದ್ದು, ಧಾರ್ಮಿಕ, ಸಾಂಪ್ರದಾಯಿಕ ಕಾರ್ಯಗಳು ಮೇಳೈಸಿದವು. ಆಪ್ತ ವಲಯದ ಭಕ್ತರು, ವಿದ್ವಾಂಸರು, ಗಣ್ಯರಿದ್ದರು. ಶನಿವಾರ ಶಾಲೆ ಕಾಲೇಜುಗಳಿಗೆ ರಜೆ ಇದ್ದುದರಿಂದ ನಗರ ಮತ್ತು ರಥಬೀದಿಯಲ್ಲಿ ಜನರ ಓಡಾಟ ಹೆಚ್ಚಿತ್ತು.
     
    50 ಸಾವಿರ ಮಂದಿಗೆ ಅನ್ನಪ್ರಸಾದ: ಅದಮಾರು ಪರ್ಯಾಯದ ಮೊದಲ ದಿನ ಬೆಳಗ್ಗಿನಿಂದ ಸಂಜೆಯವರೆಗೆ 9 ಕಡೆ ವಿಶೇಷ ಅನ್ನ ಸಂತರ್ಪಣೆ ನಡೆದಿದ್ದು, 50 ಸಾವಿರಕ್ಕೂ ಅಧಿಕ ಭಕ್ತರು ಭೋಜನ ಸ್ವೀಕರಿಸಿದರು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಠದಲ್ಲಿ ವಿಐಪಿಗಳ ಊಟದ ಹಾಲ್‌ನಲ್ಲಿ ಪ್ರಸಾದ ಸ್ವೀಕರಿಸಿದರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್ ಜತೆಗಿದ್ದರು.
     
    ಮೆರವಣಿಗೆ ವೈಭವ: ಪರ್ಯಾಯೋತ್ಸವ ಹಿನ್ನೆಲೆಯಲ್ಲಿ ರಾತ್ರಿಯಿಡೀ ಭಕ್ತರಿಂದ ಜಾಗರಣೆ ನಡೆಯಿತು. ಈ ಸಂದರ್ಭ ನಗರದ ಅಲ್ಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಶನಿವಾರ ಮುಂಜಾನೆ 2.30ಕ್ಕೆ ಜೋಡುಕಟ್ಟೆಯಲ್ಲಿ ಪರ್ಯಾಯ ಮೆರವಣಿಗೆ ಆರಂಭಗೊಂಡಿದ್ದು, 2 ಕಿ.ಮೀ. ಸಾಗಿ ರಥಬೀದಿ ತಲುಪಿದಾಗ 6 ಗಂಟೆಯಾಗಿತ್ತು. ವಿವಿಧ ಜಿಲ್ಲೆಗಳ, ಹೊರ ರಾಜ್ಯಗಳ ಹಾಗೂ ಸ್ಥಳೀಯ 60ಕ್ಕೂ ಅಧಿಕ ಜಾನಪದ ತಂಡಗಳು, ಪೌರಾಣಿಕ ಹಾಗೂ ಐತಿಹಾಸಿಕ ಹಾಗೂ ಸಾಮಾಜಿಕ ಸಂದೇಶ ಸಾರುವ ಟ್ಯಾಬ್ಲೋ, 1500ಕ್ಕೂ ಅಧಿಕ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಿ ವಿಶೇಷ ಮೆರುಗು ನೀಡಿದರು. ಅದಮಾರು ಶ್ರೀಗಳು ಹಾಗೂ ಇತರ ಯತಿಗಳು ಜೋಡುಕಟ್ಟೆಯಲ್ಲಿ ಕುಳಿತು ಮೆರವಣಿಗೆ ವೀಕ್ಷಿಸಿದರು.
     
    ಭದ್ರತೆಗೆ ಸಾವಿರ ಪೊಲೀಸರು: ಉಡುಪಿ ಜಿಲ್ಲಾ ಪೊಲೀಸರು ಗರಿಷ್ಠ ಭದ್ರತೆ ಒದಗಿಸಿದ್ದರು. ಅಲ್ಲಲ್ಲಿ ಚೆಕ್‌ಪೋಸ್ಟ್, ಸಿಸಿಕ್ಯಾಮರಾ, ಐದು ವಿಧ್ವಂಸಕ ಕೃತ್ಯ ಪತ್ತೆ ತಂಡ ನಿಯೋಜನೆ ಸಹಿತ ಬಿಗು ಬಂದೋಬಸ್ತ್ ಕಲ್ಪಿಸಲಾಗಿತ್ತು. ಒಬ್ಬರು ಎಸ್‌ಪಿ, ಎಎಸ್‌ಪಿ, 8 ಡಿವೈಎಸ್ಪಿ, 23ಪೊಲೀಸ್ ನಿರೀಕ್ಷಕರು, 65 ಪಿಎಸ್‌ಐ, 193 ಎಎಸ್‌ಐ, 289 ಎಚ್.ಸಿ ಹಾಗೂ 530 ಕಾನ್ಸ್‌ಟೆಬಲ್‌ಗಳ ಸಹಿತ 1110 ಅಧಿಕಾರಿ, ಸಿಬ್ಬಂದಿ, 300 ಗೃಹರಕ್ಷಕ ಸಿಬ್ಬಂದಿ, ಕೆಎಸ್‌ಆರ್‌ಪಿ 4 ತುಕಡಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ 10 ತುಕಡಿಗಳನ್ನು ನಿಯೋಜಿಸಲಾಗಿತ್ತು.
     
    ಪಲಿಮಾರು ಶ್ರೀಗಳ ಪ್ರವಾಸ: ತಮ್ಮ ಈ ಪರ್ಯಾಯಾವಧಿ ಪೂರೈಸಿದ ಪಲಿಮಾರು ಶ್ರೀಗಳು ಶನಿವಾರ ಸಾಯಂಕಾಲ ಪಡುಬಿದ್ರಿ ಸಮೀಪದ ಪಲಿಮಾರು ಮೂಲ ಮಠಕ್ಕೆ ತೆರಳಿ ವೇದವ್ಯಾಸ ದೇವರು, ಮುಖ್ಯ ಪ್ರಾಣ ದೇವರು ಹಾಗೂ ಗುರುಗಳಾದ ವಿದ್ಯಾಮಾನ್ಯ ತೀರ್ಥರ ವೃಂದಾವನ ದರ್ಶನ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts