ಉಡುಪಿ: ಇಲ್ಲಿನ ಸಂತೆಕಟ್ಟೆಯಲ್ಲಿ ಸುಸಜ್ಜಿತ ಸಂತೆ ಮಾರುಕಟ್ಟೆ ನಿರ್ಮಾಣವಾಗಿ ವರ್ಷ ಕಳೆದರೂ ಉದ್ಘಾಟನೆಯ ಭಾಗ್ಯ ದೊರೆತಿಲ್ಲ. ಗೋಪಾಲಪುರ ವಾರ್ಡ್‌ನ ಮೌಂಟ್ ರೋಸರಿ ಚರ್ಚ್ ಎದುರಿನ ವಿಶಾಲ ಜಾಗದಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಲಾಗಿದೆ. ಈ ಸಂತೆ ಮಾರುಕಟ್ಟೆ ವ್ಯವಸ್ಥಿತವಾಗಿ ನಿರ್ಮಾಣಗೊಂಡಿದ್ದು ಎತ್ತರದ ಕಟ್ಟೆಗಳು ಹಾಗೂ ಕಾಂಕ್ರೀಟ್ ನೆಲಹಾಸಿನಿಂದ ಪೂರ್ಣವಾಗಿ ಆಧುನೀಕರಣಗೊಂಡಿದೆ. ಕಾಮಗಾರಿ ಪೂರ್ಣಗೊಂಡು 9 ತಿಂಗಳು ಕಳೆದರೂ ಉದ್ಘಾಟನೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಉತ್ಸಾಹ ತೋರದಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. 17,500 ಚದರ ಅಡಿ ಪ್ರದೇಶದಲ್ಲಿ 99.5 ಲಕ್ಷ ರೂ. ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಾಣಗೊಂಡಿದೆ. ಏಕಕಾಲದಲ್ಲಿ 85 ಮಂದಿ ಕುಳಿತು ವ್ಯಾಪಾರ ನಡೆಸಬಹುದು. ಸಾರ್ವಜನಿಕರಿಗೆ, ವ್ಯಾಪಾರಿಗಳಿಗೆ ಸಾಕಷ್ಟು ಅನುಕೂಲಕರ ವ್ಯವಸ್ಥೆ ಇಲ್ಲಿದೆ. 2018ರಲ್ಲಿ ಇದರ ಶಿಲಾನ್ಯಾಸ ನೆರವೇರಿಸಲಾಗಿತ್ತು. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಗೃಹ, ಕೊಳಚೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ, ವಿದ್ಯುತ್ ದೀಪ, ಇಂಟರ್ ಲಾಕ್, ನೀರು ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಕುಡುಕರ ಹಾವಳಿ: ಸಂತೆ ಮಾರುಕಟ್ಟೆ ಕಟ್ಟಡ ಹಲವು ತಿಂಗಳುಗಳಿಂದ ಪಾಳು ಬಿದ್ದ ಕಾರಣದಿಂದ ಹಗಲು, ರಾತ್ರಿ ಕುಡುಕರಿಗೆ ಆಶ್ರಯತಾಣವಾಗಿದೆ. ಕೆಲವು ಅಪರಿಚಿತರು, ಹೊರ ಜಿಲ್ಲೆಯ ಕಾರ್ಮಿಕರು ಕಂಠಪೂರ್ತಿ ಮದ್ಯ ಸೇವಿಸಿ ಇಲ್ಲಿ ಮಲಗುತ್ತಾರೆ. ಕೂಗಾಟ, ದೊಡ್ಡ ದನಿಯಲ್ಲಿ ಮಾತನಾಡುವ ಮೂಲಕ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಈಗ ಹೆದ್ದಾರಿಯಲ್ಲಿಯೇ ಸಂತೆ: ಸಂತೆಕಟ್ಟೆ ವಾರದ ಸಂತೆಗೆ ಸಾಕಷ್ಟು ಹೆಸರು ಪಡೆದುಕೊಂಡಿದ್ದು, ಸುತ್ತಮುತ್ತ ಸಾಕಷ್ಟು ಗ್ರಾಮದ ಜನರು ಸೇರಿದಂತೆ ಉಡುಪಿ ನಗರ ಭಾಗದಿಂದಲೂ ಜನರು ಖರೀದಿಗಾಗಿ ಧಾವಿಸುತ್ತಾರೆ. ಪ್ರಸ್ತುತ ಕಟ್ಟಡ ಸೌಲಭ್ಯವಿಲ್ಲದೆ ಕೆಲವು ವರ್ಷಗಳಿಂದ ಸಂತೆಕಟ್ಟೆ ಜಂಕ್ಷನ್ ಸಮೀಪದ ರಸ್ತೆ, ಫುಟ್‌ಪಾತ್ ಮೇಲೆಯೆ ವ್ಯಾಪಾರ ನಡೆಯುವಂತಾಗಿದೆ. ವ್ಯಾಪಾರಿಗಳು ಸರ್ವೀಸ್ ರಸ್ತೆ ಸೇರಿದಂತೆ ಬಸ್ ನಿಲ್ದಾಣದ ಒಳಗೆ, ಹೊರಗೆ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಇದರಿಂದ ಭಾನುವಾರದ ಸಂಚಾರ ಸಮಸ್ಯೆ ಪ್ರಮುಖ ಕಾರಣವಾಗುತ್ತಿದೆ. ವಾಹನ ಓಡಾಟಕ್ಕೆ, ಸಾರ್ವಜನಿಕರಿಗೆ, ವ್ಯಾಪಾರಿಗಳಿಗೂ ಇದು ಸಾಕಷ್ಟು ಕಿರಿಕಿರಿಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಸಂತೆಕಟ್ಟೆ ಮಾರುಕಟ್ಟೆಗೆ ರಸ್ತೆ ಸಂಪರ್ಕ ಉತ್ತಮ ಪಡಿಸುವುದು ಮತ್ತು ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಬಾಕಿ ಇದೆ. ಕಾಮಗಾರಿಗಾಗಿ ಟೆಂಡರ್ ಕರೆಯಲಾಗಿದ್ದು, ಕೆಲಸ ಮುಗಿದ ಬಳಿಕ ಶೀಘ್ರ ಸಂತೆ ಮಾರುಕಟ್ಟೆ ಸಾರ್ವಜನಿಕರಿಗೆ, ವ್ಯಪಾರಿಗಳಿಗೆ ಮುಕ್ತವಾಗಲಿದೆ.
ಆನಂದ್ ಸಿ.ಕಲ್ಲೋಳಿಕರ್, ಪೌರಾಯುಕ್ತ, ನಗರಸಭೆ