ಮರಳಿಗಾಗಿ ಮತ್ತೆ ಹೋರಾಟ, 28ರಿಂದ ಅನಿರ್ದಿಷ್ಟಾವದಿ ಮುಷ್ಕರ

ಉಡುಪಿ: ಜಿಲ್ಲೆಯಲ್ಲಿ ಎಲ್ಲ 170 ಮಂದಿಗೆ ಮರಳು ತೆಗೆಯಲು ಪರವಾನಗಿ ನೀಡುವವರೆಗೆ ಜ.28ರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿರ್ದಿಷ್ಟಾವದಿ ಅಹೋರಾತ್ರಿ ಮುಷ್ಕರ ನಡೆಸಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಶುಕ್ರವಾರ ಬನ್ನಂಜೆ ಶಿವಗಿರಿ ಸಭಾಂಗಣದಲ್ಲಿ ನಡೆದ ಸರ್ವ ಸಂಘಟನೆ ಮರಳಿಗಾಗಿ ಹೋರಾಟ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಹೊಸದಾಗಿ ಗುರುತಿಸಿರುವ ಮರಳು ದಿಬ್ಬಗಳಲ್ಲಿ ಮರಳು ತೆರವಿಗೆ ಅನುಮತಿ ಪಡೆದು ಜಿಲ್ಲಾಡಳಿತವು ನೋಂದಣಿಯಾಗಿರುವ ಎಲ್ಲ 170 ಮಂದಿಗೆ ಪರವಾನಗಿ ನೀಡಲೇ ಬೇಕು. ನಮ್ಮ ಹೋರಾಟ ಜಿಲ್ಲಾಡಳಿತವಿರುದ್ಧ. ಪಕ್ಷಾತೀತವಾಗಿ ಯಾವ ವ್ಯಕ್ತಿ ವಿರುದ್ಧ ಹೋರಾಟ ಮಾಡದೇ ಪೂರ್ಣ ಪ್ರಮಾಣದಲ್ಲಿ ಮರಳುಗಾರಿಕೆ ಪ್ರಾರಂಭವಾಗುವವರೆಗೆ ಶಾಂತಿಯುತ ಹೋರಾಟ ನಡೆಸಲಿದ್ದೇವೆ ಎಂದರು.
ಜಿಪಂ ಅಧ್ಯಕ್ಷ ದಿನಕರ ಬಾಬು, ಬಿಲ್ಡರ್ಸ್‌ ಅಸೋಸಿಯೇಶನ್‌ನ ಜೆರ‌್ರಿ ವಿನ್ಸೆಂಟ್ ಡಯಾಸ್, ಜಿಲ್ಲಾ ಲಾರಿ ಮಾಲೀಕರ ಸಂಘ ಅಧ್ಯಕ್ಷ ಪ್ರವೀಣ್ ಸುವರ್ಣ, ಪ್ರಮುಖರಾದ ಗುಣಕರ ಶೆಟ್ಟಿ, ಗಂಗಾಧರ ಶೆಟ್ಟಿ, ಆರ್. ಅಶ್ವತ್, ಸಬ್ಲಾಡಿ ಮಂಜಯ್ಯ ಶೆಟ್ಟಿ, ಸತ್ಯರಾಜ್ ಭಿರ್ತಿ, ರಾಘವೇಂದ್ರ ಶೆಟ್ಟಿ, ಚಂದ್ರ ಪೂಜಾರಿ ಸಭೆಯಲ್ಲಿದ್ದರು.