ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗೆ 10 ವರ್ಷ ಜೈಲು

ಉಡುಪಿ: ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಸಿನ ಬುದ್ದಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಉಡುಪಿ ಪೆರಂಪಳ್ಳಿ ನಿವಾಸಿ ಅರುಣ್ ಆಚಾರಿ(32) ಎಂಬಾತನಿಗೆ ಜಿಲ್ಲಾ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಚಂದ್ರಶೇಖರ್ ಎಂ.ಜೋಶಿ ಅವರು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ಮೇಲೆ 3 ಪ್ರಕರಣಗಳು ದಾಖಲಾಗಿದ್ದು, ಅಪಹರಣಕ್ಕೆ ಸಂಬಂಧಿಸಿ 7 ವರ್ಷ ಜೈಲು ಹಾಗೂ 30 ಸಾವಿರ ರೂ. ದಂಡ, ಅತ್ಯಾಚಾರಕ್ಕೆ ಸಂಬಂಧಿಸಿ 10 ವರ್ಷ ಜೈಲು ಹಾಗೂ 30 ಸಾವಿರ ರೂ. ದಂಡ, ಪೋಕ್ಸೋ ಪ್ರಕರಣದಲ್ಲಿ 10 ವರ್ಷ ಜೈಲು ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ. ದಂಡ ಪಾವತಿಸಲು ವಿಫಲನಾದಲ್ಲಿ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

30 ಸಾಕ್ಷಿಗಳ ವಿಚಾರಣೆ: ಪ್ರಕರಣದ ಒಟ್ಟು 35 ಸಾಕ್ಷಿಗಳ ಪೈಕಿ 30 ಸಾಕ್ಷಿಗಳ ವಿಚಾರಣೆ ನಡೆಸಿದ್ದು, ವಾದ, ಪ್ರತಿವಾದ ಆಲಿಸಿದ ಪೋಕ್ಸೋ ವಿಶೇಷ ನ್ಯಾಯಾಲಯ ನ್ಯಾಯಾಧೀಶರು ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು ಆತನನ್ನು ದೋಷಿ ಎಂದು ಬುಧವಾರ ತೀರ್ಪು ನೀಡಿದ್ದರು. ಜಿಲ್ಲಾ ವಿಶೇಷ ಸರ್ಕಾರಿ ಅಭಿಯೋಜಕ ವಿಜಯ ವಾಸು ಪೂಜಾರಿ ವಾದ ಮಂಡಿಸಿದ್ದರು.

ಬೈಕ್‌ನಲ್ಲಿ ಕರೆದೊಯ್ದು ಅತ್ಯಾಚಾರ: ಮರದ ಕೆಲಸ ಮಾಡುತ್ತಿದ್ದ ಅರುಣ್ ಆಚಾರಿ ತನ್ನ ಸಹೋದ್ಯೋಗಿಯ 15ರ ಹರೆಯದ ಪುತ್ರಿಯನ್ನು 2016ರ ಜುಲೈ 16ರಂದು ಶಾಲೆಗೆ ಬಿಡುವ ನೆಪದಲ್ಲಿ, ತನ್ನ ಪೆರಂಪಳ್ಳಿಯ ಮನೆಗೆ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದನು. ಈ ಬಗ್ಗೆ ಸಂತ್ರಸ್ತ ಬಾಲಕಿ ತಂದೆ ಮಣಿಪಾಲ ಠಾಣೆಗೆ ದೂರು ನೀಡಿದ್ದರು. ಅದೇ ದಿನ ಆರೋಪಿಯನ್ನು ಬಂಧಿಸಿದ ಅಂದಿನ ಮಣಿಪಾಲ ಪೊಲೀಸ್ ನಿರೀಕ್ಷಕ ಸಂಪತ್ ಕುಮಾರ್ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.