ಅಣ್ಣಾಮಲೈ ರಾಜೀನಾಮೆಗೆ ಉಡುಪಿ ಜನತೆ ಬೇಸರ

ಉಡುಪಿ: ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಜನರಿಗೆ ಹತ್ತಿರವಾಗಿದ್ದ ಐಪಿಎಸ್ ಅಧಿಕಾರಿ ಅಣ್ಣಾಮಲೈ ಭಾರತೀಯ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿರುವುದು ಉಡುಪಿ ಜನತೆಗೆ ಬೇಸರ ತರಿಸಿದೆ.

ಅಣ್ಣಾಮಲೈ ಅವರು ರಾಜೀನಾಮೆ ನೀಡಿದ ಬಳಿಕ ಬರೆದ ಭಾವನಾತ್ಮಕ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜೀನಾಮೆ ಹಿಂತೆಗೆದುಕೊಂಡು ಪೊಲೀಸ್ ಸೇವೆ ಮುಂದುವರಿಸುವಂತೆ ಜನರು ಅಣ್ಣಾಮಲೈ ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಅಣ್ಣಾಮಲೈ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಒಂದೂವರೆ ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ ಕೆ.ಅಣ್ಣಾಮಲೈ 2013ರ ಸೆಪ್ಟೆಂಬರ್ 4ರಂದು ಉಡುಪಿ ಜಿಲ್ಲೆಯ ಕಾರ್ಕಳ ವಿಭಾಗದ ಎಎಸ್‌ಪಿಯಾಗಿ ಕರ್ತವ್ಯ ಆರಂಭಿಸಿದ್ದರು. ಕಾರ್ಕಳ ನಗರ, ಗ್ರಾಮಾಂತರ, ಕಾಪು ಮತ್ತು ಪಡುಬಿದ್ರಿ ಪೊಲೀಸ್ ಠಾಣೆಗೆ ಐಎಸ್‌ಒ ಮಾನ್ಯತೆ ಪತ್ರ ತಂದುಕೊಟ್ಟಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಕುಂದಾಪುರ ವಿಭಾಗದ ಎಎಸ್‌ಪಿಯಾಗಿ ಹೆಚ್ಚುವರಿ ಚಾರ್ಜ್ ಕೂಡ ಹೊಂದಿದ್ದರು. 2015ರ ಜನವರಿ 1ರಂದು ಉಡುಪಿ ಜಿಲ್ಲಾ ಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡರು. ಜಿಲ್ಲೆಯಲ್ಲಿ ಹಲವು ಸಮಾಜಘಾತುಕ ಕೃತ್ಯಗಳಿಗೆ ಕಡಿವಾಣ ಹಾಕಿದ್ದರು. ಯುವ ಸಮುದಾಯದಲ್ಲಿ ಕಾನೂನು ಪ್ರಜ್ಞೆ, ಹೆಲ್ಮೆಟ್ ಜಾಗೃತಿ ಮೂಡಿಸಿದ್ದರು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದಲೇ ಉಡುಪಿಯ ‘ಸಿಂಗಂ’ ಎಂಬ ಬಿರುದು ಪಡೆದಿದ್ದರು.

ಶ್ವಾನಕ್ಕೆ ಬಹುಮಾನ ನೀಡಿದ್ದ ಅಣ್ಣಾಮಲೈ
ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದ 2015ರಲ್ಲಿ ನಡೆದಿದ್ದ ಬೈಂದೂರಿನ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವ ಸುಳಿವು ನೀಡಿದ್ದ ಜಿಲ್ಲಾ ಪೊಲೀಸ್ ಶ್ವಾನ ಅರ್ಜುನ(ನಿವೃತ್ತಿ)ನಿಗೆ ಅಣ್ಣಾಮಲೈ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಂದಿನ ಎಸ್‌ಪಿ ಅಣ್ಣಾಮಲೈ ಅರ್ಜುನಗೆ 6 ಸಾವಿರ ರೂ. ನಗದು ಬಹುಮಾನ ನೀಡಿದ್ದರು. ಅರ್ಜುನನ ಬಗ್ಗೆ ಕಾಳಜಿ ವಹಿಸುವಂತೆ, ಪ್ರೀತಿಯಿಂದ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಮೂರೇ ದಿನದಲ್ಲಿ ಅಂದಿನ ಎಸ್‌ಪಿ ಅಣ್ಣಾಮಲೈ ನಿರ್ದೇಶನದಲ್ಲಿ ತನಿಖಾಧಿಕಾರಿಗಳ ತಂಡ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದರು.

ಉಡುಪಿ ಬಸ್ ನಿಲ್ದಾಣಕ್ಕೆ ಬಂದಿಳಿದಾಗ ನನ್ನ ಕೈನಲ್ಲಿ ಎರಡು ಬ್ಯಾಗ್ ಮಾತ್ರ ಇತ್ತು. ಯಾರ ಪರಿಚಯ ಇರಲಿಲ್ಲ. ಭಾಷೆಯೂ ಸರಿ ಬರುತ್ತಿರಲಿಲ್ಲ. ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಜನತೆ ನನ್ನ ಬಗ್ಗೆ ಪ್ರೀತಿ ಹೊಂದಿದೆ. ಎಲ್ಲರಿಗೂ ನನ್ನ ಧನ್ಯವಾದ.
– ಅಣ್ಣಾಮಲೈ, ಐಪಿಎಸ್ ಅಧಿಕಾರಿ

ಅಣ್ಣಾಮಲೈ ಅವರಿಗೆ ಒಳ್ಳೆಯದಾಗಲಿ. ರಾಜಕೀಯ ಕ್ಷೇತ್ರ ಶುದ್ಧಿ ಮಾಡಲು ಅವರು ಸಮರ್ಥರು. ಪೊಲೀಸ್ ಅಧಿಕಾರಿಯಾಗಿ ಅಣ್ಣಾಮಲೈ ಸೋಲು ಕಾಣದ ವ್ಯಕ್ತಿ, ರಾಜಕೀಯದಲ್ಲಿ ಎಲ್ಲರ ಪ್ರೀತಿ ಗಳಿಸಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಬಿಡಬಾರದು ಎಂಬುದು ನಮ್ಮ ಚಿಕ್ಕ ಆಸೆ.
-ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಪರ್ಯಾಯ ಪಲಿಮಾರು ಮಠ